ಬೆಂಗಳೂರು: ಬಿಜೆಪಿ ಶಾಸಕರು ದಿನದಿಂದ ದಿನಕ್ಕೆ ಭ್ರಷ್ಟಾಚಾರವನ್ನು ಹೆಚ್ಚಿಸುತ್ತಿದ್ದು, ಬಿಜೆಪಿ ಪಕ್ಷವು ಬ್ರೋಕರ್ ಜನತಾ ಪಕ್ಷವಾಗಿ ಹೊರಹೊಮ್ಮಿದೆ ಎಂದು ಕೆಪಿಸಿಸಿ ಸಂವಹನ ವಿಭಾಗ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಪರಸಪ್ಪ ಅವರು ಒಂದು ವಿಡಿಯೋದಲ್ಲಿ ನನ್ನ ಮಗ ಪಿಎಸ್ಐ ಆಗಲು ಬಯಸಿದಾಗ ಶಾಸಕರ ಆಪ್ತರು ಬಂದು ನಾವು ನಿಮ್ಮ ಕೆಲಸ ಮಾಡುತ್ತೇವೆ ಎಂದು ಕಾರಟಗಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಒಂದು ಮೊತ್ತಕ್ಕೆ ಡೀಲ್ ಮಾಡಿ, 2020 ಆಗಸ್ಟ್ನಲ್ಲಿ ಕನಕಗಿರಿ ಶಾಸಕರು ಶಾಸಕರ ಭವನಕ್ಕೆ ಕರೆಸಿಕೊಂಡರು. ಅಲ್ಲಿ ಸಿಬ್ಬಂದಿ ಹೆಚ್ಚಾಗಿರುವ ಕಾರಣ, ಶಾಸಕರ ಕಾರಿನಲ್ಲೇ ಕರೆದುಕೊಂಡು ಹೋಗುತ್ತಾರೆ.
ವ್ಯವಹಾರ ಮಾಡಿ 30 ಲಕ್ಷಕ್ಕೆ ಡೀಲ್ ನಿರ್ಧರಿಸುತ್ತಾರೆ ಎಂದು ಪರಸಪ್ಪ ಅವರೇ ವಿಡಿಯೋದಲ್ಲಿ ಒಪ್ಪಿಕೊಂಡಿದ್ದಾರೆ. ಈ ಡೀಲ್ ನಿಗದಿಯಾದ ನಂತರ ಮುಂಗಡವಾಗಿ 15 ಲಕ್ಷ ನೀಡುತ್ತಾರೆ. ನಾವು ಯಾವಾಗಲೂ ಹೇಳುವಂತೆ ವಿಧಾನಸೌಧ ವ್ಯಾಪಾರ ಸೌಧವಾಗಿದೆ. ಶಾಸಕರ ಭವನದಲ್ಲಿ ಡೀಲ್ ಮಾಡಿದ್ದಾರೆ ಎಂದರೆ ಇವರಿಗೆ ನಾಚಿಕೆ ಆಗುವುದಿಲ್ಲವೇ? ಕೆಲಸ ಆಗದ ನಂತರ ಹಣ ಕೇಳಿದಾಗ ನಾನು ಹಣವನ್ನು ಸರ್ಕಾರಕ್ಕೆ ಕೊಟ್ಟಿರುವುದಾಗಿ ಹೇಳುತ್ತಾರೆ. ಈ ಸರ್ಕಾರ ಎಂದರೆ ವಿಧಾನಸೌಧ ಅಲ್ಲವೇ? ಎಂದು ಪ್ರಶ್ನಿಸಿದರು.
ಬಿಜೆಪಿ ಶಾಸಕರು, ಸಚಿವರು ಬ್ರೋಕರ್:ಶಾಸಕರು ಹಣ ವಾಪಸ್ ಮಾಡದ ಹಿನ್ನೆಲೆಯಲ್ಲಿ ಈ ಪ್ರಕರಣ ಬಹಿರಂಗವಾಗಿದೆ. ಬಿಜೆಪಿ ಶಾಸಕರು, ಸಚಿವರು ಬ್ರೋಕರ್ಗಳಾಗಿದ್ದಾರೆ. ಬಿಜೆಪಿ ಭಾರತೀಯ ಜನತಾ ಪಕ್ಷದಿಂದ ಭ್ರಷ್ಟ ಜನತಾ ಪಕ್ಷವಾಗಿತ್ತು. ಈಗ ಶಾಸಕರು ಬ್ರೋಕರ್ ಜನತಾ ಪಕ್ಷವಾಗಿದೆ. ಈ ಪ್ರಕರಣದಲ್ಲಿ ಇಷ್ಟೆಲ್ಲ ಆದರೂ ಶಾಸಕರಿಗೆ ನೋಟೀಸ್ ಹೋಗಿಲ್ಲ.
ಸುಮೋಟೋ ಪ್ರಕರಣ ದಾಖಲಾಗಿಲ್ಲ. ಮುಖ್ಯಮಂತ್ರಿಗಳು ಶಾಸಕರನ್ನು ಕರೆದು ಪ್ರಶ್ನೆ ಮಾಡಿಲ್ಲ ಯಾಕೆ? ಆಗ ಗೃಹಮಂತ್ರಿಯಾಗಿದ್ದವರು ಬೊಮ್ಮಾಯಿ ಅವರೇ ಅಲ್ಲವೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು. ವಿಧಾನಸಭೆಯಲ್ಲಿ ಸಾಕಷ್ಟು ವಿಚಾರಗಳ ಮೇಲೆ ಚರ್ಚೆಗೆ ಅವಕಾಶ ಕೇಳುತ್ತೇವೆ. ಅವಕಾಶ ಸಿಗದಿದ್ದರೆ ಹೋರಾಟ ಅನಿವಾರ್ಯ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಸುದ್ದಿಗೋಷ್ಠಿ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
'ಸದನದಲ್ಲಿ ಚರ್ಚಿಸಲು ಭ್ರಷ್ಟಾಚಾರ, ಬೆಳೆ ಹಾನಿ, ಬೆಂಗಳೂರು, ಕೆಪಿಎಸ್ಸಿ, ಕೆಇಎ ಅಕ್ರಮ ಸೇರಿದಂತೆ ಹಲವು ವಿಚಾರಗಳಿವೆ. ಶಾಸಕಾಂಗ ಪಕ್ಷದ ನಾಯಕರು ಈ ಎಲ್ಲ ವಿಚಾರ ಪಟ್ಟಿ ಮಾಡಿಕೊಂಡು ಒಂದೊಂದೇ ಚರ್ಚೆಗೆ ತೆಗೆದುಕೊಳ್ಳುತ್ತಾರೆ. ನಾನು ಶೇ.40 ಸರ್ಕಾರದ ಬಗ್ಗೆ ಹಾಗೂ ನೇಮಕಾತಿ ಅಕ್ರಮದ ಬಗ್ಗೆ ಚರ್ಚೆ ಮಾಡುತ್ತೇವೆ. ಸ್ಪೀಕರ್ ಅವರು ಕಳೆದ ಬಾರಿ ಅವಕಾಶ ನೀಡಲಿಲ್ಲ. ಈ ಬಾರಿ ಅವಕಾಶ ನೀಡಬೇಕು. ಚರ್ಚೆಗೆ ಅವಕಾಶ ನೀಡದಿದ್ದರೆ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.