ಬೆಂಗಳೂರು : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಸೋಮವಾರ ವಿಧಾನಸಭೆಯಲ್ಲಿ ಹೋರಾಟ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸ್ವಾಮೀಜಿಯ ಅಮಾನವೀಯ ಕೊಲೆ ಖಂಡಿಸಿ ಅನ್ನ, ನೀರು ಬಿಟ್ಟು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹುಬ್ಬಳ್ಳಿಯ ವರೂರು ಕ್ಷೇತ್ರದ ಶ್ರೀ ಗುಣಧರ ನಂದಿ ಮಹಾರಾಜರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಈ ಘಟನೆಯನ್ನು ಉಗ್ರವಾಗಿ ಖಂಡಿಸಿರುವುದಾಗಿ ತಿಳಿಸಿದರು. ಉನ್ನತ ಮಟ್ಟಡ ತನಿಖೆ ನಡೆಸುವಂತೆ ಸರ್ಕಾರಕ್ಕೆ ಆಗ್ರಹಿಸಿರುವುದಾಗಿ ಹೇಳಿದರು. ಇನ್ನೊಂದೆಡೆ, ಹತ್ಯೆಯನ್ನು ಖಂಡಿಸಿ ಸೋಮವಾರ ವಿಧಾನಸಭೆಯಲ್ಲಿ ಹೋರಾಟ ಮಾಡುವುದಾಗಿ ಪತ್ರಿಕಾ ಹೇಳಿಕೆ ಮೂಲಕ ಮಾಹಿತಿ ನೀಡಿದ್ದಾರೆ.
ಸಮಗ್ರ ತನಿಖೆಗೆ ಕಟೀಲ್ ಒತ್ತಾಯ :ಮುನಿಗಳ ಭೀಕರ ಹತ್ಯೆ ಖಂಡನೀಯ. ಘಟನೆ ಮನಸ್ಸಿಗೆ ಆಘಾತ ತಂದಿದೆ. ರಾಜ್ಯ ಸರ್ಕಾರ ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸಾಧು, ಸಂತರು ಶಾಂತಿಪ್ರಿಯರು. ದೇಶದ ಒಳಿತು, ಸಂಸ್ಕಾರ, ಸನಾತನ ಧರ್ಮದ ವಿಚಾರವಾಗಿ ಮಾರ್ಗದರ್ಶನ ನೀಡುವವರು. ಅಂತಹ ಸಂತರನ್ನು ಹೇಯವಾಗಿ ಕೊಲೆ ಮಾಡಿರುವುದನ್ನು ಸಮಾಜ ಒಪ್ಪಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಜೈನ ಮುನಿ ಹತ್ಯೆ ಪ್ರಕರಣ ಕುರಿತು ಸದನದಲ್ಲಿ ಚರ್ಚೆ ಮಾಡಲಾಗುವುದು: ಶಾಸಕ ಗಣೇಶ ಹುಕ್ಕೇರಿ
ಜೈನ್ ಮುನಿ ಕಾಮಕುಮಾರ ನಂದಿ ಸ್ವಾಮೀಜಿ ಹತ್ಯೆ ಪ್ರಕರಣದ ಬಗ್ಗೆ ಸದನದಲ್ಲಿ ದನಿ ಎತ್ತುತ್ತೇವೆ ಎಂದು ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಹೇಳಿದರು. ಚಿಕ್ಕೋಡಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ನಾನು ಸ್ಥಳೀಯ ಶಾಸಕನಾಗಿ ಪ್ರಕರಣದ ಕುರಿತು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು. ಈ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು. 4 ಗಂಟೆಗಳಲ್ಲಿ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಈ ಹತ್ಯೆಯನ್ನು ಪಕ್ಷಾತೀತವಾಗಿ ಖಂಡಿಸುತ್ತೇವೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಶಾಸಕರು ಆಗ್ರಹಿಸಿದರು.
ಎಲ್ಲ ಆಯಾಮಗಳಲ್ಲೂ ತನಿಖೆ :ಹಿರೇಕೋಡಿ ಗ್ರಾಮದ ನಂದಿ ಆಶ್ರಮಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಜೈನ ಸಮುದಾಯದ ಮುಖಂಡರ ಜೊತೆಗೆ ಅವರು ಸುದೀರ್ಘ ಚರ್ಚೆ ನಡೆಸಿದ್ದಾರೆ.