ಬೆಂಗಳೂರು : ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ 75ನೇ ವರ್ಷದ ಸ್ವಾತಂತ್ರ್ಯ ದಿನೋತ್ಸವ ಆಚರಣೆಯ ಅಂಗವಾಗಿ ಪ್ರತಿ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸಲು ನಿರ್ಧರಿಸಿದ್ದು, ಅದಕ್ಕಾಗಿ ತ್ರಿವರ್ಣ ಧ್ವಜ ಮಾರಾಟ ಮಾಡಲು ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಳಿಗೆ ತೆರೆಯಲಾಗಿದೆ.
ಮಲ್ಲೇಶ್ವರಂನಲ್ಲಿರುವ ಜಗನ್ನಾಥ ಭವನದಲ್ಲಿ ಇಂದು "ಹರ್ ಘರ್ ತಿರಂಗಾ” ಮಳಿಗೆಯನ್ನು ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಧಾನಮಂತ್ರಿ ಕರೆಕೊಟ್ಟ ಬಳಿಕ ಪಕ್ಷದ ರವಿಕುಮಾರ್ ಅವರನ್ನು ಸಂಚಾಲಕರನ್ನಾಗಿ ಮಾಡಿ ಈ ಕಾರ್ಯಕ್ರಮದ ಯಶಸ್ಸಿಗೆ ಸೂಚಿಸಿದ್ದಾರೆ. ಅನೇಕ ಕಾರ್ಯಕ್ರಮಗಳನ್ನು ಇದೇ 9ರಿಂದ 15ರವರೆಗೆ ಆಯೋಜಿಸಿ ಯಶಸ್ವಿಗೊಳಿಸಲಾಗುವುದು ಎಂದು ತಿಳಿಸಿದರು. ಪ್ರತಿ ತ್ರಿವರ್ಣ ಧ್ವಜಕ್ಕೆ 25ರೂ. ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ :ಬಳಿಕ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಆಗಸ್ಟ್ 13ರಿಂದ 15ರವರೆಗೆ ರಾಜ್ಯದೆಲ್ಲೆಡೆ ಮತ್ತು ದೇಶಾದ್ಯಂತ ಮನೆಮನೆಯ ಮೇಲೆ ತ್ರಿವರ್ಣ ಧ್ವಜ ಹಾರಾಡಲಿದೆ. ಆ. 13ರ ಬೆಳಗ್ಗೆ ರಾಷ್ಟ್ರಧ್ವಜ ಹಾರಿಸುವುದು ಹಾಗೂ 15ರಂದು ಸಂಜೆ ಧ್ವಜವನ್ನು ಇಳಿಸಲು ನಿರ್ಧರಿಸಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿರುವ ಈ ಸಂದರ್ಭದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು (ಆಜಾದಿ ಕಾ ಅಮೃತ ಮಹೋತ್ಸವ್) ಸಂಭ್ರಮದಿಂದ ದೊಡ್ಡ ಪ್ರಮಾಣದಲ್ಲಿ ಆಚರಿಸಲು ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಕರೆ ಕೊಟ್ಟಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಪ್ರತಿ ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಿಸಬೇಕೆಂದು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದೇ ರೀತಿಯಲ್ಲಿ ಬಿಜೆಪಿ ಕೂಡ ಸರ್ಕಾರದ ಕರೆಗೆ ಓಗೊಟ್ಟು ನಮ್ಮ ಲಕ್ಷಾಂತರ ಬಿಜೆಪಿ ಕಾರ್ಯಕರ್ತರನ್ನು ಇದಕ್ಕೆ ಸಿದ್ಧಗೊಳಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು. ನಮ್ಮೆಲ್ಲ ಕಾರ್ಯಕರ್ತರು ಮತ್ತು ಸಾರ್ವಜನಿಕರು ರಾಷ್ಟ್ರಧ್ವಜ ಖರೀದಿಸಿ ತಮ್ಮ ಮನೆ ಮೇಲೆ ಹಾರಿಸಬೇಕು. ಆ ಹಿನ್ನೆಲೆಯಲ್ಲಿ ರಾಜ್ಯದ ಪಕ್ಷದ ಎಲ್ಲ 39 ಸಂಘಟನಾ ಜಿಲ್ಲಾ ಕೇಂದ್ರಗಳಲ್ಲಿ ರಾಷ್ಟ್ರಧ್ವಜ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.