ಬೆಂಗಳೂರು:ಭಾರತೀಯ ಜನತಾ ಪಕ್ಷವು ವ್ಯವಸ್ಥೆಯ ಸಕಾರಾತ್ಮಕ ಬದಲಾವಣೆಗೆ ಪೂರಕವಾಗಿದೆ. ಅಧಿಕಾರಕ್ಕೆ ಬಂದ ಮೇಲೆ ಹಿಂದೊಮ್ಮೆ ಊಹಿಸಲಿಕ್ಕೂ ಆಗದಿದದ್ದಂತಹ ಕಾರ್ಯಗಳು ಕೇಂದ್ರ ಮತ್ತು ರಾಜ್ಯದಲ್ಲಿ ಆಗಿವೆ ಎಂದು ಸಚಿವರೂ ಆದ ಮಲ್ಲೇಶ್ವರ ಶಾಸಕ ಡಾ. ಸಿ.ಎನ್ ಅಶ್ವತ್ಥ ನಾರಾಯಣ ಹೇಳಿದರು.
ಮಲ್ಲೇಶ್ವರ ಮಂಡಲದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, 370ನೇ ವಿಧಿ ರದ್ದತಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸೇರಿದಂತೆ ಹಲವಾರು ಕಾರ್ಯಗಳು ಪಕ್ಷದ ಸಂಕಲ್ಪ ಬಲದಿಂದ ಕಾರ್ಯಗತಗೊಂಡಿವೆ ಎಂದರು.
ಭಾರತವು ಜಾಗತಿಕ ಮಟ್ಟದಲ್ಲಿ ಸದೃಢವಾಗಿ ಮುನ್ನಡೆಯುತ್ತಿದೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವು ತನ್ನ ನಿಲುವುಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾ ಜಗತ್ತಿನ ಗಮನವನ್ನು ತನ್ನೆಡೆಗೆ ಸೆಳೆದಿದೆ. ಸಮಾಜದಲ್ಲಿ ಜನರ ಪರಿಶ್ರಮವು ಪರಿಪೂರ್ಣವಾಗಿ ಈಡೇರಬೇಕಾದರೆ ಪೂರಕವಾದ ವ್ಯವಸ್ಥೆ ಇರುವುದು ಕೂಡ ಮುಖ್ಯ. ಇಂತಹ ವ್ಯವಸ್ಥೆಯನ್ನು ರೂಪಿಸುವುದೇ ಬಿಜೆಪಿ ಧ್ಯೇಯ ಎಂದರು.
ಬಿಜೆಪಿ ಮಹಿಳಾ ಮಂಡಲದ ಅಧ್ಯಕ್ಷೆ ಕಾವೇರಿ ಕೇದಾರನಾಥ್, ಗೀತಾಂಜಲಿ, ಆಶಾ ರಾವ್, ಉಷಾ, ರಜನಿ ಪೈ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ:ಕುಮಾರಸ್ವಾಮಿ ಟ್ವೀಟ್ಗೆ ಸಚಿವ ಅಶ್ವತ್ಥ ನಾರಾಯಣ ವಾಗ್ದಾಳಿ