ಕರ್ನಾಟಕ

karnataka

ETV Bharat / state

ಆರ್​ಎಸ್ಎಸ್ ತಾಲಿಬಾನ್ ಹಾಗೆ ಇದ್ದಿದ್ದರೆ ವಿರೋಧ ಪಕ್ಷದವರು ಕ್ರೇನ್‌ನಲ್ಲಿ ಉಲ್ಟಾ ನೇತಾಡ್ತಿದ್ರು : ಸಿ ಟಿ ರವಿ

ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಲ್ಲ, ಸುಳ್ಳುರಾಮಯ್ಯ. ವಯಸ್ಸಾದ ಮೇಲೆ ಕಣ್ಣು ಕಾಣಲ್ಲ, ಪೊರೆ ಬಂದಿರುತ್ತೆ. ಅದಕ್ಕೆ‌ ಅವರಿಗೆ ತಾಲಿಬಾನ್ ಮತ್ತು ಆರ್​ಎಸ್​ಎಸ್ ಒಂದೇ ತರಹ ಕಾಣ್ತಿದೆ. ಇಲ್ಲಿ ಆರ್​ಎಸ್ಎಸ್, ತಾಲಿಬಾನ್ ಹಾಗೆ ಇದ್ದಿದ್ದರೆ, ಅವರು ಹೆಲಿಕಾಪ್ಟರ್​ ಮೇಲೆ, ಕ್ರೇನ್ ಮೇಲೆ ನೇತಾಡ್ತಿದ್ರು..

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

By

Published : Sep 27, 2021, 7:48 PM IST

ಬೆಂಗಳೂರು :ಕೃಷಿ ಕಾಯ್ದೆಗಳನ್ನ ವಿರೋಧಿಸಿ ಇಂದು ಕರೆ ನೀಡಿದ ಭಾರತ್ ಬಂದ್ ವಿಫಲವಾಗಿದೆ. ರೈತರು ಭಾರತ್ ಬಂದ್​ಗೆ ಬೆಂಬಲ ನೀಡಿಲ್ಲ. ಪ್ರಧಾನಿ ಮೋದಿ ಆಡಳಿತವನ್ನ ರೈತರು ಮೆಚ್ಚಿದ್ದಾರೆ. ಕೇವಲ ಸಂಘಟನೆಗಳು ಮಾತ್ರ ಪ್ರತಿಭಟನೆ ಮಾಡಿವೆ.

ಸಾಮಾನ್ಯರು, ರೈತರು ಯಾರು ಬೆಂಬಲ ನೀಡಿಲ್ಲ. ಬಿಜೆಪಿಯನ್ನ ರೈತ ವಿರೋಧಿ ಎಂದು ಬಿಂಬಿಸಲು ಷಡ್ಯಂತ್ರ ಮಾಡುತ್ತಿದ್ದಾರೆ. ಈ ಹಿಂದೆ ದಲಿತ ವಿರೋಧಿ ಎಂದು ಬಿಂಬಿಸಲು ಷಡ್ಯಂತ್ರ ಮಾಡಿದ್ದರು. ಪ್ರತಿ ಪಕ್ಷದವರು ಜನತೆಯ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.

ರೈತರು ಮೋದಿ ಪರ ನಿಂತಿದ್ದಾರೆ :ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರೈತರ ಹೆಸರಲ್ಲಿ ಮೂರು ಪ್ರಮುಖ ಕಾಯ್ದೆ ವಿರೋಧಿಸಿ ಭಾರತ್ ಬಂದ್ ಮಾಡಿದ್ದಾರೆ. ರೈತರು ಭಾರತ್ ಬಂದ್ ವಿರೋಧಿಸಿ, ಮೋದಿ ಪರ ನಿಂತಿದ್ದಾರೆ.

ಕೃಷಿ ಯೋಜನೆ ಪರವಾಗಿದ್ದು, ಮೋದಿಯನ್ನ ಬೆಂಬಲಿಸಿದ್ದಾರೆ. ಎಲ್ಲ ಪಕ್ಷಗಳು ರೈತರ ವಿರೋಧವಾಗಿ ನಿಂತಾಗ, ಒಂದು ಹಕ್ಕಿಯೂ ಓಡಾಡಲ್ವೇನೋ ಅಂದುಕೊಂಡಿದ್ದೆವು. ಆದರೆ, ಎಲ್ಲರೂ ಭಾರತ್ ಬಂದ್ ವಿರೋಧವಾಗಿದ್ದಾರೆ ಎಂದಿದ್ದಾರೆ.

ಓದಿ:ನಮ್ಮ ಪಕ್ಷ ಮುಗಿಸಲು ಸಿದ್ದರಾಮಯ್ಯ ಅವರಿಂದ ಮಾತ್ರವಲ್ಲ ಯಾರಿಂದಲೂ ಸಾಧ್ಯವಿಲ್ಲ : ಹೆಚ್​ಡಿಡಿ

ಕಳೆದ ಒಂದು ವರ್ಷದಿಂದ ರೈತ ಮಸೂದೆ ವಿರೋಧವಾಗಿ ಕೆಲವರು ನಿಂತಿದ್ದಾರೆ. ರೈತರ ಪರವಾಗಿ ಕಾಯ್ದೆಗಳನ್ನ ತರಲಾಗಿದೆ. ಆದರೂ ಯಾವುದನ್ನ ಬದಲಿಸಬೇಕು ಹೇಳಿ ಅಂದರೂ, ಯಾವುದೇ ಮಾತು ಹೇಳಿಲ್ಲ. ಕಾಯ್ದೆ ವಿರುದ್ಧ ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಸ್ವಾಮಿನಾಥನ್ ವರದಿ ಸಂಪೂರ್ಣ ಜಾರಿಗೆ ತಂದಿದ್ದೇ ಬಿಜೆಪಿ :ಬಿಜೆಪಿ ರೈತ ವಿರೋಧಿ ಅಂತಾ ಬಿಂಬಿಸುವ ಕೆಲಸ ಮಾಡಲಾಗುತ್ತಿದೆ‌. ದಲಿತರ ವಿರೋಧಿ ಅನ್ನೋ ಪಟ್ಟ ಕಟ್ಟಲು ಹೊರಟಿದ್ದರು. ಸ್ವಾಮಿನಾಥನ್ ವರದಿ ಸಂಪೂರ್ಣ ಜಾರಿಗೆ ತಂದಿದ್ದೇ ಬಿಜೆಪಿ. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ, 44 ಸಾವಿರ ಕೋಟಿ ರೂ. ಬಜೆಟ್ ಇಟ್ಟಿತ್ತು. ಬಿಜೆಪಿ 152 ಸಾವಿರ ಕೋಟಿ ರೂ. ಇಟ್ಟಿದೆ.

ಕೃಷಿಕರಿಗೆ ಪ್ರತಿ ವರ್ಷ 6 ಸಾವಿರ ಕೋಟಿ ರೂ. ಅವರ ಅಕೌಂಟಿಗೆ ಹೋಗ್ತಿದೆ. ಕಿಸಾನ್ ಸಮ್ಮಾನ್, ಸಾಯಿಲ್ ಕಾರ್ಡ್, ಫಸಲ್ ಭಿಮಾ ಯೋಜನೆ ಎಲ್ಲವೂ ಮರೆತಿದ್ದಾರೆ. ರೈತ ವಿರೋಧಿ ಬಿಜೆಪಿ ಅನ್ನೋದನ್ನ ಬಿಂಬಿಸಲು ಹೊರಟಿದ್ದಾರೆ. ಐದು ರಾಜ್ಯಗಳ ಚುನಾವಣೆ ಮುಗಿಯೋವರೆಗೂ ಹೀಗೆ ಮಾಡ್ತಾರೆ. ಬಿಜೆಪಿ ಪರ ಜನ ನಿಂತ ಮೇಲೆ, ಮುಂದೆ ಬೇರೆ ಹೊಸತನ್ನ ಹುಡುಕುತ್ತಾರೆ ಎಂದಿದ್ದಾರೆ.

ಬೆಳೆಗೆ ಮೊದಲೇ ಬೆಲೆ ನಿಗದಿ ರೈತ ವಿರೋಧಿಯಾ?:ಬೆಳೆ ಬೆಳೆಯುವ ಮೊದಲೇ ಬೆಲೆ ನಿಗದಿ ಮಾಡಿಕೊಳ್ಳುವುದು ರೈತ ವಿರೋಧಿಯಾ? ಕೃಷಿಗೆ ಬಂಡವಾಳ ಹರಿದು ಬರುವುದು ಬೇಡವಾ? ಕೃಷಿಯನ್ನ ಉದ್ದಿಮೆ ರೂಪದಲ್ಲಿ ಮಾಡಲು, ರೈತರಿಗೆ ಸಬ್ಸಿಡಿ ನೀಡಲಾಗ್ತಿದೆ. ಇದೆಲ್ಲವೂ ಅಪರಾಧವಾ? ಕೃಷಿಗೆ ಬೆಂಬಲ ಬೆಲೆ ಸಿಗಬೇಕು, ಊರು ಬಿಡುವ ಕೆಟ್ಟ ಪರಿಸ್ಥಿತಿ ಹೋಗಬೇಕು. ಕೃಷಿ ಕ್ಷೇತ್ರದ ಸುಧಾರಣೆ ಆಗಿದ್ದರೆ, ಇಷ್ಟೆಲ್ಲಾ ಸಬ್ಸಿಡಿ ಯಾಕೆ ಕೊಡಬೇಕಿತ್ತು ಎಂದು ಹೇಳಿದ್ದಾರೆ.

ರೈತರ ಹೆಸರು ಹೇಳಿ, ದಲ್ಲಾಳಿಗಳ ಪರ ಹೋರಾಟ :ಕೃಷಿಕ ಬೆಳೆದ ಬೆಳೆಗೆ ಹೆಸರಿಟ್ಟು ಮಾರಲು ಸಾವಯವ ಕೃಷಿ ಸಮ್ಮಾನ್ ಯೋಜನೆ ತರಲಾಗಿದೆ. ಕೊಬ್ಬಿದ ಕೆಲ ದಲ್ಲಾಳಿಗಳು ಇದನ್ನ ವಿರೋಧ ಮಾಡುತ್ತಿದ್ದಾರೆ. ರೈತರ ಹೆಸರು ಹೇಳಿ, ದಲ್ಲಾಳಿಗಳ ಪರವಾಗಿ ಹೋರಾಟ ಮಾಡೋದು ಸರಿಯಲ್ಲ. ರೈತರನ್ನ ಶೋಷಿಸಿ, ರೈತರ ಹೆಸರಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಮೂರು ಕೃಷಿ ಕಾಯ್ದೆಯಲ್ಲಿ ರೈತ ವಿರೋಧಿ ಅಂಶ ಯಾವುದು ಹೇಳಿ? ಒಂದು ವರ್ಷವಾಯಿತು ಮಸೂದೆ ಬಂದು, ಯಾವುದು ಅಂತಾ ಹೇಳಿದ್ರೆ ಬದಲಿಸೋಣ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಅಲ್ಲ ಸುಳ್ಳುರಾಮಯ್ಯ:ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಲ್ಲ, ಸುಳ್ಳುರಾಮಯ್ಯ. ವಯಸ್ಸಾದ ಮೇಲೆ ಕಣ್ಣು ಕಾಣಲ್ಲ, ಪೊರೆ ಬಂದಿರುತ್ತೆ. ಅದಕ್ಕೆ‌ ಅವರಿಗೆ ತಾಲಿಬಾನ್ ಮತ್ತು ಆರ್​ಎಸ್​ಎಸ್ ಒಂದೇ ತರಹ ಕಾಣ್ತಿದೆ. ಇಲ್ಲಿ ಆರ್​ಎಸ್ಎಸ್, ತಾಲಿಬಾನ್ ಹಾಗೆ ಇದ್ದಿದ್ದರೆ, ಅವರು ಹೆಲಿಕಾಪ್ಟರ್​ ಮೇಲೆ, ಕ್ರೇನ್ ಮೇಲೆ ನೇತಾಡ್ತಿದ್ರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಓದಿ:GST ವಿನಾಯಿತಿ ಪಟ್ಟಿ ಪರಿಶೀಲನೆಗೆ ಕೇಂದ್ರದಿಂದ 2 ಸಮಿತಿ ರಚನೆ.. ಒಂದಕ್ಕೆ ಸಿಎಂ ಬೊಮ್ಮಾಯಿ ನೇತೃತ್ವ..

ಜಿಡಿಪಿ ಬೆಳವಣಿಗೆ, ಉಳಿದೆಲ್ಲಾ ದೇಶಗಳಿಗಿಂತ ಉತ್ತಮವಾಗಿದೆ.‌ ಕೇಂದ್ರ ಯಾವುದೇ ತೆರಿಗೆ ಹೇರಿದರೂ, ರಾಜ್ಯಕ್ಕೆ ಶೇ‌.47ರಷ್ಟು ವಾಪಸ್ ಬರಲಿದೆ. ಪಿಎಫ್ಐ, ಎಂಐಎಂ ತುಕಡೆ ಗ್ಯಾಂಗ್ ಯಾರಿಗೆ ಸಂಬಂಧಿಕರು? ಅವರಿಗೆ ಇವರ ಜೊತೆ ಇರೋ‌ ಸಂಬಂಧ ನಮಗಿಲ್ಲ. ಅವರ ಜೊತೆ ನಮಗೆ ಯಾವುದೇ ಬೀಗತನ ಇಲ್ಲ ಎಂದು ಕಾಂಗ್ರೆಸ್​ಗೆ ಟಾಂಗ್ ನೀಡಿದ್ದಾರೆ.

ಆರ್​ಎಸ್​ಎಸ್ ಇರೋದಕ್ಕೆ ದೇಶ ಇಂದು ಉಳಿದಿದೆ :ಹೆಡಗೆವಾರ್ ಮಹಾರಾಷ್ಟ್ರದ ಆರ್​ಎಸ್​ಎಸ್ ಘಟಕ ಸ್ಥಾಪಿಸಿದವರು. ಅವರು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ. ಆರ್​ಎಸ್​ಎಸ್ ಇರೋದಕ್ಕೆ ದೇಶ ಇಂದು ಉಳಿದಿದೆ. 1963-64ರಲ್ಲಿ ಚೀನಾ ಆಕ್ರಮಣ ಮಾಡಿದಾಗ, ಸೈನ್ಯದ ಬದಲಾಗಿ ಆರ್​ಎಸ್​ಎಸ್ ಹೋಗಿ ಯುದ್ಧ ಮಾಡಿತು. ಹೀಗಾಗಿ, ಅಂದಿನ ಪ್ರಧಾನಿ ನೆಹರೂ ಅವರೇ, ಸ್ವಾತಂತ್ರ್ಯ ದಿನದಲ್ಲಿ ಆರ್​ಎಸ್​ಎಸ್ ಕವಾಯತ್ತಿಗೆ ಅವಕಾಶ ಮಾಡಿಕೊಟ್ಟರು ಎಂದಿದ್ದಾರೆ.

ಕಾಂಗ್ರೆಸ್​ನವರು ಇಂದಿರಾ, ಇಂಡಿಯಾ ಅಂತಾ ಇನ್ನೊಬ್ಬರ ಮನೆ ಹಾಳು ಮಾಡುತಿದ್ದರು. ಆದರೆ, ಅಂದು ಪೇಪರ್ ಹಂಚೋ ಮೂಲಕ, ಕಹಳೆ ಊದುವ ಮೂಲಕ ಜೈಲಿಗೆ ಹೋಗಿದ್ದು ಆರ್​ಎಸ್​ಎಸ್​ನವರು. ಸಿದ್ದರಾಮಯ್ಯ ಎಲ್ಲಿ ಹೋಗಿದ್ದರು ಆಗ. ಸಿದ್ದರಾಮಯ್ಯ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾರೆ. ಇದು ಅವರ ತಾಲಿಬಾನಿ ಓಲೈಕೆ ರಾಜಕಾರಣ. ಬಿಜೆಪಿ ಅಲ್ಲದೆ ಹೋಗಿದ್ದರೆ, ನಾವು ತಾಲಿಬಾನ್ ಆಗಿದ್ದರೆ, ವಿರೋಧ ಪಕ್ಷದವರು ಕ್ರೇನ್‌ನಲ್ಲಿ ಉಲ್ಟಾ ನೇತಾಡ್ತಿದ್ರು. ಗುಂಡಿನ ಮೇಲೆ ನಾವು ನಿಂತಿಲ್ಲ, ಬ್ಯಾಲೆಟ್ ಮೇಲೆ ನಾವು ನಿಂತಿರುವುದು ಎಂದರು.

ಓದಿ:ಭಾರತ್ ಬಂದ್.. ರೈತ ಸಂಘಟನೆಗಳಿಂದ ಕೇಂದ್ರ ವಿರುದ್ಧ ಕಿಡಿ.. ಬಿಜೆಪಿ ಕಾರ್ಯಕರ್ತರಿಂದ ಗುಲಾಬಿ, ಬಾದಾಮಿ ಹಾಲು..

ಮಾತೆತ್ತಿದರೆ ಮೋದಿ ಅವರು ಅದಾನಿ, ಅಂಬಾನಿ ಪರ ಅಂತಾರೆ. ಮೋದಿ ಬಂದ ನಂತರ ಅದಾನಿ, ಅಂಬಾನಿ ಬಂದ್ರಾ? ಮೊದಲು ಇವರೆಲ್ಲಾ ಇರಲಿಲ್ವಾ? ಸಿದ್ದರಾಮಯ್ಯನವರೇ, ಕಿಸಾನ್ ಸಮ್ಮಾನ್ ಮೊದಲಿತ್ತಾ? ನೀವು ಕೊಟ್ಟಿದ್ದು, ನಿಮ್ಮಪ್ಪನ ಮನೆಯದ್ದು ಅಲ್ಲ. ಯಾಕೆ ಕೊಡಲಿಲ್ಲ ಮತ್ತೆ ಇಷ್ಟು ಹಣ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಕೋಡಿಹಳ್ಳಿ, ಕುರುಬೂರು ರೈತರ ಪರ ಇಲ್ಲ :ಕುರುಬೂರು ಶಾಂತಕುಮಾರ್, ಕೋಡಿಹಳ್ಳಿ ಚಂದ್ರಶೇಖರ್‌ಗೆ ಒಂದು ಪ್ರಶ್ನೆ ಕೇಳ್ತೀನಿ. ನಂಜುಂಡ ಸ್ವಾಮಿ ಹೇಳಿದ್ದ ಕ್ಯಾಸೆಟ್ ಹಾಕಿಕೊಂಡು ಕೇಳಿ. ನಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರುತ್ತೇವೆ ಅಂತಾ ಹೇಳಿದ್ದರು. ನಂಜುಂಡಸ್ವಾಮಿ ಹೇಳಿದ್ದು ತಪ್ಪಾ? ಪೆಪ್ಸಿ ಕಂಪನಿ ಆಲೂಗಡ್ಡೆ ಬೆಳೆಯಲು ಒಪ್ಪಂದ ಮಾಡಿಕೊಂಡಿದ್ದರು.

ಕಾಂಗ್ರೆಸ್​ನವರು ಯಾಕೆ ಅವಕಾಶ ಮಾಡಿಕೊಟ್ಟರು. ಕೆಲವರು ಬಿಜೆಪಿಯನ್ನ ವಿರೋಧಿಸುವುದಕ್ಕಂತಲೇ ಇದ್ದಾರೆ. ಅವರು ವಿರೋಧಿಸಿದಂತೆಲ್ಲಾ, ಬಿಜೆಪಿ ಬೆಳೆಯುತ್ತಿದೆ. ಕೃಷಿ ಕ್ಷೇತ್ರ ಬಹು ದೊಡ್ಡದು. ರೈತರ ಆದಾಯ ದ್ವಿಗುಣವಾಗಬಾರದಾ? ರೈತರು ಮಾಡಿದ ತಪ್ಪೇನು? ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ರೈತರ ಪರವಾಗಿಲ್ಲ ಎಂದು ಟೀಕಿಸಿದ್ದಾರೆ.

ಟೌನ್ ಹಾಲ್ ಬಳಿ ಬಂದು ಪ್ರತಿಭಟನೆ ಮಾಡಿದವರಲ್ಲಿ, ನಿಜವಾದ ರೈತರೆಷ್ಟು? ಎಷ್ಟು ಜನರಿಗೆ ಉಳುಮೆ ಮಾಡಲು ಬರುತ್ತೆ, ಬೆಳೆ ಬೆಳೆಯಲು ಬರುತ್ತೆ ಎಂದು ಇಂದಿನ ಹೋರಾಟವನ್ನು ಪ್ರಶ್ನಿಸಿದರು.

ನೋ ರಿಯಾಕ್ಷನ್ :ಸಿಎಂ ಬೊಮ್ಮಾಯಿ ನಾಯಕತ್ವದಲ್ಲಿ ಮುಂದಿನ‌ ಚುನಾವಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಲು ಸಿ ಟಿ ರವಿ ನಿರಾಕರಿಸಿದರು. ಈ ಪ್ರಶ್ನೆಗೆ ನೋ ರಿಯಾಕ್ಷನ್ ಅಂದ ಅವರು, ಈ ಬಗ್ಗೆ ಮತ್ತೊಂದು ದಿನ ಮಾತನಾಡೋಣ ಎಂದು ಹೇಳಿದ್ದಾರೆ.

ಓದಿ:ತಾರಕಕ್ಕೇರಿದ ಮಾಜಿ ಸಿಎಂಗಳ ಜಟಾಪಟಿ : ಇಬ್ಬರ ವಾಗ್ವಾದದ ಹಿಂದಿನ ಮರ್ಮವೇನು?

ABOUT THE AUTHOR

...view details