ಬೆಂಗಳೂರು: ಪೊಲೀಸ್ ವೃತ್ತಿಗೆ ರಾಜೀನಾಮೆ ನೀಡಿ ಆಮ್ ಆದ್ಮಿ ಪಕ್ಷ ಸೇರಿದ್ದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ತಮ್ಮ ರಾಜಕೀಯದ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು ಬಿಜೆಪಿ ಸೇರುವುದು ಖಚಿತವಾಗಿದೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ನಾಳೆ ಬೆಳಗ್ಗೆ 9.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಅವರು ಪಕ್ಷ ಸೇರಲಿದ್ದಾರೆ.
ಇಂದು ಬೆಳಗ್ಗೆ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ಭಾಸ್ಕರ್ ರಾವ್ ಭೇಟಿ ನೀಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಹೀಗಾಗಿ ಬಿಜೆಪಿ ಸೇರುವ ಬಗ್ಗೆಯೂ ಮಾತುಗಳು ಕೇಳಿಬಂದಿತ್ತು. ಆದರೆ ಬಿಜೆಪಿ ನಾಯಕರು ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ. ಅಲ್ಲದೇ ಭಾಸ್ಕರ್ ರಾವ್ ಕರ್ನಾಟಕ ಚುನಾವಣಾ ಉಸ್ತುವಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿ ತೆರಳಿದ್ದಾಗಿ ಹೇಳಲಾಗಿತ್ತು. ಇದೀಗ ಈಟಿವಿ ಭಾರತ್‌ಗೆ ಪ್ರತಿಕ್ರಿಯಿಸಿರುವ ಅವರು, ನಾಳೆ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಖಚಿತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದಾರೆ ಎಂದು ಹೇಳಿದ್ದಾರೆ.
ದಾವಣಗೆರೆ ಆಗಮಿಸಲಿರುವ ಕೇಜ್ರಿವಾಲ್:ಆಪ್ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಾರ್ಚ್ 4ರಂದು ಕರ್ನಾಟಕಕ್ಕೆ ಬರಲಿದ್ದಾರೆ. ದಾವಣಗೆರೆಯಲ್ಲಿ ಆಮ್ ಆದ್ಮಿ ಪಾರ್ಟಿ ಹಮ್ಮಿಕೊಂಡಿರುವ ಬೃಹತ್ ರ್ಯಾಲಿ ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಈ ನಡುವೆಯೇ ಆಪ್ ನಾಯಕ ಭಾಸ್ಕರ್ ರಾವ್ ಬಿಜೆಪಿ ಸೇರಿರುವುದು ಕುತೂಹಲಕ್ಕೆ ಕಾರಣವಾಗಿದೆ.