ಬೆಂಗಳೂರು:ರಾಮನಗರ ಜಿಲ್ಲೆಯಲ್ಲಿ ಶನಿವಾರ ನಡೆದಿರುವ ಗೋವುಗಳ ಸಾಗಣೆ ಮತ್ತು ವಾಹನ ಚಾಲಕನ ಅನುಮಾನಾಸ್ಪದ ಸಾವು ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ನಾಯಕರು ಕಿಡಿಕಾರಿದ್ದಾರೆ.ಸಾತನೂರಿನಲ್ಲಿ ಜಾನುವಾರು ಸಾಗಿಸುತ್ತಿದ್ದ ವ್ಯಕ್ತಿಯ ಕೊಲೆ ಸರ್ವಜನಾಂಗದ ಶಾಂತಿಯ ತೋಟವಾದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ಬೆಳೆಸಿದ ಪೋಷಿಸಿರುವ ಅಸಹನೆ, ಅಸಹಿಷ್ಣುತೆಯೇ ಕಾರಣ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿದ ಅವರು, ಕನಕಪುರ ತಾಲೂಕಿನ ಸಾತನೂರು ಬಳಿ ಜಾನುವಾರು ಸಾಗಣೆ ಮಾಡುತ್ತಿದ್ದ ಕಾರಣಕ್ಕೆ ಯುವಕನೊಬ್ಬ ಹತ್ಯೆಗೀಡಾಗಿರುವುದು ಸರ್ವಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ಕಳೆದ ಮೂರೂವರೆ ವರ್ಷದಲ್ಲಿ ಬಿಜೆಪಿ ಸರ್ಕಾರದ ವ್ಯವಸ್ಥಿತವಾಗಿ ಬೆಳೆಸಿ ಪೋಷಿಸಿರುವ ಅಸಹನೆ, ಅಸಹಿಷ್ಣುತೆಯೇ ಕಾರಣ ಎಂದು ದೂರಿದ್ದಾರೆ.
ರಾಜ್ಯದಲ್ಲಿ ಶಾಂತಿ ಸುವ್ಯಸ್ಥೆ ಎಲ್ಲಿಗೆ ಬಂದು ನಿಂತಿದೆ- ಹೆಚ್ ಡಿಕೆ ಪ್ರಶ್ನೆ ಜಾನುವಾರು ಸಾಗಿಸುತ್ತಿದ್ದಾನೆ ಎಂದರೆ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬಹುದಿತ್ತು ಅಥವಾ ಮಾಹಿತಿ ನೀಡಬಹುದಿತ್ತು. ಅದರ ಹೊರತಾಗಿ ಹತ್ಯೆ ಮಾಡುವುದು ಎಂದರೆ ಅರ್ಥವೇನು? ಚುನಾವಣೆ ಹೊತ್ತಿನಲ್ಲಿ ಇದರ ಹಿಂದಿರುವ ಷಡ್ಯಂತ್ರ ಎಂಥದ್ದು ಎಂದು ಯಾರಿಗಾದರೂ ಅರ್ಥ ಆಗುವಂತದ್ದೇ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಎಲ್ಲಿಗೆ ಬಂದು ನಿಂತಿದೆ? ಎಂದು ಪ್ರಶ್ನಿಸಿದ್ದಾರೆ.
ಯುವಕನ ಕೊಲೆಯಾದ ರಾತ್ರಿ ಆರೋಪಿ ಮತ್ತವನ ಸಹಚರರು ರಸ್ತೆಯಲ್ಲಿ ಕ್ರಿಕೆಟ್ ಬ್ಯಾಟುಗಳನ್ನು ಹಿಡಿದು ಗೋ ರಕ್ಷಕರ ಸೋಗು ಹಾಕಿಕೊಂಡು ಪಹರೆ ಕಾಯುವ ನಾಟಕದ ವಿಡಿಯೋ ಮಾಡಿ ತಮ್ಮ ಜಾಲತಾಣದಲ್ಲಿಯೇ ಹಾಕಿಕೊಂಡಿದ್ದಾರೆ. ಅವರ ಉದ್ದೇಶವೇ ಬೇರೆ ಇತ್ತು ಎನ್ನುವುದು ಸ್ಪಷ್ಟ. ಇದಕ್ಕಿಂತ ಸಾಕ್ಷಿ ಬೇಕೆ? ಕೂಡಲೇ ಪೊಲೀಸರು ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ರಾತ್ರಿ ಹೊತ್ತು ಇವರು ರಸ್ತೆಯಲ್ಲಿ ಕ್ರಿಕೆಟ್ ಬ್ಯಾಟುಗಳನ್ನು ಹಿಡಿದುಕೊಂಡು ಗಸ್ತು ತಿರುಗುತ್ತಿದ್ದರು ಎಂದರೆ, ಇವರಿಗೆ ಪೊಲೀಸರ ಮೌನ ಅನುಮತಿ ಇತ್ತಾ? ಇಲ್ಲವೇ, ಇವರೇನು ಮಫ್ತಿ ಪೊಲೀಸರಾ? ಅಥವಾ ಗೋ ರಕ್ಷಣೆ ನೆಪದಲ್ಲಿ ದರೋಡೆಗೆ ಹೊಂಚು ಹಾಕಿ ಕೂತಿದ್ದರಾ? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ ಎಂದಿದ್ದಾರೆ.
ಅನಾಥ ಗೋವುಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ- ಕುಮಾರಸ್ವಾಮಿ :ನಿಜಕ್ಕಾದರೆ, ಗೋ ಸಂಕ್ಷಣೆಯ ಸೋಗಿನ ಈ ಸೋಗಲಾಡಿಗಳಿಗೆ ಆಶ್ರಯ, ಮೇವು ಇಲ್ಲದೆ ಬೀದಿಪಾಲಾಗಿರುವ ಅನಾಥ ಗೋವುಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಆದರೆ, ಜಾತಿ ಧರ್ಮಗಳ ನಡುವೆ ಬೆಂಕಿ ಇಟ್ಟು ಚಳಿ ಕಾಯಿಸಿಕೊಳ್ಳುವುದೇ ಇವರ ಜಾಯಮಾನ. ಪೊಲೀಸ್ ವ್ಯವಸ್ಥೆ ಗಾಢ ನಿದ್ದೆಯಲ್ಲಿದೆಯಾ? ಎಂದು ಪ್ರಶ್ನಿಸಿದ್ದಾರೆ.
ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಈ ಘಟನೆ ನಡೆದಿದೆ. ರಾಜ್ಯದಲ್ಲಿ ಕೋಮು ಸೌಹಾರ್ದ ಕದಡಿ ಹಿಂಸಾಚಾರ ಸೃಷ್ಟಿಸುವುದು ಮತ್ತು ಚುನಾವಣೆ ಹೊತ್ತಿನಲ್ಲಿ ಕರ್ನಾಟಕವನ್ನು ಕದಡುವುದೇ ಇವರ ದುರುದ್ದೇಶ ಆಗಿರುವಂತಿದೆ. ನನಗೆ ಈ ಹತ್ಯೆ ಆಘಾತ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಜಾನುವಾರು ಸಾಗಿಸುತ್ತಿದ್ದ ವ್ಯಕ್ತಿ ಅನುಮಾನಾಸ್ಪದ ಸಾವು: ಕೊಲೆ ಎಂದು ದೂರು ದಾಖಲಿಸಿದ ಕುಟುಂಬಸ್ಥರು