ಬೆಂಗಳೂರು: ಮುಂಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿ ಎರಡು ತಂಡಗಳಲ್ಲಿ ರಾಜ್ಯ ಪ್ರವಾಸಕ್ಕೆ ಸನ್ನದ್ಧವಾಗಿದ್ದು, ಸೆಪ್ಟಂಬರ್ 8 ರಂದು ಪ್ರವಾಸದ ಮಾರ್ಗ ಅಂತಿಮಗೊಳ್ಳಲಿದೆ.
ಟಾರ್ಗೆಟ್ 150 ಗುರಿ ತಲುಪಲು ಪೂರಕವಾಗಿ ಸಂಘಟನಾತ್ಮಕವಾಗಿ ಪ್ರವಾಸ ಆರಂಭಿಸಲಿದ್ದು, ಕೇಂದ್ರ ಸಂಸದೀಯ ಮಂಡಳಿಯಲ್ಲಿ ಸ್ಥಾನ ಪಡೆದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಯಾವುದೇ ತಂಡದ ನೇತೃತ್ವ ನೀಡಿಲ್ಲ. ಆದರೆ ಪ್ರವಾಸದಲ್ಲಿ ಯಡಿಯೂರಪ್ಪ ಭಾಗಿಯಾಗಲಿದ್ದಾರೆ.
ಸೆಪ್ಟಂಬರ್ 11 ರಂದು ರಾಜ್ಯ ಕಾರ್ಯಕಾರಿಣಿ ಸಭೆ ಮುಗಿಯುತ್ತಿದ್ದಂತೆ ರಾಜ್ಯ ಬಿಜೆಪಿ ಚುನಾವಣಾ ಸಿದ್ಧತೆ ಅಖಾಡಕ್ಕೆ ದುಮುಕಲಿದೆ. ಮೊದಲ ಹಂತವಾಗಿ 100 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ರಾಜ್ಯ ನಾಯಕರು 50 ಕ್ಷೇತ್ರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎರಡನೇ ತಂಡ 50 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ನಡೆಸಲಿವೆ.
ಸರ್ಕಾರದ ಒಂದು ವರ್ಷದ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸೆಪ್ಟಂಬರ್ 8 ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಅಂದೇ ನಡ್ಡಾ ಜೊತೆ ಚರ್ಚಿಸಿ ಪ್ರವಾಸದ ರೋಡ್ ಮ್ಯಾಪ್ ಅನ್ನು ಅಂತಿಮಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಬಿಎಸ್ವೈಗಿಲ್ಲ ಪ್ರತ್ಯೇಕ ತಂಡ:ಕಟೀಲ್ ಹಾಗು ಬೊಮ್ಮಾಯಿ ನೇತೃತ್ವದ ತಂಡಗಳು ಮಾತ್ರ ರಾಜ್ಯ ಪ್ರವಾಸ ಕೈಗೊಳ್ಳಬೇಕು ಎಂದು ಹೈಕಮಾಂಡ್ ಸಂದೇಶ ರವಾನಿಸಿದೆ. ಅದರಂತೆ ಎರಡು ತಂಡಗಳು ರಚನೆಯಾಗುತ್ತಿವೆ. ಬೊಮ್ಮಾಯಿ ತಂಡದಲ್ಲೇ ಯಡಿಯೂರಪ್ಪ ಕೂಡ ಇರಲಿದ್ದು, ಸಿಎಂ, ಮಾಜಿ ಸಿಎಂ ಒಟ್ಟಾಗಿ ಒಂದೇ ತಂಡದಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದಾರೆ.
ಕ್ಷೇತ್ರಗಳ ಆಯ್ಕೆ:ಟಾರ್ಗೆಟ್ 150 ಗುರಿ ತಲುಪುವಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿರುವ ಬಿಜೆಪಿ ಇದೀಗ ರಾಜ್ಯ ಪ್ರವಾಸಕ್ಕೆ ಅಣಿಯಾಗಿದ್ದು, ಜಾಣ್ಮೆಯಿಂದ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಭದ್ರಕೋಟೆಯಾಗಿರುವ ಕ್ಷೇತ್ರಗಳನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಅವುಗಳನ್ನೂ ಒಳಗೊಂಡಂತೆ ಪ್ರವಾಸಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.
ಪಾಲಿಕೆ ಚುನಾವಣೆ ನಿಗದಿಯಾದರೆ ಮಾರ್ಗ ಬದಲು:ಇನ್ನು ಯಾವ ಕ್ಷಣದಲ್ಲಿ ಬೇಕಾದರೂ ಬಿಬಿಎಂಪಿ ಚುನಾವಣೆ ಘೋಷಣೆಯಾಗಬಹುದು. ಒಂದು ವೇಳೆ ಚುನಾವಣೆ ಘೋಷಣೆಯಾದಲ್ಲಿ ಬಿಜೆಪಿ ರಾಜ್ಯ ಪ್ರವಾಸ ಕೈಗೊಳ್ಳಲಿರುವ ಎರಡು ತಂಡಗಳು ಪ್ರವಾಸ ಮಾರ್ಗದಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳಲಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಎದುರಾಗಲಿರುವ ಹಿನ್ನೆಲೆಯಲ್ಲಿ ಆ ವ್ಯಾಪ್ತಿಯನ್ನು ಹೊರತುಪಡಿಸಿ ಪ್ರವಾಸ ನಡೆಸಲಿವೆ. ಹೆಚ್ಚುವರಿ ಕ್ಷೇತ್ರಗಳನ್ನು ಸೇರ್ಪಡೆ ಮಾಡಿಕೊಂಡು ಪ್ರವಾಸ ನಡೆಸಲಿವೆ ಎಂದು ತಿಳಿದುಬಂದಿದೆ.
ಪ್ರವಾಸದ ಉದ್ದೇಶ:ಚುನಾವಣಾ ಸಮೀಪದಲ್ಲಿ ಆಡಳಿತ ವಿರೋಧಿ ಅಲೆ ಎದ್ದು ಚುನಾವಣೆಯಲ್ಲಿ ನಕಾರಾತ್ಮಕ ಫಲಿತಾಂಶ ಬರುವ ಸಾಧ್ಯತೆ ಇದೆ. ಹಾಗಾಗಿ ಇತ್ತೀಚೆಗೆ ನಡೆದಿರುವ ಕೆಲ ಘಟನಾವಳಿಗಳಿಂದ ಸರ್ಕಾರದ ವಿರುದ್ಧ ಎದ್ದಿರುವ ಜನಾಕ್ರೋಶವನ್ನು ತಣಿಸುವ ಕೆಲಸವನ್ನು ಈ ಪ್ರವಾಸದಲ್ಲಿ ಮಾಡಲಾಗುತ್ತದೆ.
ಒಟ್ಟಿನಲ್ಲಿ ಚುನಾವಣೆಗೆ 8 ತಿಂಗಳು ಬಾಕಿ ಇರುವಾಗಲೇ ರಾಜ್ಯ ಬಿಜೆಪಿ ಪಾಳಯ ಪ್ರಚಾರದ ಅಖಾಡಕ್ಕೆ ದುಮುಕುತ್ತಿದೆ. ಮೊದಲ ಹಂತದ ರಾಜ್ಯ ಪ್ರವಾಸ ಮುಗಿಯುತ್ತಿದ್ದಂತೆ ಎರಡನೇ ಹಂತದ ರಾಜ್ಯ ಪ್ರವಾಸಕ್ಕೆ ಮುಹೂರ್ತ ನಿಗದಿಪಡಿಸಲಿದ್ದು, ಆ ಪ್ರವಾಸಕ್ಕೆ ಕೇಂದ್ರದ ನಾಯಕರನ್ನೂ ಕರೆತರಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಕೊಡಗಿನ ಜನರ ಬದುಕಿನ ಜೊತೆ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಚೆಲ್ಲಾಟ: ಹೆಚ್ಡಿಕೆ ಅಸಮಾಧಾನ