ಬೆಂಗಳೂರು : ನಗರದಲ್ಲಿ ಗುತ್ತಿಗೆದಾರರು, ಜ್ಯುವೆಲ್ಲರಿ ಶಾಪ್ ಮಾಲೀಕರು ಹಾಗೂ ಮಾಜಿ ಕಾರ್ಪೊರೇಟರ್ಗಳ ಮನೆಗಳ ಮೇಲೆ ತಡರಾತ್ರಿ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ, ಮಾಜಿ ಕಾರ್ಪೊರೇಟರ್ ಅವರ ಸಂಬಂಧಿಯ ಫ್ಲ್ಯಾಟ್ನಲ್ಲಿ 42 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ ಎಂದು ಐಟಿ ಮೂಲಗಳು ತಿಳಿಸಿವೆ. ಆರ್ಟಿ ನಗರದ ಆತ್ಮಾನಂದ ಕಾಲೋನಿಯಲ್ಲಿರುವ ಫ್ಲ್ಯಾಟ್ನಲ್ಲಿ ಈ ದಾಳಿ ನಡೆದಿದೆ. ಫ್ಲ್ಯಾಟ್ನಲ್ಲಿನ ಮಂಚದ ಕೆಳಗಡೆ ಬಾಕ್ಸ್ನಲ್ಲಿ ಹಣ ಕಂಡುಬಂದಿದೆ ಎಂದು ಆದಾಯ ತೆರಿಗೆ ಮೂಲಗಳು ತಿಳಿಸಿವೆ.
ಮಾಜಿ ಶಾಸಕರೊಬ್ಬರ ಸಂಬಂಧಿ ಎಂದು ಹೇಳಲಾಗುತ್ತಿರುವ ಮಾಜಿ ಮಹಿಳಾ ಕಾರ್ಪೊರೇಟರ್ ಅವರ ಸಂಬಂಧಿಕರ ಮನೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ತೀವ್ರಗೊಂಡ ವಿಚಾರಣೆ:ಫ್ಲ್ಯಾಟ್ನಲ್ಲಿ ದೊರೆತ 42 ಕೋಟಿ ರೂ ಕುರಿತು ಆದಾಯ ತೆರಿಗೆ ಅಧಿಕಾರಿಗಳು ಮಾಜಿ ಕಾರ್ಪೊರೇಟರ್ ಸಂಬಂಧಿಯನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಮಾಜಿ ಕಾರ್ಪೊರೇಟರ್ಗೆ ಸಂಬಂಧಿಸಿದ ವ್ಯವಹಾರ, ಬ್ಯಾಂಕ್ ಖಾತೆಗಳ ಮಾಹಿತಿಯನ್ನ ಸಂಗ್ರಹಿಸಲಾಗುತ್ತಿದೆ. ಮಾಜಿ ಕಾರ್ಪೋರೇಟರ್ ಅವರ ಸಂಬಂಧಿಯು ಗುತ್ತಿಗೆದಾರರಾಗಿದ್ದು, ಅವರಿಗೆ ಸಂಬಂಧಿಸಿದ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಐದಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ 42 ಕೋಟಿ ರೂಪಾಯಿ ಹಣವನ್ನ ಐಟಿ ಅಧಿಕಾರಿಗಳ ತಂಡ ಜಪ್ತಿ ಮಾಡಿದೆ.