ಬೆಂಗಳೂರು:ಬೆಂಗಳೂರು ಮಳೆಯ ಅವಾಂತರಕ್ಕೆ ನಲುಗಿ ಹೋಗಿದೆ. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಒಂದೆಡೆ ನಗರದಲ್ಲಿನ ರಾಜಕಾಲುವೆ ಒತ್ತುವರಿ, ಇನ್ನೊಂದೆಡೆ ಆಮೆಗತಿಯಲ್ಲಿ ಸಾಗುತ್ತಿರುವ ರಾಜಕಾಲುವೆಗಳ ಪುನರ್ ನಿರ್ಮಾಣ ಕಾರ್ಯ ಮಳೆ ಅವಾಂತರಕ್ಕೆ ಪ್ರಮುಖ ಕಾರಣವಾಗಿದೆ.
ಮಹಾನಗರ ಬೆಂಗಳೂರು ಸದ್ಯ ನೀರಿನ ನಗರವಾಗಿ ಪರಿವರ್ತನೆಗೊಂಡಿದೆ. ಮಿತಿ ಮೀರಿ ಸುರಿಯುತ್ತಿರುವ ಮಳೆಗೆ ಐಟಿ ಕಾರಿಡಾರ್ ಅಕ್ಷರಶಃ ಮುಳುಗಿ ಹೋಗಿದೆ. ಬೆಂಗಳೂರು ಹೊರ ವರ್ತುಲ ರಸ್ತೆ, ಮಹಾದೇವಪುರ, ಬೊಮ್ಮನಹಳ್ಳಿ, ವೈಟ್ ಫೀಲ್ಡ್ ಮಳೆಯ ಅಬ್ಬರಕ್ಕೆ ನಲುಗಿ ಹೋಗಿದೆ. ಕೆರೆ ಕೋಡಿ ಒಡೆದು ಬಡವಾಣೆ, ರಸ್ತೆ, ಐಟಿ ಪಾರ್ಕ್ಗಳಿಗೆ ನೀರು ನುಗ್ಗಿದೆ. ಈ ಮಳೆಯ ಅವಾಂತರಕ್ಕೆ ಪ್ರಮುಖ ಕಾರಣ ರಾಜಕಾಲುವೆ ಒತ್ತುವರಿ. ಮಹದೇವಪುರ, ಬೊಮ್ಮನಹಳ್ಳಿ ಸೇರಿ ಹೊರ ವರ್ತುಲ ರಸ್ತೆಯಲ್ಲಿನ ಬಡವಾಣೆಗಳು, ಐಟಿ ಪಾರ್ಕ್ಗಳೇ ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಡಗಳನ್ನು ನಿರ್ಮಿಸಿವೆ.
ಇತ್ತ ಒತ್ತುವರಿ ಗುರುತಿಸಿ ವರ್ಷಗಳು ಕಳೆಯುತ್ತಾ ಬಂದರೂ ಅಧಿಕಾರಿಗಳು ತೆರವು ಮಾಡಲು ಮೀನಾಮೇಷ ಎಣಿಸುತ್ತಲೇ ಇದ್ದಾರೆ. ಇನ್ನೊಂದೆಡೆ ರಾಜಕಾಲುವೆಗಳ ಪುನರ್ ನಿರ್ಮಾಣ ಕಾಮಗಾರಿ ಅಪೂರ್ಣವಾಗಿರುವುದು ಬೆಂಗಳೂರಿನ ಮಳೆ ಅವಾಂತರವನ್ನು ಇನ್ನಷ್ಟು ತೀವ್ರಗೊಳಿಸಿದೆ.
ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ಅಪೂರ್ಣ:ಬೆಂಗಳೂರಲ್ಲಿ ಪ್ರಮುಖವಾಗಿ ಹೆಬ್ಬಾಳ, ಛಲಘಟ್ಟ, ವೃಷಭಾವತಿ ಮತ್ತು ಕೋರಮಂಗಲ ನಾಲ್ಕು ಪ್ರಮುಖ ನಾಲೆಗಳನ್ನು ಹೊಂದಿದೆ. ಇದಕ್ಕೆ ಹೊಂದಿಕೊಂಡಂತೆ ಪ್ರಥಮ ಹಾಗೂ ದ್ವಿತೀಯ ರಾಜಕಾಲುವೆಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಪುನರ್ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಪುನರ್ ನಿರ್ಮಾಣ ಕಾರ್ಯ ಬಹುತೇಕ ಅಪೂರ್ಣವಾಗಿದ್ದು, ಮಳೆಯ ಅವಾಂತರ ಇನ್ನುಷ್ಟು ಉಲ್ಬಣಿಸಲು ಕಾರಣವಾಗಿದೆ. ಅಪೂರ್ಣಗೊಂಡಿರುವ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ಇನ್ನೂ ಕ್ರಿಯಾ ಯೋಜನೆ ಹಂತದಲ್ಲಿದೆ.
ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಲ್ಲಿ ಈ ರಾಜಕಾಲುವೆಗಳ ಅಭಿವೃದ್ಧಿ ಹಾಗೂ ಪುನರ್ ನಿರ್ಮಾಣ ಕಾರ್ಯ ಪೂರೈಸಲಾಗುತ್ತಿದೆ. ಆದರೆ, ಪುನರ್ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಹಲವು ಕಾಮಗಾರಿಗಳು ಬಾಕಿ ಉಳಿದುಕೊಂಡಿವೆ. ಬಿಬಿಎಂಪಿ ವ್ಯಾಪ್ತಿಯಡಿ 859.9 ಕಿ.ಮೀ ಉದ್ದದ ಪ್ರಥಮ ಹಾಗೂ ದ್ವಿತೀಯ ರಾಜಕಾಲುವೆಯ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಆದರೆ, ಈ ಪೈಕಿ ಸುಮಾರು 490 ಕಿ.ಮೀ. ಉದ್ದದ ರಾಜಕಾಲುವೆ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದೆ. ಇನ್ನು ಸುಮಾರು 400 ಕಿ.ಮೀ ಉದ್ದದ ರಾಜಕಾಲುವೆ ಪುನರ್ ನಿರ್ಮಾಣ ಕಾಮಗಾರಿ ಅಪೂರ್ಣವಾಗಿ ಬಾಕಿ ಉಳಿದುಕೊಂಡಿದೆ.
ಅದರಲ್ಲೂ ಈ ಬಾರಿ ಅತಿ ಹೆಚ್ಚು ನೆರೆಪೀಡಿತ ಪ್ರದೇಶವಾದ ಮಹದೇವಪುರ ವಲಯದಲ್ಲಿ ಒಟ್ಟು 199 ಕಿ.ಮೀ. ಉದ್ದದ ರಾಜಕಾಲುವೆ ಅಭಿವೃದ್ಧಿ ಪಡಿಸಲಾಗುತ್ತಿದ್ದು, 64 ಕಿ.ಮೀ ಉದ್ದದ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ಪೂರ್ಣವಾಗಿದ್ದರೆ, ಇನ್ನೂ ಸುಮಾರು 135 ಕಿ.ಮೀ. ಉದ್ದದ ರಾಜಕಾಲುವೆ ಕಾಮಗಾರಿ ಹಾಗೇ ಬಾಕಿ ಉಳಿದುಕೊಂಡಿದೆ. ಅದೇ ರೀತಿ ಬೊಮ್ಮನಹಳ್ಳಿ ವಲಯದಲ್ಲಿ ಸುಮಾರು 112 ಕಿ.ಮೀ. ಉದ್ದದ ರಾಜಕಾಲುವೆ ಪೈಕಿ ಸುಮಾರು 43 ಕಿ.ಮೀ. ಕಾಮಗಾರಿ ಬಾಕಿ ಉಳಿದುಕೊಂಡಿದೆ. ಯಲಹಂಕ ವಲಯದಲ್ಲಿನ 98.18 ಕಿ.ಮೀ ರಾಜಕಾಲುವೆ ಪೈಕಿ ಇನ್ನೂ ಸುಮಾರು 58 ಕಿ.ಮೀ. ಉದ್ದದ ಕಾಮಗಾರಿ ಬಾಕಿ ಉಳಿದಿದೆ. ಅದೇ ರೀತಿ ಆರ್.ಆರ್.ನಗರ ವ್ಯಾಪ್ತಿಯಲ್ಲಿನ 140.19 ಕಿ.ಮೀ. ರಾಜಕಾಲುವೆ ಪೈಕಿ ಸುಮಾರು 74 ಕಿ.ಮೀ. ಕಾಮಗಾರಿ ಅಪೂರ್ಣವಾಗಿದೆ.
ರಾಜಕಾಲುವೆ ಒತ್ತುವರಿ ತಲೆನೋವು:ಮಳೆಯ ಈ ಭಾರೀ ಅನಾಹುತಕ್ಕೆ ರಾಜಕಾಲುವೆ ಒತ್ತುವರಿ ಪ್ರಮುಖ ಕಾರಣವಾಗಿದೆ. ಬಿಬಿಎಂಪಿ ನೀಡಿದ ಅಂಕಿ ಅಂಶದ ಪ್ರಕಾರ ನಗರದಲ್ಲಿ ಸುಮಾರು 696 ರಾಜಕಾಲುವೆ ಒತ್ತುವರಿಯನ್ನು ಇನ್ನೂ ತೆರವು ಮಾಡಿಲ್ಲ. ಈ ಪೈಕಿ ಬಹುತೇಕ ಒತ್ತುವರಿ ಮಹದೇವಪುರ, ಬೊಮ್ಮನಹಳ್ಳಿ, ಯಲಹಂಕ ವಲಯದಲ್ಲಿ ವರದಿಯಾಗಿವೆ. ಇದೀಗ ಸಿಎಂ ಸೂಚನೆ ಮೇರೆಗೆ ತೆರವು ಕಾರ್ಯ ಪ್ರಾರಂಭವಾಗಿದೆ. ಬೊಮ್ಮನಹಳ್ಳಿ ವಲಯದಲ್ಲಿ ಸುಮಾರು 176 ರಾಜಕಾಲುವೆ ಒತ್ತುವರಿಯನ್ನು ಗುರುತಿಸಲಾಗಿದ್ದರೆ, ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಸುಮಾರು 90 ಒತ್ತುವರಿಗಳನ್ನು ಗುರುತಿಸಲಾಗಿದೆ.
(ಇದನ್ನೂ ಓದಿ: ಮಹಾಮಳೆಯಿಂದ ಬೋಟ್ನಲ್ಲಿ ಓಡಾಡೋ ಪರಿಸ್ಥಿತಿ ನಿರ್ಮಾಣ ಆಗಿದೆ: ಮಾಜಿ ಸಿಎಂ ಸಿದ್ದರಾಮಯ್ಯ)