ಬೆಂಗಳೂರು:ಪಕ್ಷದ ವತಿಯಿಂದ ಬಿಡುಗಡೆ ಮಾಡಿರುವ 189 ಅಭ್ಯರ್ಥಿಗಳ ಮೊದಲ ಪಟ್ಟಿಯೇ ಗೆಲುವಿನ ದಿಕ್ಸೂಚಿಯಾಗಿದೆ. ಟಿಕೆಟ್ ತಪ್ಪುವವರಿಗೆ ಯಾಕೆ? ಏನು ಕಾರಣ? ಮುಂದೆ ಯಾವ ರೀತಿಯ ಅವಕಾಶ ಇದೆ ಎಂಬುದನ್ನ ಹೇಳಿದ್ದೀವಿ. ಬಂಡಾಯ ತಪ್ಪಿಸಲು ಮೊದಲೇ ಟಿಕೆಟ್ ಕೈ ತಪ್ಪುವ ಮಾಹಿತಿ ನೀಡಿದ್ದು, ಇನ್ನೆರಡು ದಿನದಲ್ಲಿ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನವದೆಹಲಿಯಿಂದ ವಾಪಸಾಗುತ್ತಿದ್ದಂತೆ ಎಚ್ಎಎಲ್ ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, 189 ಅಭ್ಯರ್ಥಿಗಳಲ್ಲಿ ಹೊಸ ಮುಖ ತರುವ ನಿಟ್ಟಿನಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಮೊದಲ ಪಟ್ಟಿ ನೋಡಿದರೆ ಈ ಬಾರಿ ಬಿಜೆಪಿ ಮತ್ತೊಮ್ಮೆ ಗೆಲುವು ಸಾಧಿಸುವ ದಿಕ್ಸೂಚಿ ಆಗಿದೆ ಎಂದರು.
ಟಿಕೆಟ್ ಕೈ ತಪ್ಪಿದವರು ಬಂಡಾಯ ಏಳುವ ಸಾಧ್ಯತೆ ಹಿನ್ನೆಲೆ ಅವರಿಗೆ ಟಿಕೆಟ್ ಕೈ ತಪ್ಪುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಒಟ್ಟು 3 ದಿನ ಚರ್ಚೆ ಮಾಡಿ ಈ ನಿರ್ಧಾರ ಮಾಡಿದ್ದೇವೆ. ಇನ್ನೆರಡು ದಿನಗಳಲ್ಲಿ ಎರಡನೇ ಪಟ್ಟಿ ಬಿಡುಗಡೆ ಆಗಲಿದೆ. ಇನ್ನೂ 35 ಕ್ಷೇತ್ರಗಳ ಪಟ್ಟಿ ಎರಡು ದಿನಗಳಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಾವು ಮಾಡಿರುವ ಕೆಲಸಗಳನ್ನ ಮುಂದಿಟ್ಟುಕೊಂಡು ಜನರ ಬಳಿ ಮತ ಕೇಳುತ್ತೇವೆ. ಬೂತ್ ಮಟ್ಟದಲ್ಲಿ ತೆರಳಿ, ಹಳ್ಳಿ ಹಳ್ಳಿಗೂ ಹೋಗಿ ಪ್ರಚಾರ ಮಾಡುತ್ತೇವೆ. ರಾಜ್ಯದ ಸಮರ್ಥ ಅಭಿವೃದ್ಧಿ, ಕೋವಿಡ್ ವೇಳೆ ಎದುರಿಸಿದ ಸವಾಲುಗಳು, ಹಲವಾರು ಯುವಕರಿಗೆ ಕೊಟ್ಟ ಕೆಲಸ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವಿನ ವಿಶ್ವಾಸ ಇದೆ ಎಂದು ಹೇಳಿದರು.
ಹಿರಿಯ ನಾಯಕರಿಗೆ ಟಿಕೆಟ್ ಕೈ ತಪ್ಪಿರುವ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಿರಿಯರು ಪಕ್ಷವನ್ನ ಕಟ್ಟಿದ್ದಾರೆ. ಪಕ್ಷ ಹಿರಿಯರನ್ನು ಬೆಳೆಸಿದೆ. ಅವರಿಗೆ ಪಕ್ಷದೊಂದಿಗೆ ಅನ್ಯೋನ್ಯ ಸಂಬಂಧ ಇರುವ ಕಾರಣ ಯಾವುದು ತೊಂದರೆ ಆಗುವುದಿಲ್ಲ. ಟಿಕೆಟ್ ತಪ್ಪುವವರಿಗೆ ಯಾಕೆ? ಏನು ಕಾರಣ? ಮುಂದೆ ಯಾವ ರೀತಿಯ ಅವಕಾಶ ಇದೆ ಎಂಬುದನ್ನು ಹೇಳಿದ್ದೀವಿ. ನಮ್ಮದು ರಾಷ್ಟ್ರೀಯ ಪಕ್ಷ, ಶಿಸ್ತಿನ ಪಕ್ಷ ಬಿಜೆಪಿ. ಎಲ್ಲ ನಿಭಾಯಿಸುವ ಶಕ್ತಿ ಬಿಜೆಪಿಗೆ ಇದೆ ಎಂದರು.
ಇನ್ನು, ಪಟ್ಟಿ ತಯಾರಿಸುವ ವೇಳೆ ಯಡಿಯೂರಪ್ಪ ಅಸಮಾಧಾನಗೊಂಡಿದ್ದಾರೆ ಎನ್ನುವುದು ಊಹಾಪೋಹ. ಎರಡು ದಿನ ಪೂರ್ಣ ಪ್ರಮಾಣದಲ್ಲಿ ಕುಳಿತುಕೊಂಡು ನಿರ್ಧಾರ ಮಾಡಲಾಗಿದೆ. ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಕೆಲವು ಸಲಹೆ ಪಡೆಯಲಾಗಿದೆ. ಸಂಪೂರ್ಣವಾಗಿ ಯಡಿಯೂರಪ್ಪ ಅವರು ಈ ಪಟ್ಟಿ ತಯಾರಿಸುವಲ್ಲಿ ಭಾಗಿಯಾಗಿದ್ದಾರೆ ಎಂದು ಸಿಎಂ ಸ್ಪಷ್ಟಪಡಿಸಿದರು.
ನಿನ್ನೆ 189 ಕ್ಷೇತ್ರಗಳಿಗೆ ಟಿಕೆಟ್ ಪ್ರಕಟ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಅಳೆದು ತೂಗಿ 189 ಅಭ್ಯರ್ಥಿಗಳನ್ನು ಬಿಜೆಪಿ ಪ್ರಕಟಿಸಿದೆ. ದೆಹಲಿ ಬಿಜೆಪಿ ಕಚೇರಿಯಲ್ಲಿ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಚುನಾವಣಾ ಉಸ್ತುವಾರಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮಾಧ್ಯಮಗೋಷ್ಟಿ ನಡೆಸಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದರು. ಆದ್ರೆ ಎರಡನೇ ಹಂತದಲ್ಲಿ 35 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಟಿಕೆಟ್ ಬಾಕಿ ಉಳಿಸಿಕೊಂಡಿದ್ದು, ಇನ್ನೆರಡು ದಿನಗಳಲ್ಲಿ ಎರಡನೇ ಲಿಸ್ಟ್ ಪ್ರಕಟವಾಗುವ ಸಾಧ್ಯತೆ ಇದೆ.
ಓದಿ:ಅಚ್ಚರಿಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ: ಟಿಕೆಟ್ ಘೋಷಿಸದ 35 ಕ್ಷೇತ್ರದ ಬಗ್ಗೆ ಹೆಚ್ಚಿದ ಕುತೂಹಲ