ಬೆಂಗಳೂರು: ಬಿಜೆಪಿ ಪಕ್ಷ ರಾಜ್ಯಕ್ಕೆ ತಂದಿರುವ ಕೆಟ್ಟ ಹೆಸರನ್ನು ತೊಳೆಯುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸ ಬಳಿ ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ವಿರುದ್ಧ ದೊಡ್ಡ ಹೋರಾಟ ಮಾಡುತ್ತಿದೆ. ಬಿಜೆಪಿ ರಾಜ್ಯಕ್ಕೆ ಕೆಟ್ಟ ಹೆಸರನ್ನು ತಂದಿದೆ. ಅದನ್ನು ತೊಳೆಯುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದು ಹೇಳಿದರು.
ಬೆಳಗಾವಿಯಿಂದ ಕಾಂಗ್ರೆಸ್ ಹೋರಾಟವನ್ನು ಆರಂಭಿಸುತ್ತಿದೆ. ಗಾಂಧೀಜಿ ಬ್ರಿಟಿಷರೇ ತೊಲಗಿ ಎಂದು ಆಂಗ್ಲರ ವಿರುದ್ಧ ಹೋರಾಟವನ್ನು ಆರಂಭಿಸಿದ್ದರು. ಅದೇ ರೀತಿ ಕಾಂಗ್ರೆಸ್ ಸಹ ಹೋರಾಟ ಮಾಡುತ್ತಿದೆ. ಮಾ.9 ರಂದು ಬಂದ್ ಗೆ ಕರೆ ನೀಡಿದ್ದೇವೆ ಎಂದು ತಿಳಿಸಿದರು. ಮುಖ್ಯಮಂತ್ರಿಗಳು ಇವತ್ತು ಸಿದ್ದರಾಮಯ್ಯ ಮೇಲೆ ಆರೋಪ ಮಾಡಿದ್ದಾರೆ. ಇಷ್ಟು ದಿನ ಏನ್ ಮಾಡ್ತಾ ಇದ್ರು? ಚುನಾವಣೆ ಹತ್ತಿರವಾಗುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ. ನನ್ನ ಬಗ್ಗೆ ಕೂಡ ಟೀಕೆ ಮಾಡಿದರು. ಯಾವುದಕ್ಕೆ ದಾಖಲೆ ಕೊಟ್ಟಿದ್ದಾರೆ. ದಾಖಲೆ ತೆಗೆದು ಕೇಸ್ ಮಾಡಲಿ ನೋಡೋಣ. ಈಗ ಸುಮ್ಮನೆ ಆರೋಪ ಮಾಡುವುದು ಬೇಡ ಎಂದು ಬಿಜೆಪಿಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.
ಶಾಂತಿಯುತ ಪ್ರತಿಭಟನೆ ಮಾಡುತ್ತೇವೆ:ಬಂದ್ ದಿನ ಪಿಯುಸಿ ಪರೀಕ್ಷೆ ಇರುವ ವಿಚಾರ ಮಾತನಾಡಿ, 9ರಂದು ಪಿಯುಸಿ ಪರೀಕ್ಷೆ ಇದೆ. ನಾವು ಯಾರಿಗೂ ತೊಂದರೆ ಕೊಡಲ್ಲ. ವಾಹನ ಬಂದ್ ಮಾಡಲ್ಲ, ಆಸ್ಪತ್ರೆ, ಸ್ಕೂಲ್ಗೆ ನಾವು ತೊಂದರೆ ಕೊಡಲ್ಲ. ಕೇವಲ ಎರಡು ಗಂಟೆ ಮಾತ್ರ ಪ್ರತಿಭಟನೆ ಮಾಡುತ್ತೇವೆ. ವರ್ತಕರು, ವ್ಯಾಪಾರಸ್ಥರಿಗೆ ನಾವು ಮನವಿ ಮಾಡಿದ್ದೇವೆ. ಎರಡು ಗಂಟೆ ಮಾತ್ರ ನಮಗೆ ಸಮಯ ಕೋಡಿ. ಕಾರ್ಯಕರ್ತರು ಕೂಡ ಶಾಂತಿಯುತ ಪ್ರತಿಭಟನೆ ಮಾಡ್ತಾರೆ. ಕಾಂಗ್ರೆಸ್ಸಿನಿಂದ ಯಾವುದೇ ತೊಂದರೆ ಆಗಲ್ಲ ಎಂದು ಸ್ಪಷ್ಟಪಡಿಸಿದರು.