ಬೆಂಗಳೂರು: ಇದುವರೆಗೂ ಶಿರಾ ವಿಧಾನಸಭಾ ಕ್ಷೇತ್ರವನ್ನು ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿಯ ಉಪ ಚುನಾವಣೆಯಲ್ಲಿ ಬಿಜೆಪಿ ಪರ ಜನರ ಒಲವು ಕಂಡುಬಂದಿದ್ದು, ಶಿರಾದಲ್ಲಿ ಬಿಜೆಪಿ ಖಾತೆ ತೆರೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 15 ದಿನದಿಂದ ಶಿರಾ ಪ್ರವಾಸ ಮಾಡಿದ್ದು, ಎಲ್ಲಾ 264 ಬೂತ್ ಕಮಿಟಿ ರಚನೆ, ವಾಟ್ಸಾಪ್ ಗ್ರೂಪ ರಚನೆ, ಪ್ರಮುಖರ ನಿಯುಕ್ತ ಮಾಡಿದ್ದು, ಪ್ರತಿ ಬೂತ್ನಲ್ಲಿ 50-60 ಕಾರ್ಯಕರ್ತರ ನಿಯೋಜನೆ ಮಾಡಿ ಅವರು ಕೆಲಸದಲ್ಲಿ ತೊಡಗಿಕೊಳ್ಳುವಂತೆ ಮಾಡಲಾಗುತ್ತಿದೆ. ಶಿರಾದಲ್ಲಿ ಬಿಜೆಪಿ ಯಾವತ್ತೂ ಗೆದ್ದಿಲ್ಲ, ಇದುವರೆಗೆ ಕಾಂಗ್ರೆಸ್, ಜೆಡಿಎಸ್ ಮಾತ್ರ ಗೆದ್ದಿದೆ. ಆದರೆ ಈ ಬಾರಿ ಕ್ಷೇತ್ರದಲ್ಲಿನ ಜನರ ಪ್ರತಿಕ್ರಿಯೆ, ವಾತಾವರಣ ನೋಡಿದರೆ ಬಿಜೆಪಿ ಈ ಬಾರಿ ಗೆಲ್ಲಲಿದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ರವಿಕುಮಾರ್ ಕ್ಷೇತ್ರದ ಜನರ ಪ್ರಮುಖ ಬೇಡಿಕೆ ಶಿರಾ ತಾಲೂಕಿನಲ್ಲಿನ ನೀರಿನ ಸಮಸ್ಯೆಗೆ ಪರಿಹಾರ ಬೇಕು ಎನ್ನುವುದಾಗಿದೆ, ಆದರೆ ಈವರೆಗೂ ಮದಲೂರು, ಶಿರಾ, ಕಳ್ಳಂಬೆಳ್ಳ ಕೆರೆಗೆ ನೀರು ತುಂಬಿಸುವ ಭರವಸೆ ನೀಡಿಕೊಂಡು ಬಂದಿದ್ದು ಬಿಟ್ಟರೆ ಯಾರೂ ಅದನ್ನು ಮಾಡಲಿಲ್ಲ, ಆದರೆ ಈಗ ಶಿರಾದಲ್ಲಿ ಸಕಾರಾತ್ಮಕ ಅಂಶ ಕಾಣುತ್ತಿದೆ. 2009 ರಲ್ಲಿ ಶಿರಾಗೆ ನೀರು ಬಿಡಲು ಯಡಿಯೂರಪ್ಪ ಆದೇಶ ಹೊರಡಿಸಿದ್ದರು, ಆದರೂ ಅಲ್ಲಿನ ಶಾಸಕರು ನೀರು ತೆಗೆದುಕೊಂಡು ಹೋಗುವ ಕೆಲಸ ಮಾಡಲಿಲ್ಲ, ಮದಲೂರು ಕೆರೆಗೆ ತುಂಬಿಸಲಿಲ್ಲ, ಆದರೆ ಈಗ ನಾವು ಕೆಲವೇ ದಿನದಲ್ಲಿ ನೀರು ತುಂಬಿಸಲಿದ್ದೇವೆ, ಈಗಾಗಲೇ ಶಿರಾ, ಕಳ್ಳಂಬೆಳ್ಳ ಕೆರೆಗೆ ನೀರು ತುಂಬಿಸಲಾಗುತ್ತಿದೆ, ಅದಾದ ನಂತರ ಮದಲೂರು ಕೆರೆಗೆ ನೀರು ಬಿಡಲಾಗುತ್ತದೆ. ಈ ಬಾರಿ ಶಿರಾದಲ್ಲಿ ನಾವು ಖಾತೆ ತೆರೆಯಲಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್, ಜೆಡಿಎಸ್ ನಂತರ ನಮ್ಮ ಅಭ್ಯರ್ಥಿ ಘೋಷಣೆ:ಬಿಜೆಪಿ ಗೆಲ್ಲಲಿದೆ ಎನ್ನುವ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಬಹಳ ಜನ ಟಿಕೆಟ್ ಕೇಳುತ್ತಿದ್ದಾರೆ. ಸ್ಥಳೀಯ ನಾಯಕರಾದ ಎಸ್.ಆರ್.ಗೌಡ, ಮಂಜುನಾಥ್, ಗೊಲ್ಲಸಮುದಾಯದ ಇಬ್ಬರು ಪ್ರಮುಖರು, ಕುರುಬ ಸಮುದಾಯದವರು, ಬೇರೆ ಬೇರೆ ಪಕ್ಷವದರು ಕೂಡ ಟಿಕೆಟ್ಗೆ ಬೇಡಿಕೆ ಇರಿಸುತ್ತಿದ್ದಾರೆ. ಚುನಾವಣೆ ಘೋಷಣೆ ಆದ ನಂತರ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿ ಘೋಷಣೆ ನಂತರ ನಾವು ನಮ್ಮ ಅಭ್ಯರ್ಥಿ ಘೋಷಣೆ ಮಾಡಲಿದ್ದೇವೆ ಎಂದು ರವಿಕುಮಾರ್ ತಿಳಿಸಿದರು.