ಕರ್ನಾಟಕ

karnataka

ETV Bharat / state

’ಅಮಿತ್​ ಶಾ ಅವರದ್ದು ಒಂಥರಾ ರೌಡಿಸಂ‘ ಯೋಗೇಶ್ವರರದ್ದು ಎನ್ನಲಾದ ಆಡಿಯೋ ವೈರಲ್: ಇದು ಫೇಕ್ ಎಂದ ಎಂಎಲ್​​​ಸಿ

ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್​ - ಫೇಕ್​ ಆಡಿಯೋ ಎಂದ ಯೋಗೇಶ್ವರ್​ - ಚುನಾವಣೆಗೂ ಮುನ್ನವೇ ಆಪರೇಷನ್​ ಕಮಲ ಎಂದ ಎಂಎಲ್​​ಸಿ

bjp-mlc-cp-yogeshwar-reaction-on-viral-audio
ಸಂಕ್ರಾಂತಿಯ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ..ಯೋಗೇಶ್ವರ್ ಆಡಿಯೋ ವೈರಲ್ : ಫೇಕ್ ಆಡಿಯೋ ಎಂದ ಯೋಗೇಶ್ವರ್

By

Published : Jan 14, 2023, 5:47 PM IST

Updated : Jan 14, 2023, 8:24 PM IST

’ಅಮಿತ್​ ಶಾ ಅವರದ್ದು ಒಂಥರಾ ರೌಡಿಸಂ‘ ಯೋಗೇಶ್ವರರದ್ದು ಎನ್ನಲಾದ ಆಡಿಯೋ ವೈರಲ್: ಇದು ಫೇಕ್ ಎಂದ ಎಂಎಲ್​​​ಸಿ

ಬೆಂಗಳೂರು:ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ಗಾಳಿ ಬೀಸಲಿದ್ದು, ಚುನಾವಣೆಗೂ ಮುನ್ನ ಆಪರೇಷನ್ ಕಮಲ ನಡೆಸುವುದಾಗಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಈಗ ಸಂಚಲನ ಮೂಡಿಸಿದೆ. ಆಡಿಯೋ ವೈರಲ್ ಆಗುತ್ತಿದ್ದಂತೆಯೇ ಇದಕ್ಕೆ ಪ್ರತಿಕ್ರಿಯಿಸಿರುವ ಸಿ.ಪಿ.ಯೋಗೇಶ್ವರ್ ಅವರು, ಈ ಆಡಿಯೋ ನನ್ನದಲ್ಲ. ಅದು ಯಾವುದೋ ಫೇಕ್ ಆಡಿಯೋ ಎಂದು ಆರೋಪವನ್ನು ತಳ್ಳಿಹಾಕಿದರು. ನಾವು ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುತ್ತೇವೆ. ನಾನು ಏನೇ ಇದ್ದರೂ ನೇರವಾಗಿ ಮಾತನಾಡುವವನು. ಈ ಆಡಿಯೋ ನನ್ನದಲ್ಲ ಎಂದು ಸ್ಪಷ್ಟನೆ ನೀಡಿದರು.

ಚನ್ನಪಟ್ಟಣದಲ್ಲಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಪಿವೈ, ಹೆಚ್.ಡಿ. ಕುಮಾರಸ್ವಾಮಿ ನಮ್ಮ ತಾಲೂಕಿನಲ್ಲಿ ಏನು ಅಭಿವೃದ್ಧಿ ಮಾಡಿಲ್ಲ. ಕುಮಾರಸ್ವಾಮಿ ವಿರುದ್ದ ನಾನು ಕೆಲಸ ಮಾಡುತ್ತಿದ್ದೇನೆ. ನಾನು ಕ್ಷೇತ್ರದಲ್ಲಿ ಪಾದಯಾತ್ರೆ ಮಾಡುತ್ತೇನೆ. ಜನರು ನನ್ನ ಕೈ ಹಿಡಿಯುವ ವಿಶ್ವಾಸವಿದೆ. ಜನ ತೀರ್ಮಾನ ಮಾಡುತ್ತಾರೆ ಎಂದರು. ಸಚಿವನಾಗಬೇಕು ಎಂದು ನಾನು ವೈಯಕ್ತಿಕವಾಗಿ ಆಸೆಪಟ್ಟಿಲ್ಲ. ಮುಖ್ಯಮಂತ್ರಿಗಳ ಈ ಬಗ್ಗೆ ನಿರ್ಧಾರ ಮಾಡುತ್ತಾರೆ. ಮೇ ಬಳಿಕ ನಮ್ಮ ಸರ್ಕಾರ ಬರಲಿದೆ. ಆಗ ಅಭಿಮಾನದಿಂದ ಸಚಿವ ಸ್ಥಾನ ಕೇಳುತ್ತೇನೆ. ಈಗ ನಾನು ಸೋತಿದ್ದೇನೆ. ಹೇಗೆ ಕೇಳಲಿ. ಸಚಿವ ಸ್ಥಾನ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.

ವೈರಲ್​ ಆಗಿದೆ ಎನ್ನಲಾದ ಆಡಿಯೋದಲ್ಲೇನಿದೆ?: ಬಿಜೆಪಿ ಮುಖಂಡ ಯೋಗೇಶ್ವರ್ ಅವರ ಸಂಭಾಷಣೆ ಇದೆ ಎನ್ನಲಾದ ಆಡಿಯೋ ವೈರಲ್ಲಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್​ನ ಅನೇಕ ನಾಯಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಸಂಕ್ರಾಂತಿ ಹಬ್ಬದ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದೆ ಕಾದು ನೋಡಿ ಎಂಬ ಮಾತುಗಳಿವೆ ಎನ್ನಲಾಗಿದೆ. ಆದರೆ, ತಮ್ಮ ಭಾಷಣದಲ್ಲಿ ಯಾರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಅವರು ಹೆಸರುಗಳು ಆಡಿಯೋದಲ್ಲಿ ಇಲ್ಲ ಎನ್ನಲಾಗಿದೆ.

’’ಚನ್ನಪಟ್ಟಣದಲ್ಲಿ ನಮ್ಮದೇನು ನಡೆಯುವುದಿಲ್ಲ. ಅಲ್ಲಿ ಜೆಡಿಎಸ್ ಮತ್ತು ಕುಮಾರಸ್ವಾಮಿ ಅವರದೇ ಎನ್ನುವ ಮೂಲಕ ಚುನಾವಣೆಗೂ ಮುನ್ನವೇ ಯೋಗೇಶ್ವರ್ ಸೋಲೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸುಮಾರು 10 ನಿಮಿಷಗಳ ಈ ಆಡಿಯೋದಲ್ಲಿ ಹಲವಾರು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಪಕ್ಷ ಸೇರ್ಪಡೆಗೆ ಹೈಕಮಾಂಡ್ ನಮಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಅವರು ಯೆಸ್​​ ಎಂದರೆ ಅನೇಕ ಪ್ರಮುಖರು ಬಿಜೆಪಿಗೆ ಬರಲಿದ್ದಾರೆ’’ ಎಂದು ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗುತ್ತಿದೆ

ಚುನಾವಣೆಗೂ ಮೊದಲೇ ಆಪರೇಷನ್​ ಕಮಲ: ಆಡಿಯೋ ಸಂಭಾಷಣೆಯಲ್ಲಿ ಡಿ.ಕೆ.ಶಿವಕುಮಾರ್ ಸ್ಟ್ರೈಟ್ ಫಾರ್ವಡ್. ಅವರು ನಾನೇ ಸಿಎಂ ಆಗಬೇಕು ಎನ್ನುವ ಮಾತುಗಳಿವೆ. ಇದಕ್ಕೆ ನಮ್ಮದೇನು ಸಮಸ್ಯೆ ಇಲ್ಲ. ನಾವು ಸಂಕ್ರಾಂತಿ ಆದ ಮೇಲೆ ಬಹಳ ಡೆವಲ್ಪ್ಮೆಂಟ್ ಮಾಡ್ತೀವಿ. ಮೈಸೂರು ಭಾಗದಲ್ಲಿ ಕಾಂಗ್ರೆಸಿಗರು ಬಹಳ ಮಂದಿ ನಮ್ಮ ಪಕ್ಷಕ್ಕೆ ಬರುತ್ತಾರೆ. ಅವರಿಂದ ನಾಲ್ಕೈದು ಕ್ಷೇತ್ರದಲ್ಲಿ ನಮಗೆ ಪ್ಲಸ್ ಆಗುತ್ತದೆ. ಮಂಡ್ಯ, ಕೋಲಾರದಿಂದ ಒಬ್ಬರು ನಮ್ಮ ಕಡೆಗೆ ಬರುತ್ತಾರೆ. ಏಳೆಂಟು ಬಾರಿ ಸೆಂಟ್ರಲ್ ಮಿನಿಸ್ಟರ್ ಆಗಿದ್ದವರು ಬರುತ್ತಾರೆ. ನಮ್ಮ ಬಳಿ ಎಲ್ಲ ಮಾಹಿತಿ ಇದೆ. ನಾಳೆ ನಾಡಿದ್ದು ಕ್ಲಾರಿಟಿ ಸಿಗುತ್ತದೆ. ಚುನಾವಣೆ ನಂತರ ಆಪರೇಷನ್ ಕಮಲ ಮಾಡುವುದಿಲ್ಲ. ಚುನಾವಣೆಗೂ ಮೊದಲೇ ಆಪರೇಷನ್ ಕಮಲ ಮಾಡುತ್ತೇವೆ ಎನ್ನುವ ಸಂಭಾಷಣೆ ಆಡಿಯೋದಲ್ಲಿ ಇದೆ ಎನ್ನಲಾಗಿದೆ.

ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಗೆಲ್ಲಲಿ : ಸಿದ್ದರಾಮಯ್ಯ ಕೋಲಾರದಿಂದ ಸೋಲುತ್ತಾರೆ ಎಂದು ನಾನು ಹೇಳುವುದಿಲ್ಲ. ಮುಖ್ಯಮಂತ್ರಿಯಾಗಿದ್ದವರನ್ನು ನನ್ನ ಬಾಯಿಂದ ಸೋಲ್ತಾರೆ ಅಂತಾ ಏಕೆ ಹೇಳಲಿ? ಸಿದ್ದರಾಮಯ್ಯ ಗೆಲ್ಲಲಿ. ಅವರ ಗೆಲುವೆ ಅವರಿಗೆ ತೊಂದರೆ, ಅವರು ಗೆದ್ದರಷ್ಟೆ ಸಿಎಂ ಆಗೋದು? ಅವರ ಕೊನೆ ಪ್ರಯತ್ನ. ಕಾಂಗ್ರೆಸ್ ನಲ್ಲಿ ಪಾಪುಲರ್ ಲೀಡರ್ ಎಂದರೆ ಸಿದ್ದರಾಮಯ್ಯ ಎಂಬ ಸಂಭಾಷಣೆಯೂ ಆಡಿಯೋದಲ್ಲಿ ಇದೆ ಎನ್ನಲಾಗಿದೆ.

ನಾನು ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೀನಿ. ಅಶೋಕ್, ಡಿ.ಕೆ.ಶಿವಕುಮಾರ್ ವಿರುದ್ದ ನಿಲ್ಲಲಿ. ಅಶ್ವತ್ಥ್ ನಾರಾಯಣ್, ಕುಮಾರಸ್ವಾಮಿ ಮಗನ ವಿರುದ್ಧ ನಿಲ್ಲಲಿ ಇದೊಂದು ಹೋರಾಟ ಆಗಲಿ. ನಾನು ಸೋತರೂ ನನ್ನ ಮಂತ್ರಿ ಮಾಡ್ಲಿಲ್ಲವಾ? ಹಂಗೇ ಅವರನ್ನು ಮಂತ್ರಿ ಮಾಡುತ್ತಾರೆ ಎಂಬ ದಾಟಿಯಲ್ಲಿ ಆಡಿಯೋದಲ್ಲಿ ಪ್ರಸ್ತಾಪವಿದೆ.

ಅಮಿತ್​ ಶಾ ಹೊಂದಾಣಿಕೆ ರಾಜಕೀಯ ಬೇಡ ಅಂದಿದ್ದಾರೆ :ಇನ್ನು ಅಮಿತ್ ಶಾ ಹೇಳಿದ್ದಾರೆ, ಹೊಂದಾಣಿಕೆ ರಾಜಕೀಯ ಬೇಡ. ಅವರದ್ದು ಒಂಥರಾ ರೌಡಿಸಂ, ಪಾರ್ಟಿ ವಿರುದ್ಧ ಯಾರಾದರೂ ಮಾತನಾಡಿದರೆ ಅಷ್ಟೆ ಅವರ ಕಥೆ. ನಮ್ಮನೆಲ್ಲ ಮೊನ್ನೆ ಕರೆದು ಶಾ ಅವರೇ ಮಾತನಾಡಿದ್ದಾರೆ. ಪಾರ್ಟಿ ವಿರುದ್ಧ ಯಾರ್ಯಾರು ದ್ರೋಹ ಮಾಡ್ತಿದ್ದೀರಾ ಎಂದು ಗೊತ್ತು ಎಂದು ನೀಟಾಗಿ ಹೇಳಿದ್ದಾರೆ. ಇದೆಲ್ಲ ಹೊಂದಾಣಿಕೆ ಅಂತಾ ಜನರಲ್ಲಿ ಚರ್ಚೆಯಾಗುತ್ತಿದೆ. ಒಟ್ಟಿನಲ್ಲಿ ಏನೇ ಆಗ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತದೆ ಎಂಬ ವಿಚಾರದ ಬಗ್ಗೆಯೂ ಆಡಿಯೋದಲ್ಲಿ ಪ್ರಸ್ತಾಪವಾಗಿದೆ ಎನ್ನಲಾಗಿದೆ.

ಜೆಡಿಎಸ್​​ನ 20 ಅಭ್ಯರ್ಥಿಗಳು ಸೋಲುತ್ತಾರೆ: ಮುಖ್ಯವಾಗಿ 2023ರ ಚುನಾವಣೆಯಲ್ಲಿ ಜೆಡಿಎಸ್ 20 ಅಭ್ಯರ್ಥಿಗಳು ಸೋಲುತ್ತಾರೆ. ಇದರಲ್ಲಿ ಗುಬ್ಬಿ ಶ್ರೀನಿವಾಸ್, ಅರಸೀಕೆರೆ ಶಿವಲಿಂಗೇಗೌಡ, ಅರಕಲಗೂಡು ಎ.ಟಿ.ರಾಮಸ್ವಾಮಿ, ಬೆಂಗಳೂರಿನ ಗನ್ ಮಂಜು, ನೆಲಮಂಗಲದ ಶ್ರೀನಿವಾಸಮೂರ್ತಿ, ಮಳವಳ್ಳಿ ಅನ್ನದಾನಿ, ಮದ್ದೂರು ಡಿ.ಸಿ.ತಮ್ಮಣ್ಣ, ಮಂಡ್ಯ ಶ್ರೀನಿವಾಸ್, ಕೆ.ಆರ್.ನಗರದ ಸಾ.ರಾ.ಮಹೇಶ್ ಅವರುಗಳು ಹೀನಾಯವಾಗಿ ಸೋಲುತ್ತಾರೆ. ರಾಮನಗರದ ಮೂರು ಕ್ಷೇತ್ರದಲ್ಲಿ ಒಂದರಲ್ಲಿ ಜೆಡಿಎಸ್ ಸೋಲುತ್ತದೆ. ಇದರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಇದ್ದರೂ ಇರಬಹುದು. ಉತ್ತರ ಕರ್ನಾಟಕದಲ್ಲಿ 5 ಜೆಡಿಎಸ್ ಎಂಎಲ್ಎ ಇದ್ದಾರೆ. ಇದರಲ್ಲಿ ಮೂರು ಜನ ವಾಶ್ ಔಟ್ ಆಗ್ತಾರೆ. ಬಂಡೆಪ್ಪ ಕಾಶಪ್ಪನವರ್ ಜೊತೆಗೆ ಇನ್ನೊಬ್ಬ ಗೆಲ್ಲಬಹುದು ಅಷ್ಟೆ ಎಂದು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್​ ಆಗಿ ಸದ್ದು ಮಾಡುತ್ತಿದೆ.

ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಜನಾಭಿಪ್ರಾಯದ ಮೂಲಕ ಅಧಿಕಾರಕ್ಕೆ ಬರುವುದಿಲ್ಲ. ಆದರೆ, ಚುನಾವಣೆಗೂ ಮುನ್ನವೇ ಆಪರೇಷನ್ ಕಮಲ ಮಾಡಿ ನಾವೇ ಸರ್ಕಾರ ರಚನೆ ಮಾಡುತ್ತೇವೆ. ದೇವೇಗೌಡರು ಅಂಡರ್ ಸ್ಟ್ಯಾಂಡಿಂಗ್ ರಾಜಕೀಯ ಮಾಡುತ್ತಾರೆ ಕಣಯ್ಯ. ನಾನು ಕುಮಾರಸ್ವಾಮಿ ವಿರುದ್ಧ ನಿಲ್ಲುತ್ತಿದ್ದೇನೆ. ಇದೇ ಅಶೋಕ್ ಬಂದು ಡಿ.ಕೆ.ಶಿವಕುಮಾರ್ ವಿರುದ್ಧ ನಿಲ್ಲಲಿ. ಅಶ್ವತ್ಥ್ ನಾರಾಯಣ್ ರಾಮನಗರದಿಂದ ಕುಮಾರಸ್ವಾಮಿ ಮಗನ ವಿರುದ್ಧ ನಿಲ್ಲಲಿ? 2023ಕ್ಕೆ ಒಕ್ಕಲಿಗರ ನಾಯಕರು ಯಾರು?. ಕುಮಾರಸ್ವಾಮಿ ವಿರುದ್ಧ ಗೆದ್ದ ಮೇಲೆ ನಾನು ಎಲ್ಲೊ ಇರ್ತಿನಿ. ನಾನೇ ಸಿಎಂ ಆದರೂ ಆದೆ. ಹೀಗೆ ಸವಾಲೆಸೆದಿರುವುದು ಮಾತ್ರವಲ್ಲ 2023ರ ವಿಧಾನಸಭೆ ಚುನಾವಣೆ ಕುರಿತು ಭವಿಷ್ಯ ನುಡಿದಿರುವುದು ಆಡಿಯೋದಲ್ಲಿದೆ.

ಸಿದ್ದರಾಮಯ್ಯಗೆ ಪಟ್ಟ ಕಟ್ಟೋಕೆ ಅವರ ಲೀಡರ್​ಗಳಿಗೆ ಇಷ್ಟ ಇಲ್ಲ : ಮೈಸೂರು ಭಾಗದಲ್ಲಿ ನಾವು, ದೇವೇಗೌಡರು ಅಂಡರ್ ಸ್ಟ್ಯಾಂಡಿಂಗ್ ಮಾಡಿದರೆ ನನ್ನ ಅಭಿಪ್ರಾಯದ ಪ್ರಕಾರ ಬಿಜೆಪಿ ಸರ್ಕಾರ ಬರೋದಿಲ್ಲ. ಜನಾಭಿಪ್ರಾಯದ ಮೂಲಕವೂ ಬಿಜೆಪಿ ಬರೋದಿಲ್ಲ. ಆದರೆ, ನಾವು ಬಿಜೆಪಿ ಸರ್ಕಾರ ರಚನೆ ಮಾಡ್ತಿವಿ. ಮಾವಿನ ಹಣ್ಣನ್ನು ಮರೆದಲ್ಲೇ ಹಣ್ಣು ಮಾಡೋಕೊ, ತಂದು ಕೆಮಿಕಲ್ ಹಾಕಿ ಹಣ್ಣು ಮಾಡೋಕು ವ್ಯತ್ಯಾಸ ಇದೆ. ನಾವು ಎರಡಕ್ಕೂ ರೆಡಿ ಇದ್ದಿವಿ. ಕಾಂಗ್ರೆಸ್ ಸ್ಟ್ರಾಂಗ್ ಇಲ್ಲ, ಸಿದ್ದರಾಮಯ್ಯ ಅವರಿಗೆ ಪಟ್ಟ ಕಟ್ಟೋಕೆ ಅವರ ಲೀಡರ್​ ಳಿಗೆ ಇಷ್ಟ ಇಲ್ಲ. ಡಾ.ಪರಮೇಶ್ವರ್ ಸಹ ಇದರಲ್ಲಿ ಒಬ್ಬರು ಎಂದು ಆಡಿಯೋದಲ್ಲಿ ಹೇಳಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ :ಬಸನಗೌಡ ಪಾಟೀಲ್​ ಯತ್ನಾಳ್​ ವಿರುದ್ಧ ವಾಗ್ದಾಳಿ ನಡೆಸಿದ ಮುರುಗೇಶ್​ ನಿರಾಣಿ

Last Updated : Jan 14, 2023, 8:24 PM IST

ABOUT THE AUTHOR

...view details