ಬೆಂಗಳೂರು : ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಆಗಾಗ ನಾಲಿಗೆ ಹರಿಬಿಟ್ಟು ಸುದ್ದಿಯಾಗುತ್ತಿದ್ದಾರೆ. ಇದರಿಂದ ಬಿಜೆಪಿ ಪದೇ ಪದೆ ಕಿರಿಕಿರಿ ಅನುಭವಿಸುವಂತಾಗಿದೆ. ಈಶ್ವರಪ್ಪ ಹೇಳಿಕೆ ಖಂಡಿಸಲೂ ಆಗದೆ, ಸಮರ್ಥಿಸಿಕೊಳ್ಳಲೂ ಆಗದೆ ಸಂದಿಗ್ಧ ಸ್ಥಿತಿಯನ್ನು ಎದುರಿಸುವಂತಾಗಿದೆ. ಈಗಲೂ ಕೂಡ ಪ್ರತಿಪಕ್ಷಗಳಿಗೆ ಈಶ್ವರಪ್ಪ ನೀಡಿರುವ ಹೇಳಿಕೆಯೇ ಆಹಾರವಾಗಿದ್ದು ಉಭಯ ಸದನಗಳಲ್ಲಿ ಗದ್ದಲ ಕೋಲಾಹಲವೆಬ್ಬಿಸಿದೆ.
ಬಿಜೆಪಿಗೆ ಸಚಿವ ಕೆ.ಎಸ್.ಈಶ್ವರಪ್ಪ ಬಿಸಿ ತುಪ್ಪವಾಗಿದ್ದಾರೆ. ಪ್ರತಿಪಕ್ಷ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸುವ ಭರದಲ್ಲಿ ನಾಲಿಗೆಯನ್ನೇ ಕತ್ತಿಯಂತೆ ಪ್ರಯೋಗಿಸುತ್ತಿದ್ದಾರೆ. ಸಂಘ ಪರಿವಾರದ ಬೆಂಬಲವಿರುವ ಕಾರಣಕ್ಕೆ ಈಶ್ವರಪ್ಪ ಹೇಳಿದ್ದು ತಪ್ಪು ಎಂದು ಹೇಳುವ ಧೈರ್ಯವನ್ನು ತೋರುತ್ತಿಲ್ಲ, ಕಳೆದ ಮೂರು ವರ್ಷಗಳಿಂದ ಈಶ್ವರಪ್ಪ ನೀಡಿರುವ ವಿವಾದಿತ ಹೇಳಿಕೆಗಳೇ ಬಿಜೆಪಿ ನಾಯಕರ ನಿದ್ದೆಗೆಡುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.
ವಿವಾದಿತ ಹೇಳಿಕೆಗಳು:ಮುಸ್ಲಿಂ ಸಮುದಾಯದವರಿಗೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡದ ಕಾರಣ ಕುರಿತು ಈಶ್ವರಪ್ಪ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಬಿಜೆಪಿ ಕಚೇರಿಯಲ್ಲಿ ಮುಸ್ಲಿಂ ಸಮುದಾಯದವರು ಬಂದು ಕಸ ಗುಡಿಸಿದರೆ ನಂತರ ಅವರಿಗೆ ವಿಧಾನಸಭಾ ಟಿಕೆಟ್ ನೀಡಲಾಗುತ್ತದೆ ಎಂದು 2017 ರ ಮಾರ್ಚ್ ನಲ್ಲಿ ಪರಿಷತ್ ಪ್ರತಿಪಕ್ಷ ನಾಯಕರಾಗಿದ್ದ ವೇಳೆ ಈಶ್ವರಪ್ಪ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.
ಕಲಾಪದಲ್ಲಿ ಮುಸ್ಲಿಂ ಸಮುದಾಯಕ್ಕೆ ಎಷ್ಟು ಟಿಕೆಟ್ ನೀಡಿದ್ದೀರಿ ಎನ್ನುವ ಕಾಂಗ್ರೆಸ್ ಪ್ರಶ್ನೆಗೆ ಈಶ್ವರಪ್ಪ ಈ ರೀತಿಯ ಉತ್ತರ ನೀಡಿದ್ದರು. ಅಲ್ಲದೆ ಹೇಳಿಕೆಯನ್ನು ಸದನದಲ್ಲಿ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದರು.
ಇದಕ್ಕೆ ಕಾಂಗ್ರೆಸ್ ನಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಅಲ್ಪಸಂಖ್ಯಾತರನ್ನು ಬಿಜೆಪಿ ನಡೆಸಿಕೊಳ್ಳುವ ಪರಿ ಇದು ಎಂದು ಟೀಕಿಸಿತ್ತು. ಇದು ಬಿಜೆಪಿ ನಾಯಕರನ್ನು ಮುಜುಗರಕ್ಕೆ ಸಿಲುಕುವಂತೆ ಮಾಡಿತು. ಇದನ್ನು ಸರಿಪಡಿಸಿಕೊಳ್ಳಲು ಬಿಜೆಪಿ ನಾಯಕರು ಹರಸಾಹಸ ಪಡಬೇಕಾಯಿತು. ಕಸ ಗುಡಿಸಲಿ ಎಂದರೆ ಪಕ್ಷದಲ್ಲಿ ಕೆಲಸ ಮಾಡಿದರೆ ನಂತರ ಅವಕಾಶ ಸಿಗುತ್ತೆ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ ಎಂದು ಬಿಜೆಪಿ ನಾಯಕರು ಈಶ್ವರಪ್ಪ ಹೇಳಿಕೆಯನ್ನು ಸಮರ್ಥಿಸಿಕೊಳ್ಳಬೇಕಾಯಿತು.
2019 ರ ಸೆಪ್ಟೆಂಬರ್ ನಲ್ಲಿ ಈಶ್ವರಪ್ಪ ಹೇಳಿಕೆ:ಮುಸ್ಲಿಮರ ಮತಗಳನ್ನು ಪಡೆದು ಗೆಲುವು ಸಾಧಿಸುವ ಶಾಸಕರಲ್ಲಿ ಹಿಜಿಡಾತನ ಅಡಗಿದೆ ಎಂದು 2019 ರ ಸೆಪ್ಟೆಂಬರ್ ನಲ್ಲಿ ಈಶ್ವರಪ್ಪ ಹೇಳಿಕೆ ನೀಡಿ ವಿವಾದ ಸೃಷ್ಟಿಸಿಕೊಂಡಿದ್ದರು. ಕಾಂಗ್ರೆಸ್ ನಾಯಕರನ್ನ ಗುರಿಯಾಗಿಸಿ ನೀಡಿದ್ದ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಹೇಳಿಕೆ ವಾಪಸ್ ಪಡೆದು ಕ್ಷಮೆ ಯಾಚನೆಗೆ ಅಕ್ಕೈ ಪದ್ಮಶಾಲಿ ಆಗ್ರಹಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಈಶ್ವರಪ್ಪ ವಿರುದ್ಧ ಹೋರಾಟ ನಡೆಸಿದ್ದರು.
ಬಾಗಲಕೋಟೆಯಲ್ಲಿ 2020 ರ ಆಗಸ್ಟ್ ನಲ್ಲಿ ಕಾಂಗ್ರೆಸ್ ನವರನ್ನು ನಿರಾಶ್ರಿತರಿಗೆ ಹೋಲಿಕೆ ಮಾಡಿ ಈಶ್ವರಪ್ಪ ಹೇಳಿಕೆ ನೀಡಿದ್ದರು. ಜಲಪ್ರಳಯ, ಪ್ರವಾಹ ಪೀಡಿತ ಸಂದರ್ಭದಲ್ಲಿ ಕಾಂಗ್ರೆಸ್ ನವರು ನಿರಾಶ್ರಿತರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದ ಈಶ್ವರಪ, ಉಮೇಶ್ ಕತ್ತಿ ಅವರು ನಿರಾಶ್ರಿತರಿಗೆ ನೆರವಾಗಬಹುದೇನೋ ಅದಕ್ಕೆ ಸಿದ್ದರಾಮಯ್ಯ ಉಮೇಶ್ ಕತ್ತಿಗೆ ಫೋನ್ ಕರೆ ಮಾಡಿರಬಹುದು ಎಂದು ಉಭಯ ನಾಯಕರ ಭೇಟಿ ಕುರಿತು ವಿವಾದಿತ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ಬಿಜೆಪಿ ನಾಯಕರು ಮತ್ತೆ ಈಶ್ವರಪ್ಪ ಅವರನ್ನು ಸಮರ್ಥಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದರು.