ಬೆಂಗಳೂರು: ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆ ಆದರೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಚುನಾವಣಾ ಭವಿಷ್ಯ, ಈಶ್ವರಪ್ಪ ಕ್ಷೇತ್ರದ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ನಿಷ್ಠಾವಂತ ನಾಯಕರಾದ ರಾಮದಾಸ್, ಲಿಂಬಾವಳಿ ಭವಿಷ್ಯ, ಸೋಮಣ್ಣ ಪುತ್ರನ ಚುನಾವಣಾ ರಾಜಕೀಯ ಪ್ರವೇಶ ಕುರಿತ ಸಸ್ಪೆನ್ಸ್ ಮುಂದುವರೆದಿದೆ. 23 ಅಭ್ಯರ್ಥಿಗಳನ್ನೊಳಗೊಂಡ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ ಆಗಿದ್ದು, 23ರಲ್ಲಿ 10 ಬಿಜೆಪಿ ಕ್ಷೇತ್ರಗಳಾಗಿದ್ದು ಅದರಲ್ಲಿ ಕೇವಲ ಮೂವರಿಗೆ ಮಾತ್ರ ಟಿಕೆಟ್ ನೀಡಿದ್ದು, ಉಳಿದ 7 ಕ್ಷೇತ್ರಕ್ಕೆ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಎರಡು ಕ್ಷೇತ್ರಕ್ಕೆ ಮಹಿಳಾ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ತಡವಾಗಿ ಅಭ್ಯರ್ಥಿಗಳ ಹೆಸರನ್ನ ಪ್ರಕಟಿಸಿದ ಆಡಳಿತರೂಢ ಬಿಜೆಪಿ ಈ ಎರಡೂ ಪಕ್ಷಗಳಿಗೆ ಹೋಲಿಸಿದರೆ ಅತಿ ಹೆಚ್ಚಿನ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಬಿಜೆಪಿಯು ಇದುವರೆಗೆ ಒಟ್ಟು ಪ್ರಕಟಿಸಿದ ಎರಡು ಪಟ್ಟಿಗಳಲ್ಲಿ 212 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಇನ್ನು ಕೇವಲ 12 ಕ್ಷೇತ್ರಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರು ಆಯ್ಕೆ ಮಾಡುವುದು ಮಾತ್ರ ಬಾಕಿ ಇದೆ.
ಮತ್ತೊಂಡದೆಡೆ ಕಾಂಗ್ರೆಸ್ ಪಕ್ಷವು ಎರಡು ಪಟ್ಟಿಗಳಲ್ಲಿ 166 ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಮೊದಲ ಪಟ್ಟಿಯಲ್ಲಿ 124 ಎರಡನೇ ಪಟ್ಟಿಯಲ್ಲಿ 42 ಅಭ್ಯರ್ಥಿ ಆಯ್ಕೆ ಮಾಡಿದೆ. ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಮುಂಚಿತವಾಗಿಯೇ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ ಮಾಡಿದ್ದು, 93 ಜನರಿಗೆ ಟಿಕೆಟ್ ನೀಡಿದೆ. ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 58 ಮತ್ತು ಜೆಡಿಎಸ್ 131 ಅಭ್ಯರ್ಥಿಗಳ ಹೆಸರು ಪ್ರಕಟಿಸುವುದು ಬಾಕಿ ಇದೆ.
ಬೆಂಗಳೂರು ಮಹಾನಗರದ ವ್ಯಾಪ್ತಿಗೆ ಒಳಪಡುವ ಗೋವಿಂದರಾಜ ನಗರ, ಮಹದೇವಪುರ, ಹೆಬ್ಬಾಳ, ಕೃಷ್ಣರಾಜ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್, ಶಿವಮೊಗ್ಗ , ನಾಗಠಾಣಾ, ಸೇಡಂ, ಮಾನ್ವಿ, ಕೊಪ್ಪಳ, ರೋಣ ಹಾಗೂ ಹಗರಿಬೊಮ್ಮನಹಳ್ಳಿ ಕ್ಷೇತ್ರಗಳಿಗೆ ಭಾರತೀಯ ಜನತಾ ಪಕ್ಷವು ಅಭ್ಯರ್ಥಿಗಳ ಹೆಸರು ಪ್ರಕಟಿಸುವುದು ಬಾಕಿ ಇದೆ. ಬಿಜೆಪಿಯ ಘಟಾನುಘಟಿ ನಾಯಕರುಗಳಾದ ಮಾಜಿ ಸಿಎಂ ಜಗದೀಶ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ, ಹಿರಿಯ ಬಿಜೆಪಿ ಮುಖಂಡರಾದ ಮಾಜಿ ಸಚಿವ ಅರವಿಂದ ಲಿಂಬಾವಳಿ ಸ್ಪರ್ಧೆ ಮಾಡುವಂತ ಕ್ಷೇತ್ರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಬಿಜೆಪಿಗೆ ಇನ್ನೂ ಸಾಧ್ಯವಾಗಿಲ್ಲ.