ಬೆಂಗಳೂರು: ಆಡಬಾರದ್ದು ಆಡಿದ್ದಕ್ಕೆ ಆಗಬಾರದು ಆಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೋರ್ಟ್ ಆದೇಶದ ಪ್ರಕಾರ ಸ್ಪೀಕರ್ ಅನರ್ಹಗೊಳಿಸಿದ್ದಾರೆ. ಈ ನೆಲದ ಕಾನೂನು ಎಲ್ಲರಿಗೂ ಒಂದೇ. ರಾಹುಲ್ ಗಾಂಧಿಗೂ ಒಂದೇ ಜ್ಞಾನೇಂದ್ರಗೂ ಒಂದೇ. ಕಾನೂನು ಕಾಯ್ದೆ ಪ್ರಕಾರ ಅನರ್ಹಗೊಳ್ಳಿಸಿದ್ದಾರೆ ಎಂದು ಹೇಳಿದ್ದಾರೆ.
ನೆಲದ ಕಾನೂನಿನ ಪ್ರಕಾರ ಎಲ್ಲರೂ ಸಮಾನರು ಮತ್ತು ಕಾನೂನಿಗಿಂತ ಯಾರೂ ಮೇಲಿಲ್ಲ ಎಂಬ ಸಂದೇಶವೂ ಇದರಿಂದ ಸ್ಪಷ್ಟವಾಗಿದೆ. ಸಿದ್ದರಾಮಯ್ಯಗೆ ಯಾವುದೇ ಪಾಠ ಹೇಳುವ ನೈತಿಕ ಹಕ್ಕಿಲ್ಲ. ಅವರು ತುರ್ತು ಪರಿಸ್ಥಿತಿ ಹೇರುವ ಮೂಲಕ ಮಾಡಬಾರದ ಅಚಾತುರ್ಯವನ್ನು ಪ್ರಜಾಪ್ರಭುತ್ವದ ಮೇಲೆ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಆರ್ ಅಶೋಕ್, ರಾಹುಲ್ ಗಾಂಧಿಯನ್ನು ಸ್ಪೀಕರ್ ಅನರ್ಹಗೊಳಿಸಿದ್ದನ್ನು ನಾನು ಸ್ವಾಗತ ಮಾಡುತ್ತೇನೆ. ಈ ರೀತಿ ರಾಜಕಾರಣಿಯೊಬ್ಬರು ಮಾತನಾಡೋದು ಸಮಾಜಕ್ಕೆ ಒಳ್ಳೆಯದಲ್ಲ. ನಾಲಗೆ ಹರಿಬಿಟ್ಟು ಮಾತನಾಡೋರಿಗೆ ಕೋರ್ಟ್ ಎಚ್ಚರಿಕೆ ಗಂಟೆ ಕೊಟ್ಟಿದೆ. ಹಿಂದೆ ಇದಕ್ಕೆ ಸಂಬಂಧಿಸಿದ ಬಿಲ್ ತಂದಾಗ ರಾಹುಲ್ ಗಾಂಧಿ ವಿರೋಧಿಸಿದ್ದರು. ಬಹುಶಃ ಅವರಿಗೆ ಈ ರೀತಿ ಆಗಲಿದೆ ಎನ್ನುವ ದುರಾದೃಷ್ಟಿ ಇತ್ತೇನೋ ಎಂದು ಲೇವಡಿ ಮಾಡಿದರು.
ಇನ್ಮೇಲಾದ್ರು ಲಂಡನ್ನಲ್ಲಿ ಅಲ್ಲಿ ಇಲ್ಲಿ ಸುತ್ತಾಡೋದು ಬಿಟ್ಟು, ಎಲ್ಲಾ ಕಡೆ ಪ್ರಚಾರ ಮಾಡ್ಲಿ. ನಾವು ಅವರಿಗೆ ದೊಡ್ಡ ಹಾರ ಹಾಕಿ ಸನ್ಮಾನಿಸುತ್ತೇವೆ. ಎರಡು ವರ್ಷ ಶಿಕ್ಷೆ ಆದರೆ ಅನರ್ಹಗೊಳಿಸುವುದನ್ನು ತಡೆಯಲು ಸಂಸತ್ತಿನಲ್ಲಿ ಒಂದು ಮಸೂದೆ ಬಂದಿತ್ತು. ಆದರೆ ಅದಕ್ಕೆ ಸ್ವತಃ ರಾಹುಲ್ ಗಾಂಧಿ ವಿರೋಧ ಮಾಡಿದ್ದರು. ಬಹುಶಃ ಅವರಿಗೆ ದುರಾದೃಷ್ಟಿ ಇರಬೇಕು. ಮುಂದೆ ನನಗೆ ಹೀಗೆ ಆಗುತ್ತೆ, ಅದಕ್ಕೆ ಕಾಯ್ದೆ ಬೇಡ ಎಂದು ಹೇಳಿರಬಹುದು ಎಂದು ವ್ಯಂಗ್ಯವಾಗಿ ಹೇಳಿದರು.