ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆ ಬೆಂಗಳೂರು: ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು, 2024ನ್ನು ಬರಮಾಡಿಕೊಳ್ಳಲು ಬೆಂಗಳೂರಿನ ನಾಗರಿಕರು ಸಂಭ್ರಮದಿಂದ ಕಾಯುತ್ತಿದ್ದಾರೆ. ಕೋರಮಂಗಲ, ಇಂದಿರಾನಗರ, ಎಂಜಿ ರಸ್ತೆ, ಬ್ರಿಗೇಡ್ ರೋಡ್ನಲ್ಲಿ ಸಂಭ್ರಮಾಚರಣೆಗೆ ತಯಾರಿ ಜೋರಾಗಿದೆ. 2023 ಬೈ-ಬೈ ಹೇಳಿ 2024ಕ್ಕೆ ಹಾಯ್ ಹಾಯ್ ಹೇಳಲು ಜನರು ಸನ್ನದ್ಧರಾಗಿದ್ದಾರೆ.
ಹೊಸ ವರ್ಷಾಚರಣೆ ಮಾಡಲು ನಗರದ ನಾನಾ ಕಡೆಗಳಿಂದ ಸಾರ್ವಜನಿಕರು ಎಂಜಿ ರೋಡ್ ಕಡೆ ಆಗಮಿಸುತ್ತಿದ್ದಾರೆ. ನಗರದ ನಾಲ್ಕು ಭಾಗಗಳಲ್ಲಿ ಕಲ್ಪಿಸಿರುವ ಮೆಟ್ರೋ ರೈಲು ಮುಖಾಂತರ ಸಾವಿರಾರು ಸಂಖ್ಯೆಯಲ್ಲಿ ದಾಂಗುಡಿ ಇಡುತ್ತಿದ್ದಾರೆ. ಬ್ರಿಗೇಡ್ ರೋಡ್ ಎಂಟ್ರಿಯಾಗುತ್ತಿದ್ದಂತೆ ಹ್ಯಾಪಿ ನ್ಯೂ ಇಯರ್ ಇನ್ ಅಡ್ವಾನ್ಸ್ ಎಂದು ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿರುವುದು ಕಂಡು ಬಂತು.
ಸ್ನೇಹಿತರ, ಕುಟುಂಬಸ್ಥರ ಜೊತೆಗೆ ಬಂದು ಮೊಬೈಲ್ನಲ್ಲಿ ಸೆಲ್ಫಿ ಹಿಡಿದುಕೊಳ್ಳುತ್ತಿರುವುದು ಸಾಮಾನ್ಯವಾಗಿತ್ತು. ಮೊದಲ ಬಾರಿ ಬಂದವರಿಗೆ ವರ್ಣರಂಜಿತ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿದ್ದ ಎಂಜಿ ರೋಡ್, ಬ್ರಿಗೇಡ್ನಲ್ಲಿ ಕಂಡು ಮೂಕವಿಸ್ಮಿತರಾದರು. ಇನ್ನೂ ಕೆಲವರು ಡಿಜೆ ಇದೆಯಾ, ಕಾರ್ಯಕ್ರಮವಿದೆಯಾ ಎಂದು ಕೇಳುತ್ತಿದ್ದರು. ಏನಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ನಿರಾಸೆಯಿಂದ ನಿರ್ಗಮಿಸಿದರು.
650ಕ್ಕೂ ಹೆಚ್ಚು ಸಿಸಿಟಿವಿ ಕಣ್ಗಾವಲು, ಖಾಕಿ ಸರ್ಪಗಾವಲು:ನಗರದ ಬಹುತೇಕ ಎಲ್ಲಾ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿರಲಿದ್ದು ಇಬ್ಬರು ಹೆಚ್ಚುವರಿ ಆಯುಕ್ತರರಿಗೆ ಭದ್ರತೆಯ ನೇತೃತ್ವ ವಹಿಸಲಾಗಿದೆ. ಅಲ್ಲದೆ ಓರ್ವ ಜಂಟಿ ಪೊಲೀಸ್ ಆಯುಕ್ತರು, 15 ಜನ ಡಿಸಿಪಿಗಳು, 45 ಎಸಿಪಿ, 160 ಇನ್ಸ್‌ಪೆಕ್ಟರ್ಸ್, 600 ಪಿಎಸ್ಐಗಳು, 600 ಎಎಸ್ಐಗಳು, 1800 ಹೆಡ್ ಕಾನ್ಸ್‌ಟೇಬಲ್ಸ್, 5200 ಪೊಲೀಸ್ ಕಾನ್ಸ್‌ಟೇಬಲ್ಸ್ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಯಾಗಲಿದ್ದಾರೆ. ಎಂಜಿ ರೋಡ್, ಬ್ರಿಗೇಡ್ ರೋಡ್ ನಲ್ಲಿ ಸಿವಿಲ್ ಪೊಲೀಸರು, ಹೋಮ್ ಗಾಡ್ಸ್, ಕೆಎಸ್ ಆರ್ ಪಿ ಸೇರಿದಂತೆ 2800 ಕ್ಕೂ ಹೆಚ್ಚು ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.
ನಗರದಲ್ಲಿ ಒಟ್ಟು 8 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಉಳಿದಂತೆ ಗೃಹರಕ್ಷಕ ದಳದ ಸಿಬ್ಬಂದಿಗಳು ಪೊಲೀಸರಿಗೆ ಸಾಥ್ ನೀಡಲಿದ್ದಾರೆ. ಪ್ರಮುಖ ಸ್ಥಳದಲ್ಲಿ ಡ್ರೋಣ್ ಕ್ಯಾಮರಾಗಳ ಮೂಲಕ ಹದ್ದಿನ ಕಣ್ಣಿಡಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಪರಾಧ ಹಿನ್ನೆಲೆಯುಳ್ಳವರು, ಮಾದಕ ಸರಬರಾಜುಗಾರರ ಮೇಲೆ ಸೂಕ್ಷ್ಮ ನಿಗಾ ವಹಿಸಲಾಗಿದೆ.
ಅಸಭ್ಯ ವರ್ತನೆ- ಧರ್ಮದೇಟು:ಹೊಸ ವರ್ಷದ ಆಚರಣೆಗೆ ಬಂದಿದ್ದ ಜೋಡಿಯ ಜೊತೆ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿ ಧರ್ಮದೇಟು ತಿಂದ ಘಟನೆ ನಡೆದಿದೆ. ಗರ್ಲ್ ಫ್ರೆಂಡ್ ಜೊತೆ ಯುವಕನೋರ್ವ ಬ್ರಿಗೇಡ್ ರಸ್ತೆಗೆ ಬಂದಿದ್ದ. ಈ ವೇಳೆ ನೂಕು ನುಗ್ಗಲಿನಲ್ಲಿ ಗರ್ಲ್ ಫ್ರೆಂಡ್ ಮುಟ್ಟಿದ ಎಂದು ಆರೋಪಿಸಿ ವ್ಯಕ್ತಿಯೊಬ್ಬನಿಗೆ ಬಾಯ್ ಫ್ರೆಂಡ್ ಧರ್ಮದೇಟು ಕೊಟ್ಟಿದ್ದಾನೆ. ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆಯನ್ನು ಹತೋಟಿಗೆ ತಂದಿದ್ದಾರೆ.
ಇದನ್ನೂ ಓದಿ:ಖುಷಿ ತಂದ ಚಂದ್ರಯಾನ, ನಿರಾಸೆ ಮೂಡಿಸಿದ ವಿಶ್ವಕಪ್ ಸೋಲು; 2023ರ ಘಟನಾವಳಿಗಳತ್ತ ಒಂದು ನೋಟ