ಬೆಂಗಳೂರು: ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ಹೆಚ್ಚಾಗುತ್ತಿದಂತೆ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಬಳಿ ಆರೋಪಿಗಳ ಪೋಷಕರು ಸೇರುತ್ತಿದ್ದಾರೆ. ಬಂಧಿತರ ಪೈಕಿ ಕೆಲವರು ಅಮಾಯಕರು ಎಂದು ಅಳುತ್ತಾ ಮಹಿಳೆಯೋರ್ವಳು ಕುಸಿದು ಬಿದ್ದ ಘಟನೆ ನಡೆಯಿತು.
ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಖಾಕಿ ಕಟ್ಟೆಚ್ಚರ.. ಠಾಣೆಯ ಬಳಿ ಆರೋಪಿಗಳ ಪೋಷಕರ ಆಗ್ರಹ:
ಈ ವೇಳೆ ಅಂದಾಜು 50ಕ್ಕೂ ಹೆಚ್ಚು ಮಹಿಳೆಯರು ಠಾಣೆಯ ಬಳಿ ಬಂದು ತಮ್ಮ ಮಕ್ಕಳನ್ನು ಬಿಡುವಂತೆ ಗೋಗರೆದ ದೃಶ್ಯ ಕಂಡುಬಂತು. ಈ ವೇಳೆ ಪೊಲೀಸರು ಪ್ರತಿಕ್ರಿಯಿಸಿ, ತಪ್ಪು ಮಾಡದೇ ಇದ್ದರೆ ಖಂಡಿತಾ ಅವರು ಬರುತ್ತಾರೆ. ಇಲ್ಲವಾದಲ್ಲಿ ಶಿಕ್ಷೆ ಅನುಭವಿಸ್ತಾರೆ ಎಂದು ತಿಳಿಸಿದರು.
52 ಕೇಸು ದಾಖಲು:
ಇಲ್ಲಿಯವರೆಗೆ 52 ಆರೋಪಿಗಳ ವಿರುದ್ಧ ಕೇಸು ದಾಖಲಾಗಿದೆ. ಅದರಲ್ಲಿ 38 ಡಿ.ಜೆ.ಹಳ್ಳಿ ಠಾಣೆ ಹಾಗೂ 14 ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ಪರಿಸ್ಥಿತಿ ಗಂಭೀರ:
ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯ ಬಳಿ ಮತ್ತಷ್ಟು ಪರಿಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿಯನ್ನು ಗುಪ್ತಚಾರ ಇಲಾಖೆ ನೀಡಿದೆ. ಹೀಗಾಗಿ ಈ ಎರಡೂ ಸ್ಥಳವನ್ನು ಅತಿ ಸೂಕ್ಷ್ಮವಾದ ಪ್ರದೇಶ ಎಂದು ಪರಿಗಣಿಸಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಅಂಗಡಿಗಳನ್ನು ತೆರೆಯದಂತೆ ಸೂಚನೆ:
ಮುಂಜಾನೆ ತೆರೆಯಲಾಗಿದ್ದ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಪೊಲೀಸರು ಆದೇಶ ನೀಡಿದ್ದಾರೆ.
ವಿನಾಕಾರಣ ಸುತ್ತಾಡಿದರೆ ಕ್ರಮ:
ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಅವರ ನೇತೃತ್ವ ಪೊಲೀಸ್ ತಂಡ ಮುಂಜಾಗ್ರತಾ ಕ್ರಮವಾಗಿ ಎರಡೂ ಠಾಣೆಗಳ ಗಲ್ಲಿ-ಗಲ್ಲಿ ವ್ಯಾಪ್ತಿಗಳಲ್ಲಿ ಪಥ ಸಂಚಲನ ನಡೆಸಿದ್ದಾರೆ. ಈ ವೇಳೆ, ವಿನಾಕಾರಣ ಜನರು ಓಡಾಡ ಮಾಡಬಾರದು. ನಿಯಮ ಮೀರಿ ಹೊರ ಬಂದ್ರೆ ಪೊಲೀಸರು ನಿಮ್ಮನ್ನು ಅರೆಸ್ಟ್ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಆರೋಪಿ ನವೀನ್ ಹಾಗು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರ ಮನೆಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ.