ಕರ್ನಾಟಕ

karnataka

ETV Bharat / state

ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್​ಗೆ ಅನುಕೂಲ: ಸಚಿವ ಎಂ.ಬಿ.ಪಾಟೀಲ್

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.

BJP and JDS alliance issue
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್​ಗೆ ಅನುಕೂಲ: ಸಚಿವ ಎಂ.ಬಿ. ಪಾಟೀಲ್

By ETV Bharat Karnataka Team

Published : Sep 8, 2023, 2:22 PM IST

Updated : Sep 8, 2023, 2:40 PM IST

ಸಚಿವ ಎಂ.ಬಿ.ಪಾಟೀಲ್ ಹಾಗೂ ಸಚಿವ ಬೈರತಿ ಸುರೇಶ್ ಮಾತನಾಡಿದರು.

ಬೆಂಗಳೂರು:''ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್​ಗೆ ಅನುಕೂಲವಾಗಲಿದೆ'' ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಸದಾಶಿವನಗರ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ''ಬಿಜೆಪಿ ಮತ್ತು ಜೆಡಿಎಸ್ ಏನಾದರೂ ಮಾಡಿಕೊಳ್ಳಲಿ. ಅದು ನಮಗೆ ಸಂಬಂಧಪಟ್ಟ ವಿಷಯ ಅಲ್ಲ. ಆದರೆ, ಅವರು ಮೈತ್ರಿ ಮಾಡಿದರೆ ಕಾಂಗ್ರೆಸ್​ಗೆ ಅನುಕೂಲವಾಗಲಿದೆ. ಇದರಿಂದ ಸೆಕ್ಯುಲರ್ ಎನ್ನುವ ಹೆಸರು ಇಟ್ಟುಕೊಂಡಿರುವ ಜೆಡಿಎಸ್ ಬಣ್ಣವೂ ಬಯಲಾಗಲಿದೆ. ನಾವು ಏಕಾಂಗಿಯಾಗಿ ರಾಜ್ಯದಲ್ಲಿ ಕನಿಷ್ಠ ಅಂದ್ರೂ 20 ಸ್ಥಾನಗಳನ್ನಾದರೂ ಗೆಲ್ಲಲಿದ್ದೇವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

''ಚುನಾವಣೆ ಮುಗಿದು ಐದಾರು ತಿಂಗಳಾದರೂ ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಆಗಿಲ್ಲ. ಜನರಿಂದ ತಿರಸ್ಕೃತವಾಗಿರುವ ಆ ಪಕ್ಷವು ಈಗಾಗಲೇ ಮುಳುಗಿ ಹೋಗಿರುವ ಹಡಗು. ಸಂಪೂರ್ಣ ಹತಾಶ ಸ್ಥಿತಿ ತಲುಪಿರುವ ಪಕ್ಷಕ್ಕೆ ಯಾವ ಭವಿಷ್ಯವೂ ಇಲ್ಲ. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಖಾಲಿಯಾಗುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದರು.

''ಬಿಜೆಪಿ ಯಡಿಯೂರಪ್ಪ ಅವರಂತಹ ಹಿರಿಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಇದು ಅವರಿಗೂ ಗೊತ್ತು. ಆದರೂ ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಆ ಪಕ್ಷದ 25 ಸಂಸದರು ರಾಜ್ಯಕ್ಕೆ ನ್ಯಾಯ ಕೊಡಿಸಬೇಕು. ಆದರೆ, ಅವರೆಲ್ಲ ಮೋದಿಯವರಿಗೆ ಹೆದರಿಕೊಂಡು ತುಟಿ ಬಿಚ್ಚುತ್ತಿಲ್ಲ'' ಎಂದು ವಾಗ್ದಾಳಿ ನಡೆಸಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಆರ್​ಎಸ್​ಗೆ ಭೇಟಿ‌ ನೀಡುತ್ತಿರುವುದರ ಹಿಂದೆ ರಾಜಕೀಯ ಪ್ರಚಾರ ಪಡೆಯುವ ಉದ್ದೇಶವಿದೆ. ಸ್ವತಃ ನೀರಾವರಿ ಸಚಿವರೂ ಆಗಿದ್ದ ಅವರು ಹೀಗೆ ನಡೆದುಕೊಳ್ಳುತ್ತಿರುವುದು ಅನುಚಿತ'' ಎಂದು ತಿರುಗೇಟು ನೀಡಿದರು.

''ಕಾಂಗ್ರೆಸ್ ನಾಯಕ ಹರಿಪ್ರಸಾದ್ ಅವರು ಸಣ್ಣಪುಟ್ಟ ಜಾತಿಗಳನ್ನು ಒಗ್ಗೂಡಿಸಲು ಮುಂದಾಗಿರುವುದರಲ್ಲಿ ತಪ್ಪಿಲ್ಲ. ಕುಂಬಾರ, ಕಮ್ಮಾರ, ಉಪ್ಪಾರ ತರಹದ ಅತಿಸಣ್ಣ ಜಾತಿಗಳಿಗೂ ಕಾಂಗ್ರೆಸ್ ಬೆಲೆ ಕೊಡುತ್ತದೆ. ಇಂತಹ ಸಮುದಾಯಕ್ಕೆ ಸೇರಿದ ವೀರಪ್ಪ ಮೊಯ್ಲಿಯವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದ ಶ್ರೇಯಸ್ಸು ನಮ್ಮ ಪಕ್ಷದ್ದಾಗಿದೆ. ಆದರೆ, ಹರಿಪ್ರಸಾದ್ ಅವರು ರಾಜ್ಯ ಸರ್ಕಾರದ ವಿರುದ್ಧವೇ ಹೋರಾಡುತ್ತೇನೆ ಎಂದು ಹೇಳಿರುವುದು ನನಗೆ ಗೊತ್ತಿಲ್ಲ'' ಎಂದರು.

ಮೈತ್ರಿಯಿಂದ ಕಾಂಗ್ರೆಸ್​ಗೆ ಪರಿಣಾಮ ಬೀರುವುದಿಲ್ಲ- ಸಚಿವ ಬೈರತಿ ಸುರೇಶ್: (ಕಲಬುರಗಿ),''ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್​ಗೆ ಯಾವುದೇ ಪರಿಣಾಮ ಬೀರುವುದಿಲ್ಲ'' ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ಕಲಬುರಗಿ ಸಿಟಿ ಬಸ್ ನಿಲ್ದಾಣ ಹತ್ತಿರದ ಸಂಗೋಳಿ ರಾಯಣ್ಣಾ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದ ಅವರು, ''ಬಿಜೆಪಿ ಜೆಡಿಎಸ್ ಮೊದಲಿನಿಂದಲೂ ಒಂದೇ ಇದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿಯಿಂದ ನಮಗೆ ಯಾವುದೇ ಪರಿಣಾಮ ಬಿರಲ್ಲ ಅವರ ಮೈತ್ರಿಯಿಂದ ಯಾವುದು ಜಾತ್ಯಾತೀತ, ಯಾವುದು ಜಾತಿವಾದಿ ಪಕ್ಷ ಅನ್ನೋದು ಜನರಿಗೆ ಗೊತ್ತಾಗುತ್ತೆ ನಮ್ಮ ಹೈಕಮಾಂಡ್ ಹೇಳಿದಂತೆ ಲೋಕಸಭೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ರಾಜ್ಯದಲ್ಲಿ 20 ಸ್ಥಾನಕ್ಕಿಂತ ಹೆಚ್ಚು ಸ್ಥಾನ ಗಳಿಸುತ್ತೇವೆ'' ಎಂದರು.

''ಸನಾತನ ಧರ್ಮ‌ ಕುರಿತು ತಮಿಳುನಾಡು ಸಚಿವ ಸ್ಟಾಲಿನ್ ಹೇಳಿಕೆಗೂ ನಮಗೂ ಸಂಬಂಧವಿಲ್ಲ. ಅದು ಕಾಂಗ್ರೆಸ್ ಪಕ್ಷದ ಹೇಳಿಕೆ ಅಲ್ಲ. ಇಂಡಿಯಾ ಒಕ್ಕೂಟದಲ್ಲಿ ಹಲವಾರು ಪಕ್ಷಗಳಿವೆ. ಎಲ್ಲರ ಹೇಳಿಕೆಗೆ ನಾವು ಉತ್ತರಿಸಲು ಆಗುವುದಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರ ಹೇಳಿಕೆಗೆ ಮಾತ್ರ ನಾವು ಪ್ರತಿಕ್ರಿಯೆ ಕೊಡಬಹುದು'' ಎಂದು ತಿಳಿಸಿದರು. ಉತ್ತರಪ್ರದೇಶದಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ಎಫ್​ಐಆರ್​ ದಾಖಲು ವಿಚಾರವಾಗಿ ಮಾತನಾಡಿದ ಅವರು, ''ಪ್ರಿಯಾಂಕರಿಗೆ ಹೇಳಿಕೆ ವೈಯಕ್ತಿಕ ಅಭಿಪ್ರಾಯ, ಅವರಿಗೆ ವಾಕ್ ಸ್ವಾತಂತ್ರ ಇದೆ. ಆದ್ರೆ ಕರ್ನಾಟಕದಲ್ಲಿಯೇ ಎಫ್​ಐಆರ್​ ಮಾಡ್ಬೇಕಿತ್ತು. ಬಿಜೆಪಿ ಸರ್ಕಾರ ಇರೋ ರಾಜ್ಯದಲ್ಲಿ‌ ಕೇಸ್​ ಮಾಡಲಾಗಿದೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಕಾಂಗ್ರೆಸ್ ಪಕ್ಷ ಹೆದರುವುದಿಲ್ಲ'' ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ:'ಲೋಕ' ಸಮರಕ್ಕೆ ಬಿಜೆಪಿ-ಜೆಡಿಎಸ್ ದೋಸ್ತಿ, ಕ್ಷೇತ್ರ ತ್ಯಾಗಕ್ಕೆ ಸಿದ್ದವೆಂದ ನಾಯಕರು!

Last Updated : Sep 8, 2023, 2:40 PM IST

ABOUT THE AUTHOR

...view details