ಬೆಂಗಳೂರು:370ನೇ ವಿಧಿ ರದ್ಧತಿ ಸಂಬಂಧ ನಾಳೆ ನಗರದಲ್ಲಿ ಜನಜಾಗೃತಿ ಸಮಾವೇಶವನ್ನು ಬಿಜೆಪಿ ಪಕ್ಷ ಹಮ್ಮಿಕೊಂಡಿದ್ದು ಇದರ ಅಂತಿಮ ಹಂತದ ಸಿದ್ಧತೆ ಪೂರ್ಣಗೊಂಡಿದೆ.
ಬಿಜೆಪಿಯ ಜನ ಜಾಗೃತಿ ಸಮಾವೇಶಕ್ಕೆ ಸಿದ್ಧಗೊಳ್ಳುತ್ತಿರುವ ವೇದಿಕೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯ ಸಭಾಂಗಣದಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಸಮಾವೇಶ ನಡೆಯಲಿದ್ದು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಪಾಲ್ಗೊಳ್ಳಲಿದ್ದಾರೆ. ಸಿಎಂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಹಲವು ರಾಜ್ಯ ನಾಯಕರು ಈ ಸಂದರ್ಭ ವೇದಿಕೆ ಮೇಲೆ ಉಪಸ್ಥಿತರಿರುತ್ತಾರೆ. ವೇದಿಕೆ ಮೇಲೆ ಹನ್ನೆರಡು ಮಂದಿ ಗಣ್ಯರಿಗೆ ಆಸನ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ. ವೇದಿಕೆ ಮುಂಭಾಗ ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ.
ನಾಳೆ ಬೆಳಗ್ಗೆ 11 ಗಂಟೆಗೆ ಸಮಾವೇಶ ಆರಂಭವಾಗಲಿದ್ದು ಕಾಶ್ಮೀರ ಸ್ವಾಯತ್ತತೆಗೆ ಕೇಂದ್ರ ಸರ್ಕಾರ 370ನೇ ವಿಧಿ ರದ್ದುಗೊಳಿಸಿರುವುದರ ಕುರಿತು ಜನಜಾಗೃತಿ ಮೂಡಿಸುವ ಕಾರ್ಯವನ್ನು ಜೆ.ಪಿ. ನಡ್ಡಾ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ಮಾಡಲಿದ್ದಾರೆ. ಅತ್ಯಂತ ವ್ಯವಸ್ಥಿತ ಹಾಗೂ ಅಚ್ಚುಕಟ್ಟಾಗಿ ಕಾರ್ಯಕ್ರಮ ನೆರವೇರಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಕಾರ್ಯಕರ್ತರಿಗೆ ಕುಳಿತು ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ಹೆಚ್ಚುವರಿ ಆಸನ ವ್ಯವಸ್ಥೆಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸಿದ್ಧತಾ ಕಾರ್ಯ ವೀಕ್ಷಣೆ :ಇಂದು ಸಿದ್ಧತಾ ಕಾರ್ಯವನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎಂ ರವಿಕುಮಾರ್ ವೀಕ್ಷಿಸಿದರು. ಸಂಜೆಯ ಒಳಗೆ ಎಲ್ಲ ಸಿದ್ಧತೆಗಳು ಪೂರ್ಣಗೊಳ್ಳಬೇಕು ಬೆಳಿಗ್ಗೆ ಕಾರ್ಯಕ್ರಮ ಆರಂಭಕ್ಕೆ ಮುನ್ನ ಯಾವುದೇ ಸಿದ್ಧತೆ ಬಾಕಿ ಉಳಿಸಿಕೊಳ್ಳಬೇಡಿ ಎಂದು ಸೂಚಿಸಿದ್ದಾರೆ.