ಬೆಂಗಳೂರು:ಎಲ್ಲ ಅವಕಾಶಗಳ ಹೊರತಾಗಿಯೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲು ಬಿಜೆಪಿ ಹೈಕಮಾಂಡ್ ರಣತಂತ್ರ ರೂಪಿಸುತ್ತಿದೆ. ಅದರ ಭಾಗವಾಗಿ ರಾಜ್ಯ ಬಿಜೆಪಿಯ ಹಿರಿಯ ನಾಯಕ ಹಾಗೂ ವೀರಶೈವ ಲಿಂಗಾಯತ ಸಮುದಾಯದ ಅಗ್ರಗಣ್ಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಭೇಟಿ ಮಾಡಿ ಮಾತುಕತೆ ನಡೆಸಿದರು. ಮೂಲಗಳ ಪ್ರಕಾರ ಶೆಟ್ಟರ್ಗೆ ಖೆಡ್ಡಾ ಸಿದ್ದಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಕುಮಾರಪಾರ್ಕ್ನಲ್ಲಿರುವ ಪಕ್ಷದ ಹಿರಿಯ ನಾಯಕ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಅಧಿಕೃತ ನಿವಾಸ ಕಾವೇರಿಗೆ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಭೇಟಿ ನೀಡಿದರು. ಪ್ರಸ್ತುತ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಸಿದರು. ವಿಶೇಷವಾಗಿ ಪಕ್ಷದಲ್ಲಿನ ಬಂಡಾಯದ ವಿಚಾರದ ಕುರಿತು ಚರ್ಚೆ ನಡೆಸಲಾಯಿತು. ಕಳೆದ ರಾತ್ರಿ ಅಮಿತ್ ಶಾ ನಡೆಸಿದ ಸಭೆಯಲ್ಲಿ ಚರ್ಚಿತವಾದ ವಿಷಯಗಳ ಕುರಿತು ವಿಸ್ತೃತವಾದ ಚರ್ಚೆ ನಡೆಸಲಾಯಿತು.
ಎಲ್ಲ ಅವಕಾಶಗಳನ್ನು ಕೊಟ್ಟು ಈಗಲೂ ಹೆಚ್ಚಿನ ಅವಕಾಶದ ಭರವಸೆ ನೀಡಿದ ಹೊರತಾಗಿಯೂ ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ನಿಲುವಿಗೆ ಅಮಿತ್ ಶಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನಸಂಘದ ಕಾಲದಿಂದಲೂ ಪಕ್ಷದ ಜೊತೆ ಬೆಳೆದು ಬಂದ ಶೆಟ್ಟರ್ ಕುಟುಂಬ ಪಕ್ಷ ನಿಷ್ಟೆಗೆ ಹೆಸರಾಗಿತ್ತು. ಆದರೆ, ಕೇವಲ ಒಂದು ಟಿಕೆಟ್ ವಿಚಾರಕ್ಕೆ ಇಂತಹ ನಿರ್ಧಾರ ತೆಗೆದುಕೊಳ್ಳುವ ಮೂಲಕ ಪಕ್ಷದ ವಿರುದ್ಧ ನಿಲುವು ತಳೆದಿದ್ದು ಪಕ್ಷದ ಬಲ ಏನು ಎನ್ನುವುದನ್ನು ಚುನಾವಣೆಯಲ್ಲಿ ಅವರಿಗೆ ತೋರಿಸಬೇಕು ಎಂದು ಸೂಚಿಸಲಾಗಿದೆ.
ಅಮಿತ್ ಶಾ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ನಾಯಕರು ಕಾರ್ಯಪ್ರವೃತ್ತರಾಗಿದ್ದು, ಖುದ್ದು ಬಿ.ಎಲ್ ಸಂತೋಷ್ ಅಖಾಡಕ್ಕೆ ದುಮುಕಿದ್ದಾರೆ. ವಿಶೇಷ ಕಾರ್ಯತಂತ್ರ ಹೆಣೆಯಲು ಮುಂದಾಗಿದ್ದಾರೆ. ಇದಕ್ಕೆ ಪೂರಕವಾಗಿ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದಾರೆ. ಸಂಘಟನೆ ಹಿನ್ನೆಲೆಯ ಮಹೇಶ್ ಟೆಂಗಿನಕಾಯಿ ಪಕ್ಷದ ಅಭ್ಯರ್ಥಿಯಾಗಿದ್ದು, ಯಾವ ಕಾರಣಕ್ಕೂ ಅವರಿಗೆ ಹಿನ್ನಡೆಯಾಗಬಾರದು ವ್ಯಕ್ತಿಗಿಂತ ಸಂಘಟನೆ ಮುಖ್ಯ ಎನ್ನುವುದನ್ನು ತೋರಿಸಬೇಕು ಅದಕ್ಕೆ ಸಹಕಾರ ನೀಡಬೇಕು.