ಬೆಂಗಳೂರು:ರಾಮ,ಕೃಷ್ಣರ ಬಗ್ಗೆ ಬೈರಪ್ಪನವರು ಹೇಳಿದರೆ ಸುಮ್ಮನಿರುತ್ತೀರಿ. ಅದೇ ಭಗವಾನ್ ಮಾತನಾಡಿದರೆ ಮಸಿ ಬಳಿಯುತ್ತೀರಿ. ಇಂತಹ ಧೋರಣೆ ಸರಿಯಲ್ಲ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್‌ನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಕಿಡಿ ಕಾರಿದ್ದಾರೆ.
ಸಾಹಿತಿ ಎಸ್.ಎಲ್.ಬೈರಪ್ಪ ಅವರು ರಾಮ ದೇವರಲ್ಲ, ಕೇವಲ ರಾಜ ಎಂದು ಹೇಳಿದ್ದಾರೆ. ರಾಮ,ಕೃಷ್ಣರ ಬಗ್ಗೆ ಮಾತಾಡುತ್ತಾರೆ. ದ್ರೌಪದಿ ಬಗ್ಗೆ ಬರೆಯುತ್ತಾರೆ. ಅವರು ನಿಮ್ಮವರು ಎಂದು ಸುಮ್ಮನಿರುತ್ತಾರೆ. ಅದೇ ಭಗವಾನ್ ಹೇಳಿದರೆ ಮಸಿ ಬಳಿಯುತ್ತಾರೆ. ಇಂತಹ ದ್ವಂದ್ವ ನೀತಿ ಯಾಕೆ?, ಸಂಘ ಪರಿವಾರದವರು ಮಾತನಾಡಿದರೆ ಸುಮ್ಮನಿದ್ದು, ಬೇರೆಯವರು ಮಾತನಾಡಿದರೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.
ಬೈರಪ್ಪ ಅವರ ಪರ್ವ ಕಾದಂಬರಿಯನ್ನು ನಾಟಕ ಮಾಡಲು 1 ಕೋಟಿ ರೂ ಕೊಡಲಾಗುತ್ತಿದೆ. ನಿಮ್ಮ ಸಾಹಿತಿಗೆ ನೀವೇ ಪ್ರಶಸ್ತಿ ಕೊಡಿಸಿ ನಾಟಕಕ್ಕೂ ಹಣ ಕೊಟ್ಟಿದ್ದೀರಿ ಎಂದು ಬೈರಪ್ಪ ಅವರ ನಾಟಕವನ್ನು ಪ್ರಶ್ನಿಸುವ ಅರ್ಥದಲ್ಲಿ ಪ್ರಸ್ತಾಪ ಮಾಡಿದರು. ಇದಕ್ಕೆ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದರು. ಅವರ ನಾಟಕ ಸರಿಯಿಲ್ಲ ಎನ್ನುವ ಹಕ್ಕು ನಿಮಗಿಲ್ಲ, ಜನಮಾನ್ಯರ ಬಗ್ಗೆ ಬರೆದಿದ್ದಾರೆ, ಅವರ ಕಾದಂಬರಿ, ಬರಹಕ್ಕೆ ಪ್ರಶಸ್ತಿ ಸಿಕ್ಕಿದೆ. ಅವರ ಒಂದು ಶಬ್ದ ಹಿಡಿದು ಈ ರೀತಿ ಹೇಳಿದರೆ ಸರಿಯಲ್ಲ ಎಂದರು.