ಬೆಂಗಳೂರು :ಶಾಂತಿನಗರದಲ್ಲಿರುವ ಜೈನ ಮಂದಿರದಲ್ಲಿ ಟೈಲ್ಸ್ ಹಾಕುವ ಕೆಲಸಕ್ಕೆ ಬಂದಿದ್ದ ಕಾರ್ಮಿಕರು ಮಂದಿರದಲ್ಲಿದ್ದ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿಯ ಆಭರಣ ಕದ್ದೊಯ್ದಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಅಶೋಕನಗರ ಪೊಲೀಸರು ರಾಜಸ್ತಾನ ಮೂಲದ ನಾಲ್ವರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ.
ಕೆಲವು ತಿಂಗಳ ಹಿಂದೆ ಆರೋಪಿಗಳಾದ ಜೋಶಿರಾಮ್ ಮತ್ತು ರೇಷ್ಮರಾಮ್ ಸೇರಿ ನಾಲ್ವರು ಮಂದಿರದ ಕೆಲಸಕ್ಕೆಂದು ಬಂದಿದ್ದರು. ಟೈಲ್ಸ್ ಕೆಲಸ ಮುಗಿಸಿದ ಆರೋಪಿಗಳು ಮಂದಿರದಲ್ಲಿ ಅಳವಡಿಸಲಾಗಿದ್ದ ಬೆಳ್ಳಿಯ ಆಭರಣಗಳನ್ನು ಕಂಡು ಕಳವು ಮಾಡುವ ಯೋಜನೆ ರೂಪಿಸಿದ್ದರು. ಹಳೆಯ ಕಾಲದ ಅಭರಣವಾಗಿದ್ದು ಹೆಚ್ಚು ಬೆಲೆ ಬಾಳಲಿದೆ ಎಂದು ಭಾವಿಸಿದ್ದರು.
ವ್ಯವಸ್ಥಿತವಾಗಿ ಸಂಚು ರೂಪಿಸಿದ ಆರೋಪಿಗಳು ಇತ್ತೀಚೆಗೆ ಆಭರಣಗಳನ್ನು ಕಳವು ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಸೇರಿದಂತೆ ಇನ್ನಿತರ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ್ದರು. ಈ ವೇಳೆ ಟೈಲ್ಸ್ ಹಾಕಲು ಬಂದಿದ್ದ ಕಾರ್ಮಿಕರೇ ಕೃತ್ಯವೆಸಗಿರುವುದು ಕಂಡುಬಂದಿತ್ತು.
ಆರೋಪಿಗಳು ಕಳ್ಳತನ ಮಾಡಿ ಬಂಧನ ಭೀತಿಯಿಂದ ರಾಜಸ್ತಾನಕ್ಕೆ ಪರಾರಿಯಾಗಿದ್ದರು. ಬೆಳ್ಳಿ ಆಭರಣಗಳನ್ನು ಮಣ್ಣಿನಲ್ಲಿ ಹೂತ್ತಿಟ್ಟಿದ್ದರು. ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು ರಾಜಸ್ಥಾನಕ್ಕೆ ತೆರಳಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 9.70 ಲಕ್ಷ ರೂ ಮೌಲ್ಯದ 14 ಕೆ.ಜಿ. ತೂಕದ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ:ಬುದ್ಧಿಮಾಂದ್ಯನಂತೆ ನಟಿಸಿ ₹50 ಲಕ್ಷ ಮೌಲ್ಯದ 150 ಮೊಬೈಲ್ ಕಳವು; ಐನಾತಿ ಕಳ್ಳ ಕೊನೆಗೂ ಸೆರೆ