ಬೆಂಗಳೂರು:ಧಾರಾಕಾರ ಮಳೆಗೆ ಬೆಂಗಳೂರಿನ ಕೆಲ ವಲಯಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾಗಿತ್ತು. ರಸ್ತೆಗಳು ಕೆರೆಗಳಂತಾಗಿ, ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಇದಕ್ಕೆರಾಜಕಾಲುವೆ ಒತ್ತುವರಿಯಾಗಿದ್ದೇ ಕಾರಣ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಎಚ್ಚೆತ್ತ ಬಿಬಿಎಂಪಿ, ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಿಸಲಾದ ಕಟ್ಟಡ ಮತ್ತು ಗೋಡೆಗಳನ್ನು ತೆರವು ಮಾಡುತ್ತಿದೆ.
ನೋಟಿಸ್ ನೀಡದೆ ರಾಜಕಾಲುವೆ ಒತ್ತುವರಿದಾರರಿಗೆ ಶಾಕ್: ಕಟ್ಟಡಗಳ ಮಾಲೀಕರಿಗೆ ಯಾವುದೇ ನೋಟಿಸ್ ನೀಡದೆ ಒತ್ತುವರಿಯಾದ 21,963 ಚದರ್ ಅಡಿ ತೆರವು ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರಿ ಮಳೆಯಿಂದಾಗಿ ಸಿಲಿಕಾನ್ ಸಿಟಿಯ ಐಟಿ ಕಾರಿಡಾರ್ ಪ್ರದೇಶವಿರುವ ಬೆಳ್ಳಂದೂರು, ಸರ್ಜಾಪುರ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿದ್ದವು. ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ ರಸ್ತೆಗಳು ಮತ್ತು ಬಡಾವಣೆಗಳಲ್ಲಿ 3 ರಿಂದ 6 ಅಡಿ ನೀರು ತುಂಬಿಕೊಂಡಿತ್ತು. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಕಳೆದ 10 ದಿನಗಳಿಂದ ಒತ್ತುವರಿದಾರರಿಗೆ ಯಾವುದೇ ನೋಟಿಸ್ ನೀಡದೆ ತೆರವು ಮಾಡುತ್ತಿದ್ದಾರೆ ಎಂದು ಪಾಲಿಕೆ ತಿಳಿಸಿದೆ.