ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನನ್ನು ಸೋಲಿಸಲು ತಾನೇ ಟೊಂಕ ಕಟ್ಟಿ ನಿಂತಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು ಕೆಸಿಆರ್ ಜೊತೆ 500 ಕೋಟಿ ರೂ. ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಹೇಳಿಕೆಯನ್ನು ಉಲ್ಲೇಖಿಸುತ್ತಾ ರಾಜ್ಯ ಬಿಜೆಪಿ ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನನ್ನು ಸೋಲಿಸಲು ತಾನೇ ಟೊಂಕ ಕಟ್ಟಿ ನಿಂತಿದೆ. ಈ ಬಗ್ಗೆ ಕಾಂಗ್ರೆಸ್ ತೆಲಂಗಾಣ ಅಧ್ಯಕ್ಷರಾದ ರೇವಂತ್ ರೆಡ್ಡಿ ಕಳವಳ ವ್ಯಕ್ತಪಡಿಸಿದ್ದಾರೆ. ಕೆಸಿಆರ್ ಜತೆ 500 ಕೋಟಿಗೆ ಒಳಒಪ್ಪಂದ ಮಾಡಿಕೊಂಡು ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.
ತಿಂಗಳ ಹಿಂದೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ತೆಲಂಗಾಣಕ್ಕೆ ಹೋಗಿ ಕೆಸಿಆರ್ ಭೇಟಿ ಮಾಡಿ ಬಂದಿದ್ದರು. ವ್ಯವಹಾರಸ್ಥ ಜಮೀರ್ ಅವರು ರಾಜಕೀಯ ಚತುರರು. ಮಾತೃ ಪಕ್ಷಕ್ಕೆ ಚಳ್ಳೆ ಹಣ್ಣು ತಿನ್ನಿಸಿಯೇ ಕಾಂಗ್ರೆಸ್ ಸೇರಿದವರು. ಆದರೆ ಡಿ.ಕೆ.ಶಿವಕುಮಾರ್ ಎದುರು ಜೀ ಹುಜೂರ್ ಎಂದು ನಿಲ್ಲುವ ವ್ಯಕ್ತಿಯಲ್ಲ ಎಂದು ಕಿಡಿ ಕಾರಿದೆ. ಜಮೀರ್ ಅಹಮ್ಮದ್ ತೆಲಂಗಾಣಕ್ಕೆ ಹೋಗಿ ಬಂದದ್ದು, ರೇವಂತ್ ರೆಡ್ಡಿ ಹೇಳಿಕೆಯ ನಂತರ ಹಠಾತ್ತಾಗಿ ಸಿದ್ದರಾಮಯ್ಯ ಭೇಟಿ ಮಾಡಿದ್ದನ್ನು ಕಾಣುವಾಗ ಅಲ್ಲೊಂದು ಗುಪ್ತ ವ್ಯವಹಾರ ನಡೆದಂತೆ ಕಾಣುತ್ತದೆ.
ಒಡೆದು ಆಳುವ ನೀತಿ ಪರಿಪಾಲಿಸಿದರೆ ಸ್ವತಃ ಒಡೆಯುವುದು ಖಚಿತ ಎಂಬುದಕ್ಕೆ ಕಾಂಗ್ರೆಸ್ಸೇ ಉದಾಹರಣೆ ಎಂದು ಆರೋಪಿಸಿದೆ. ಆದರೆ ಡಿಕೆಶಿ ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಅವರ ಆಪ್ತ ರೇವಂತ್ ರೆಡ್ಡಿ ಒಳ ಒಪ್ಪಂದದ ವಿವರ ಹೊರಹಾಕಿದ್ದಾರೆ. ಇಂಥ ತೆರೆಮರೆಯ ಕಸರತ್ತು ಮಾಡುವ ಪಕ್ಷಗಳು ಯಾವತ್ತಿದ್ದರೂ ಅಭಿವೃದ್ಧಿ ವಿರೋಧಿ ಎಂಬುದನ್ನು ಇತಿಹಾಸವೇ ತಿಳಿಸುತ್ತದೆ. ಹಾಗಾಗಿ ಮತದಾರರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದೆ.