ಬೆಂಗಳೂರು:ನಮ್ಮನ್ನು ಅಮಾನತು ಮಾಡಿದ ಮಾತ್ರಕ್ಕೆ ನಮ್ಮ ಧ್ವನಿಯನ್ನು ಅಡಗಿಸಿಬಿಟ್ಟೆ ಎಂಬ ಭ್ರಮೆ ಬೇಡ. ಎಲ್ಲರಿಗೂ ಅವರವರ ಸರದಿ ಕಾಯುತ್ತಿರುತ್ತದೆ. ಆಷಾಢದ ಬಳಿಕ ಶ್ರಾವಣ ಬಂದೇ ಬರುತ್ತದೆ, ಕಾಯಬೇಕಷ್ಟೇ ಎಂದು ಪ್ರಸಕ್ತ ಅಧಿವೇಶನದಿಂದ ಅಮಾನತು ಮಾಡಿದ ಆದೇಶಕ್ಕೆ ಪ್ರತಿಯಾಗಿ ಸ್ಪೀಕರ್ ಯು.ಟಿ. ಖಾದರ್ಗೆ ಶಾಸಕ ಸುನೀಲ್ ಕುಮಾರ್ ಪತ್ರ ಬರೆದಿದ್ದಾರೆ.
ಪತ್ರದ ವಿವರ: "ಸಭಾಧ್ಯಕ್ಷರೇ, ನಿಮ್ಮಿಂದ ನಾವು ಇಂತಹದೊಂದು ನಡೆ ನಿರೀಕ್ಷಿಸಿರಲಿಲ್ಲ. ಸಭಾಧ್ಯಕ್ಷ ಪೀಠದ ಮೇಲೆ ಕುಳಿತು ಎಲ್ಲರನ್ನೂ ಸಮಾನರೆಂದು ಪರಿಗಣಿಸಿ ಪ್ರಜಾಪ್ರಭುತ್ವದ ಮೌಲ್ಯವನ್ನು ಖಾದರ್ ಸಮರ್ಥವಾಗಿ ಎತ್ತಿ ಹಿಡಿಯಬಹುದೆಂಬ ನಮ್ಮ ನಿರೀಕ್ಷೆ ಇಂದು ಕುಸಿದು ಹೋಗಿದೆ. ರಾಜ್ಯದ ಶ್ರೇಷ್ಠ ಸ್ಪೀಕರ್ ಎಂದು ಮಾದರಿ ಹೆಜ್ಜೆ ಬಿಟ್ಟು ಹೋದ ದಿ. ವೈಕುಂಠ ಬಾಳಿಗರ ಜಿಲ್ಲೆಯಿಂದ ಬಂದ ನೀವು ಅವರದ್ದೇ ಮಾರ್ಗದಲ್ಲಿ ನಡೆಯಬಹುದೆಂದು ವೈಯಕ್ತಿಕವಾಗಿ ನಾನು ಭಾವಿಸಿದ್ದೆ. ಆದರೆ, ನೀವು ನಮ್ಮೆಲ್ಲರ ನಂಬಿಕೆಯನ್ನು ಹುಸಿಗೊಳಿಸಿ ವಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದ್ದೀರಿ. ನನ್ನನ್ನು ಸೇರಿ ಹತ್ತು ಜನರನ್ನು ಅಮಾನತುಗೊಳಿಸುವ ಮೂಲಕ ಕಾಂಗ್ರೆಸ್ ನಾಯಕರ ಎದೆಯಲ್ಲಿ ಅಂತಸ್ಥವಾದ ಹಿಟ್ಲರ್ನನ್ನು ವಿಧಾನಸಭೆಯ ಮೂಲಕ ಪ್ರದರ್ಶನಕ್ಕೆ ಇಟ್ಟಿರಿ ಎನ್ನದೆ ವಿಧಿ ಇಲ್ಲ."
"ನಾನು ಹಾಗೂ ನೀವು ಹೆಚ್ಚು ಕಡಿಮೆ ಒಂದೇ ವರ್ಷ ವಿಧಾನಸಭೆಯನ್ನು ಪ್ರವೇಶ ಮಾಡಿದ್ದೆವು. 2004 ರಿಂದ ಇಲ್ಲಿಯವರೆಗೆ ನಾನು ಸದನದಲ್ಲಿ ಹೇಗೆ ನಡೆದುಕೊಂಡಿದ್ದೇನೆ ಎಂಬುದಕ್ಕೆ ನೀವು ಕೂಡ ಸಾಕ್ಷಿಯಾಗಿದ್ದೀರಿ. ಅನಾರೋಗ್ಯ ಹಾಗೂ ಅತಿ ತುರ್ತು ಸಂದರ್ಭವನ್ನು ಹೊರತುಪಡಿಸಿದರೆ ನಾನು ಸದನಕ್ಕೆ ಗೈರಾದ ದಿನಗಳೇ ಇಲ್ಲ. ವಿಧಾನಸಭೆಯ ಕಾರ್ಯ ಕಲಾಪಗಳಲ್ಲಿ ಭಾಗಿಯಾಗುವುದು ಪ್ರತಿಯೊಬ್ಬ ಶಾಸಕನ ಕರ್ತವ್ಯ ಎಂದು ಭಾವಿಸಿ ಅದರಂತೆ ನಡೆದುಕೊಂಡವರು ನಾವು. ಆದರೆ, ನಿಮ್ಮ ಪಕ್ಷದ ಅಜೆಂಡಾವನ್ನು ಪೋಷಿಸುವುದಕ್ಕಾಗಿ ನಾವು ನಮ್ಮ ಶ್ರದ್ಧಾಕೇಂದ್ರ ಪ್ರವೇಶಿಸುವುದಕ್ಕೆ ನಿರ್ಬಂಧ ಹಾಕಿಬಿಟ್ಟಿರಲ್ಲ. ಇದಕ್ಕಾಗಿ ನಿಮಗೊಂದು ದೀರ್ಘದಂಡ ಪ್ರಣಾಮ, ಅನಂತಾನಂಥ ಧನ್ಯವಾದ."