ಬೆಂಗಳೂರು :ಓಲ್ಡ್ ಈಸ್ ಗೋಲ್ಡ್ ಅನ್ನೋ ಮಾತು ನಿಜಕ್ಕೂ ಅರ್ಥಪೂರ್ಣ. ಹದಿನೈದು, ಇಪ್ಪತ್ತು ವರ್ಷಗಳ ಹಿಂದೆ ಬಾಡಿಗೆಗೆ ಸಿಗುತ್ತಿದ್ದ ಸೈಕಲ್ಗಳು ನಗರದಲ್ಲಿ ಮತ್ತೆ ರಸ್ತೆಗಿಳಿಯಲಿವೆ.
ಟ್ರಿಣ್ ಟ್ರಿಣ್ ಹೆಸರಿನ ಯೋಜನೆಯಡಿ ನಗರದ ಹಲವೆಡೆ ಬಾಡಿಗೆಗೆ ಅತ್ಯಲ್ಪ ದರದಲ್ಲಿ ಸೈಕಲ್ಗಳು ಸಿಗಲಿದ್ದು, ಸೈಕಲ್ ಪ್ರಿಯರಲ್ಲಿ ಸಂತಸ ಮನೆ ಮಾಡಿದೆ.
ಕಾರು, ಬೈಕ್ ಮಾತ್ರವಲ್ಲ, ನಗರದಲ್ಲಿ ಇನ್ಮುಂದೆ ಬಾಡಿಗೆಗೆ ಸೈಕಲ್ ಕೂಡ ಸಿಗಲಿವೆ. ಸಾರ್ವಜನಿಕ ಬೈಸಿಕಲ್ ಹಂಚಿಕೆ ವ್ಯವಸ್ಥೆ ಯೋಜನೆಗೆ ಇಂದು ಚಾಲನೆ ಸಿಕ್ಕಿದೆ. ನಗರ ಭೂ ಸಾರಿಗೆ ನಿರ್ದೇಶನಾಲಯ, ನಗರಾಭಿವೃದ್ಧಿ ಇಲಾಖೆ ಈ ಯೋಜನೆಯನ್ನು ಆರಂಭಿಸಿದೆ. ಮೊಬೈಲ್ ಆ್ಯಪ್ ಮೂಲಕ ಸೈಕಲ್ಗಳನ್ನು ಬಾಡಿಗೆ ಪಡೆಯಬಹುದಾಗಿದೆ.
ಸೈಕಲ್ ಪಡೆಯುವುದು ಹೇಗೆ:
ಮೆಟ್ರೋ ನಿಲ್ದಾಣಗಳು ಸೇರಿ ಕೆಲ ಆಯ್ದ ಸ್ಥಳದಲ್ಲಿ ಹಬ್ಗಳನ್ನು ನಿರ್ಮಿಸಿ ಅಲ್ಲಿ ಸೈಕಲ್ಗಳನ್ನು ಇಡಲಾಗಿದ್ದು, ಎಲ್ಲಾ ಸೈಕಲ್ಗಳಿಗೂ ಬಾರ್ ಕೋಡ್ ಮೂಲಕ ಲಾಕಿಂಗ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಸೈಕಲ್ ಬೇಕಾದವರು ಮೊದಲು ಪ್ಲೇ ಸ್ಟೋರ್ನಿಂದ ಯುಲೂ(yulu) ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಲಾಗಿನ್ ಆಗಬೇಕು. ನಂತರ ಆ್ಯಪ್ ಮೂಲಕ ಸೈಕಲ್ನಲ್ಲಿರುವ ಬಾರ್ ಕೋಡ್ ಸ್ಕ್ಯಾನ್ ಮಾಡಿದರೆ ಸೈಕಲ್ ಲಾಕ್ ಮತ್ತು ಓಪನ್ ಆಗಲಿದೆ.
ಸೈಕಲ್ ಬಳಸಿದ ನಂತರ ಸಮೀಪದ ಮತ್ತೊಂದು ನಿಲ್ದಾಣದಲ್ಲಿ ನಿಲ್ಲಿಸಿ ಆ್ಯಪ್ ಮೂಲಕ ಲಾಕ್ ಮಾಡಿದರೆ ರೈಡಿಂಗ್ ಕಂಪ್ಲೀಟ್ ಆಗಲಿದೆ. ಯಾವ ನಿಲ್ದಾಣದಲ್ಲಿ ಪಡೆದು ಮತ್ತೆ ಇನ್ಯಾವ ನಿಲ್ದಾಣದಲ್ಲಿ ಬೇಕಾದರೂ ಸೈಕಲ್ ನಿಲ್ಲಿಸಬಹುದು.
ಹೀಗಿದೆ ಬಾಡಿಗೆ ದರ :
ಮೊದಲ ಅರ್ಧ ಗಂಟೆಗೆ 10 ರೂ.ಗಳು ಹಾಗೂ ನಂತರದ ಪ್ರತಿ ಅರ್ಧ ಗಂಟೆಗೆ 5 ರೂ. ನಿಗದಿಪಡಿಸಲಾಗಿದೆ. ವಾರ, ತಿಂಗಳ ಯೋಜನೆಯನ್ನೂ ಪರಿಚಯ ಮಾಡಲಾಗುತ್ತಿದೆ. ಜೊತೆಗೆ ಸಂಜೆ ಸೈಕಲ್ ಪಡೆದು ಮರಳಿಸಲು ಸಾಧ್ಯವಾಗದೆ ಇದ್ದಲ್ಲಿ ಅಥವಾ ಹತ್ತಿರ ಯಾವ ನಿಲ್ದಾಣ ಇಲ್ಲದೆ ಇದ್ದಲ್ಲಿ ರಾತ್ರಿ ಮನೆಯಲ್ಲೇ ಸೈಕಲ್ ಲಾಕ್ ಮಾಡಿ ರೈಡಿಂಗ್ ಪಾಸ್ ಮಾಡಿದರೆ ರಾತ್ರಿ ವೇಳೆ ಬಾಡಿಗೆ ಹಣ ವಿಧಿಸುವುದಿಲ್ಲ. ಬೆಳಗ್ಗೆ ನಂತರ ಬಾಡಿಗೆ ಮತ್ತೆ ಲೆಕ್ಕ ಹಾಕಲಾಗುತ್ತದೆ.
ಕಳ್ಳತನ ಆದ್ರೆ ಕೂಡಲೇ ಪತ್ತೆ:
ಇನ್ನು ಸೈಕಲ್ಗಳಿಗೆ ಜಿಪಿಎಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸೈಕಲ್‌ಗಳ ಕಳವು ತಡೆಗೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸೈಕಲ್ ಕಳ್ಳತನವಾದಲ್ಲಿ ಕೂಡಲೇ ಅದನ್ನು ಪತ್ತೆ ಹಚ್ಚಬಹುದಾಗಿದ್ದು, ಕಳವಾಗದಂತೆ ಅಗತ್ಯ ಎಚ್ಚರಿಕೆ ಮತ್ತು ಸೈಕಲ್ ರೈಡಿಂಗ್ ಕುರಿತು ಪರಿಶೀಲನೆ ನಿರಂತರವಾಗಿ ನಡೆಸಲಾಗುತ್ತದೆ.
ಈಗಾಗಲೇ ಮೆಟ್ರೋ ನಿಲ್ದಾಣದಲ್ಲಿ ಬಾಡಿಗೆಗೆ ಬೈಕ್ಗಳು, ಸ್ಕೂಟರ್ಗಳನ್ನು ನೀಡಲಾಗುತ್ತಿದ್ದು, ಅವುಗಳೊಂದಿಗೆ ಇದೀಗ ಸೈಕಲ್ಗಳು ಕೂಡ ಲಭ್ಯವಾಗಲಿವೆ. ನಾವು ಈಗಾಗಲೇ ಸ್ಕೂಟರ್ ಬಾಡಿಗೆ ಕೊಡುತ್ತಿದ್ದು. ಸೈಕಲ್ ಗಳನ್ನು ಪರಿಚಯಿಸಿದ್ದೇವೆ. ಜನರಿಂದ ಉತ್ತಮ ಸ್ಪಂದನೆ ಸಿಗಲಿದೆ ಎಂದು ಯೋಜನೆ ಪರವಾನಗಿ ಪಡೆದಿರುವ ಬೌನ್ಸ್ ಸಂಸ್ಥೆಯ ವ್ಯವಹಾರ ಮುಖ್ಯಸ್ಥ ಶಶಾಂಕ್ 'ಈಟಿವಿ ಭಾರತ್' ಗೆ ಮಾಹಿತಿ ನೀಡಿದರು.
ಈ ಹಿಂದೆ ನಗರದಲ್ಲಿ ಸೈಕಲ್ ಪಾತ್ ನಿರ್ಮಿಸಿ ಸೈಕಲ್ ಸವಾರಿಯನ್ನು ಉತ್ತೇಜಿಸುವ ಕೆಲಸವನ್ನು ಬಿಬಿಎಂಪಿ ನಡೆಸಿದ್ದರೆ ಹೆಚ್.ಟಿ ಸಾಂಗ್ಲಿಯಾನ, ನಗರದ ಪೊಲೀಸ್ ಆಯುಕ್ತರಾಗಿದ್ದ ವೇಳೆ ನಗರದ ಪ್ರಮುಖ ರಸ್ತೆಯಾದ ಎಂಜಿ ರಸ್ತೆಯಲ್ಲಿ ಸೈಕಲ್ ಬ್ಯಾನ್ ಮಾಡಿ ವಿವಾದ ಸೃಷ್ಟಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಬಾಡಿಗೆಗೆ ಸೈಕಲ್ ಗಳು ಲಭ್ಯವಾಗಿಸುವ ಯೋಜನೆ ಜಾರಿಯಾಗಿದೆ. ಈ ಹಿಂದೆ ಸೈಕಲ್ಗಳನ್ನು ನಿರ್ಬಂಧಿಸಿದ್ದ ರಸ್ತೆಯಲ್ಲೇ ಇದೀಗ ಬಾಡಿಗೆ ಸೈಕಲ್ಗಳು ಸಂಚಾರಕ್ಕೆ ಮುಂದಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ.