ಬೆಂಗಳೂರು:189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ರಾಜ್ಯ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಹಿರಿಯರು ಹಲವು ಬಾರಿ ಆಯ್ಕೆಯಾಗಿದ್ದವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಬಂಡಾಯದ ಬಿಸಿ ಹೆಚ್ಚಾಗಿದ್ದು, ರೆಬೆಲ್ಗಳ ಮನವೊಲಿಕೆಗೆ ರಾಜ್ಯ ನಾಯಕರು ಮುಂದಾಗಿದ್ದಾರೆ. ಈ ಸಂಬಂಧ ಪಕ್ಷದ ಕಚೇರಿಯಲ್ಲಿ ತುರ್ತು ಸಭೆ ನಡೆಸಿ ಬಂಡಾಯ ಶಮನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯ ನಾಯಕರು ಚರ್ಚೆ ನಡೆಸಿದ್ದಾರೆ.
ಹೈಕಮಾಂಡ್ನಿಂದ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ರಾಜ್ಯ ಬಿಜೆಪಿಗೆ ಬಂಡಾಯದ ಬೇಗುದಿಗೆಗೆ ಸಿಲುಕಿದೆ. ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೈಕಮಾಂಡ್ ನಿರ್ಧಾರಕ್ಕೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ ದೆಹಲಿಗೆ ತೆರಳಿದ್ದರೆ, ಮತ್ತೋರ್ವ ಹಿರಿಯ ನಾಯಕ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಚುನಾವನಾ ರಾಜಕೀಯ ನಿವೃತ್ತಿ ಘೋಷಿಸಿದ್ದು, ಅವರ ಬೆಂಬಲಿಗರಿಂದ ಶಿವಮೊಗ್ಗದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಮತ್ತೊಂದೆಡೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು ಪಕ್ಷ ತೊರೆಯಲು ಸಿದ್ದತೆ ನಡೆಸಿದ್ದಾರೆ. ಕಳೆದ ಬಾರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಮಾಜಿ ಸಚಿವ ಆರ್.ಶಂಕರ್ ಟಿಕೆಟ್ ಕೈತಪ್ಪಿದ್ದರಿಂದ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷಕ್ಕೂ ಗುಡ್ ಬೈ ಹೇಳುತ್ತಿದ್ದಾರೆ. ಇನ್ನೊಂದೆಡೆ ಹಾಲಿ ಸಚಿವ ಅಂಗಾರ ಟಿಕೆಟ್ ಕೈ ತಪ್ಪಿದ್ದರಿಂದಾಗಿ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಹಿರಿಯ ನಾಯಕ ಅಪ್ಪು ಪಟ್ಟಣಶೆಟ್ಟಿ ಕೂಡ ಅಸಮಾಧಾನ ಗೊಂಡಿದ್ದಾರೆ.
ಇನ್ನು ಬಿಜೆಪಿ ಸೋತಿದ್ದ ಕ್ಷೇತ್ರವಾದ ಬ್ಯಾಟರಾಯನಪುರದಲ್ಲಿ ತಮ್ಮೇಶ್ ಗೌಡಗೆ ಟಿಕೆಟ್ ನೀಡಿದ್ದನ್ನು ಖಂಡಿಸಿ ಮುನೀಂದ್ರ ಕುಮಾರ್ ಬಂಡಾಯ ಎದ್ದಿದ್ದರೆ, ಚಾಮರಾಜಪೇಟೆಯಲ್ಲಿ ಭಾಸ್ಕರ್ ರಾವ್ಗೆ ಟಿಕೆಟ್ ನೀಡಿದ್ದನ್ನು ಕಾರ್ಯಕರ್ತರು ಖಂಡಿಸಿದ್ದು, ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋವಿಂದರಾಜನಗರ ಕ್ಷೇತ್ರದಲ್ಲಿ ಸೋಮಣ್ಣ ಪುತ್ರನಿಗೆ ಟಿಕೆಟ್ ಕೊಡುವಂತೆ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಈ ಎಲ್ಲ ಕ್ಷೇತ್ರಗಳಲ್ಲಿಯೂ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟುತ್ತಿದೆ.