ಬೆಂಗಳೂರು: ನೂರಕ್ಕೂ ಅಧಿಕ ಮನೆಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಗೋವಿಂದರಾಜ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ ಬಂಧಿತ ಆರೋಪಿ. ಓಕಳಿಪುರದ ರೈಲ್ವೆ ಕಾಲೋನಿಯಲ್ಲಿ ಖಾಲಿ ಜಾಗದ ಮಣ್ಣಿನಲ್ಲಿ ಆರೋಪಿ ಹೂತಿಟ್ಟಿದ್ದ 1.2 ಕೆ.ಜಿ ಚಿನ್ನಾಭರಣ ಹಾಗೂ 3.5 ಕೆ.ಜಿ ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಲಾಸಿ ಜೀವನ ನಡೆಸಲು ಮತ್ತು ಕ್ಯಾಸಿನೋ ಚಟಕ್ಕಾಗಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿ, ಕಳವು ಮಾಡಿದ ಆಭರಣಗಳನ್ನು ಅಡವಿಟ್ಟು ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ. ಅಕ್ಟೋಬರ್ 22ರಂದು ಅನ್ನಪೂರ್ಣೇಶ್ವರಿ ನಗರದಲ್ಲಿ ಕಳ್ಳತನ ಎಸಗಿದ್ದ ಆರೋಪಿ, ಕದ್ದ ಚಿನ್ನವನ್ನು ಓಕಳಿಪುರದ ರೈಲ್ವೆ ಕಾಲೋನಿಯಲ್ಲಿ ಮಣ್ಣಿನಲ್ಲಿ ಹೂತಿಟ್ಟಿದ್ದ. ನಂತರ ಗೋವಾಗೆ ತೆರಳಿ ಕ್ಯಾಸಿನೋದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದ ಆರೋಪಿಯನ್ನ ಗೋವಿಂದರಾಜ ನಗರ ಠಾಣೆಯ ಇನ್ಸ್‌ಪೆಕ್ಟರ್ ಸುಬ್ರಮಣಿ ಮತ್ತವರ ತಂಡ ಬಂಧಿಸಿತ್ತು. ಬಂಧಿತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ 13 ಪ್ರಕರಣಗಳು ಪತ್ತೆಯಾಗಿದ್ದು, ಸುಮಾರು 70 ಲಕ್ಷ ಮೌಲ್ಯದ ಚಿನ್ನಾಭರಣವನ್ನ ಜಪ್ತಿ ಮಾಡಿದ್ದಾರೆ.
ಬಾಲ್ಯದಿಂದಲೇ ಕಳ್ಳತನಕ್ಕಿಳಿದಿದ್ದ ಚಾಲಾಕಿ: ಕಾರ್ತಿಕ್ ತನ್ನ 16ನೇ ವಯಸ್ಸಿನಲ್ಲೇ ಮನೆಗಳ್ಳತನ ಆರಂಭಿಸಿದ್ದ. ಇದುವರೆಗೂ ನೂರಕ್ಕೂ ಅಧಿಕ ಮನೆಗಳ್ಳತನ ಕೃತ್ಯ ಎಸಗಿರುವ ಈತನ ವಿರುದ್ಧ ಬೆಂಗಳೂರಿನ ಕಾಮಾಕ್ಷಿಪಾಳ್ಯ, ಹೆಣ್ಣೂರು, ಕೊತ್ತನೂರು ಮಾತ್ರವಲ್ಲದೇ ಮೈಸೂರು, ಹಾಸನದಲ್ಲಿಯೂ ಪ್ರಕರಣಗಳು ದಾಖಲಾಗಿವೆ. ಈತ ಬೆಂಗಳೂರು ಪೊಲೀಸರಿಂದಲೇ ಬರೋಬ್ಬರಿ ಇಪ್ಪತ್ತಕ್ಕೂ ಹೆಚ್ಚು ಬಾರಿ ಬಂಧನವಾಗಿದ್ದ. ಬೆಂಗಳೂರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ, 2008 ಹಾಗೂ 2010 ರಲ್ಲಿ ಪೊಲೀಸರ ಕಸ್ಟಡಿಯಿಂದ ಎಸ್ಕೇಪ್ ಆಗಿದ್ದ. ಹೀಗಾಗಿ ಈತ ಎಸ್ಕೇಪ್ ಕಾರ್ತಿಕ್ ಎಂದೇ ಕುಖ್ಯಾತಿ ಹೊಂದಿದ್ದಾನೆ.
ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಮಾತನಾಡಿ, "ಅಂತಾರಾಜ್ಯ ಕಳ್ಳನನ್ನು ಬಂಧಿಸಿ, ಆತನಿಂದ 1 ಕೆ.ಜಿ 200 ಗ್ರಾಂ ನಷ್ಟು ಚಿನ್ನಾಭರಣ ಮತ್ತು 3 ಕೆ.ಜಿ 500 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 70 ಲಕ್ಷ ಇದರ ಮೌಲ್ಯ ಆಗಿದೆ. ಇದರಿಂದ ಒಟ್ಟು 13 ಪ್ರಕರಣಗಳು ಪತ್ತೆಯಾಗಿವೆ. ಆರೋಪಿಯ ಮೇಲೆ ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಒಟ್ಟು 83 ಪ್ರಕರಣಗಳು ದಾಖಲಾಗಿವೆ" ಎಂದರು.