ಬೆಳಗಾವಿ/ಬೆಂಗಳೂರು:1970 ರಲ್ಲಿ ಇಂದಿರಾ ಗಾಂಧಿ ಸರ್ಕಾರ ವೀರ ಸಾವರ್ಕರ್ ಅಂಚೆ ಚೀಟಿ ಬಿಡುಗಡೆ ಮಾಡಿತ್ತು. ಸಾವರ್ಕರ್ ಕುರಿತು ಡಾಕ್ಯುಮೆಂಟರಿ ನಿರ್ಮಾಣಕ್ಕಾಗಿ ಸಾವರ್ಕರ್ ಸ್ಮಾರಕ ಸಮಿತಿಗೆ ಸ್ವತಃ ಇಂದಿರಾ ಗಾಂಧಿ ದೇಣಿಗೆ ನೀಡಿದ್ದರು. ಕಾಂಗ್ರೆಸಿನ ಇತಿಹಾಸ ಪ್ರಜ್ಞೆ ಪ್ರಧಾನಮಂತ್ರಿ ಬದಲಾದಂತೆ ಬದಲಾಗುವುದೇ? ಎಂದು ಸುವರ್ಣಸೌಧದ ಅಸೆಂಬ್ಲಿ ಹಾಲ್ನಲ್ಲಿ ಸಾವರ್ಕರ್ ಫೋಟೋ ಹಾಕಿದ್ದನ್ನು ವಿರೋಧಿಸಿದ ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು ನೀಡಿದೆ.
ಅಸೆಂಬ್ಲಿ ಹಾಲ್ನಲ್ಲಿ ಸಾವರ್ಕರ್ ಫೋಟೋ ಅಳವಡಿಕೆ ಮಾಡಿದ್ದನ್ನು ಖಂಡಿಸುತ್ತಿರುವ ಕಾಂಗ್ರೆಸ್ ನಾಯಕರ ಮುಂದೆ ಸರಣಿ ಟ್ವೀಟ್ ಮೂಲಕ ಬಿಜೆಪಿ ಸರಣಿ ಪ್ರಶ್ನೆ ಮಾಡಿದೆ. ಸಾವರ್ಕರ್ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ಖುದ್ದು ಸಾವರ್ಕರ್ ಹೋರಾಟವನ್ನು ಕೊಂಡಾಡಿ ಅವರೊಬ್ಬ ಅದ್ಭುತ ಸ್ವಾತಂತ್ರ್ಯ ಹೋರಾಟಗಾರ ಎಂದು ಶ್ಲಾಘಿಸಿ ಪತ್ರ ಬರೆದಿದ್ದರು. ಇದರ ಜೊತೆಗೆ ವೀರ ಸಾವರ್ಕರ್ ನಿಧಿಗೆ ವೈಯುಕ್ತಿಕವಾಗಿ 11,000 ರೂಪಾಯಿ ದೇಣಿಗೆ ಕೂಡಾ ನೀಡಿದ್ದರು.
ವೀರ ಸಾವರ್ಕರ್ ಬಗ್ಗೆ ಕಾಂಗ್ರೆಸ್ಸಿಗೆ ವಿರೋಧ ಏಕೆ:ಸಾವರ್ಕರ್ ಅಸ್ಪೃಶ್ಯತಾ ನಿವಾರಣೋಪಾಯಗಳು ಅಂಬೇಡ್ಕರ್ ಅವರಿಗೆ ಪ್ರೇರಣೆಯಾಗಿತ್ತು, ಆದರೆ ಕಾಂಗ್ರೆಸ್ಸಿಗರಿಗೆ ಆಗಲೇ ಇಲ್ಲ! ಅಸ್ಪೃಶ್ಯತೆ ನಿವಾರಿಸಲು ನನ್ನ ಆಶಯಕ್ಕನುಗುಣವಾಗಿ ಸಮಾಜದೊಳಗಿದ್ದು ಶ್ರಮಿಸುತ್ತಿರುವ ಕೆಲವೇ ಕೆಲವು ಮಂದಿಯಲ್ಲಿ ಸಾವರ್ಕರ್ ಕೂಡಾ ಒಬ್ಬರು ಎಂದು ಅಂಬೇಡ್ಕರ್ ಕೊಂಡಾಡಿದ್ದರು, ತಾಯಿ ಭಾರತಿಗೆ ಕನ್ನಡದಾರತಿ ಎತ್ತುವೆ ಎಂದ ಆಲೂರು ವೆಂಕಟರಾಯರಿಗೆ, ಭಾರತ ಜನನಿಯ ತನುಜಾತೆ ಎಂದ ಕುವೆಂಪು ಅವರಿಗೆ ಭಾಷೆಯಲ್ಲ, ಕಾವ್ಯವೇ ನವಮೇಘರೂಪ ಎಂದ ಬೇಂದ್ರೆಯವರಿಗೆ ಪ್ರೇರಣೆಯಾದವರು ಸಾವರ್ಕರ್. ಅಂಥಹ ವೀರ ಸಾವರ್ಕರ್ ಅವರು ಕಾಂಗ್ರೆಸ್ಸಿಗೆ ಮಾತ್ರ ವರ್ಜ್ಯವಾಗುವುದೇಕೆ? ಎಂದು ಪ್ರಶ್ನಿಸಿದೆ.
ಕೆಪಿಸಿಸಿ ಗಾಂಧೀಜಿಯನ್ನೂ ವಿರೋಧಿಸುವುದೇ:ಸಿಂಗಾಪುರದ "ಫ್ರೀ ಇಂಡಿಯಾ ರೇಡಿಯೋ" ಭಾಷಣದಲ್ಲಿ ನೇತಾಜಿ, "ರಾಜಕೀಯ ಪ್ರಬುದ್ಧತೆಯಿಲ್ಲದ ಕಾಂಗ್ರೆಸ್ ಸೈನಿಕರನ್ನು ಹಣಕ್ಕಾಗಿ ಮಾರಿಕೊಂಡವರು ಎಂದು ಹೀಗಳೆಯುತ್ತಿರುವಾಗ ಸಾವರ್ಕರ್ ಸೇನೆಗೆ ಸೇರಿ ಎನ್ನುತ್ತಿರುವುದು ಸ್ಫೂರ್ತಿದಾಯಕ" ಎಂದಿದ್ದರು. ಸಾವರ್ಕರ್ ನಿಂದಕರೆಲ್ಲರೂ ನೇತಾಜಿ ನಿಂದಕರೂ ಆಗಿದ್ದಾರೇಕೆಂದು ಈಗ ತಿಳಿಯಿತೇ? ಕಾಂಗ್ರೆಸ್ ಇಂದು ಸಾವರ್ಕರ್‌ರನ್ನು ವಿರೋಧಿಸಬಹುದು. ಆದರೆ ಸಾವರ್ಕರ್‌ರನ್ನು ಅಪಾರವಾಗಿ ಪ್ರೀತಿಸುವವರು, ಗೌರವಿಸುವವರ ಸಾಲಲ್ಲಿ ಗಾಂಧೀಜಿಯೂ ನಿಲ್ಲುತ್ತಾರೆ. ಗಾಂಧೀಜಿ ಪತ್ರಗಳಲ್ಲಿ ಸಾವರ್ಕರ್‌ರನ್ನು ಪ್ರೀತಿಯಿಂದ ʼಭಾಯ್ʼ ಎಂದು ಸಂಬೋಧಿಸುತ್ತಿದ್ದರು. ಕೆಪಿಸಿಸಿ ಗಾಂಧೀಜಿಯನ್ನೂ ವಿರೋಧಿಸುವುದೇ? ಎಂದು ಪ್ರಶ್ನಿಸಿದೆ.