ಬೆಂಗಳೂರು:ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ರಾಜ್ಯಸಭಾ ಸದಸ್ಯ ಬಿ ಕೆ ಹರಿಪ್ರಸಾದ್ ತಿಳಿಸಿದ್ದಾರೆ.
ಇಂದು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿರುವುದು ನನಗಲ್ಲ, ಹೈಕಮಾಂಡ್ ಮುಂದೆ. ರಾಜಕಾರಣ ಮಾಡಬೇಕಾದ್ದು ಮಾಧ್ಯಮಗಳ ಮುಂದಲ್ಲ. ರಾಜಕಾರಣ ಅದರ ಪಾಡಿಗೆ ಅದು ನಡೆಯುತ್ತಿರುತ್ತದೆ ಎಂದರು.
ಮಾಧ್ಯಮಗಳಲ್ಲಿ ಹಲವು ವಿಚಾರಗಳು ಬರುತ್ತಿದ್ದವು. ಅದಕ್ಕೆಲ್ಲ ತೆರೆ ಎಳೆಯೋಕೆ ಬಂದು ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ್ದೇನೆ. ನಾವು ಉಪ ಚುನಾವಣೆ ಸೋತಿದ್ದೇವೆ, ಸೋಲು ಸೋಲೇ.. ಯಾರು ಕೆಲಸ ಮಾಡಿದ್ದಾರೆ, ಮಾಡಿಲ್ಲ ಅನ್ನೋದು ಗೊತ್ತಿರುವುದೇ.. ಕೆಲಸ ಮಾಡೋದು ಬಿಡೋದು ಬೇರೆ ವಿಚಾರ. ಆದರೆ, ಸೋತಿದ್ದೇವೆ, ಆತ್ಮಾವಲೋಕನ ಮಾಡಿಕೊಂಡು ಮುಂದೆ ನಡೆಯುತ್ತಿರಬೇಕಷ್ಟೇ ಎಂದು ವಿವರಿಸಿದರು.
ಮುಂದೆ ಯಾರನ್ನು ನೇಮಕ ಮಾಡಬೇಕು ಅನ್ನೋದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಹೈಕಮಾಂಡ್ ಏನು ಹೇಳತ್ತೋ ಅದನ್ನು ಮಾಡ್ತೇವಷ್ಟೇ ಎಂದು ತಿಳಿಸಿದರು.