ಬೆಂಗಳೂರು: ಆನಿಮೇಷನ್ ಮತ್ತು ವಿಷುವಲ್ ಎಫೆಕ್ಟ್ ವಲಯದಲ್ಲಿ ಬೆಂಗಳೂರು ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಟೆಕ್ನಿಕಲರ್ ಕ್ರಿಯೇಟಿವ್ ಸರ್ವೀಸಸ್ ಸಂಸ್ಥೆಯ ಭಾರತೀಯ ವಿಭಾಗದ ಮುಖ್ಯಸ್ಥ ಬಿರೇನ್ ಘೋಷ್ ಶುಕ್ರವಾರ ಹೇಳಿದರು. ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ 'ಆನಿಮೇಷನ್, ವಿಷುವಲ್ ಎಫೆಕ್ಟ್, ಗೇಮಿಂಗ್ ಮತ್ತು ಕಾಮಿಕ್ಸ್-ಎವಿಜಿಸಿ ಭವಿಷ್ಯದ ಪರಿಕಲ್ಪನೆ: ಕರ್ನಾಟಕದ ನಾಯಕತ್ವ' ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿವುಡ್ ಬಹುತೇಕ ಸಿನಿಮಾ ಮತ್ತು ಟಿವಿ ಸರಣಿಗಳ ಆನಿಮೇಷನ್ ಮತ್ತು ವಿಷುವಲ್ ಎಫೆಕ್ಟ್ ಬೆಂಗಳೂರಿನಲ್ಲೇ ನಿರ್ಮಾಣಗೊಳ್ಳುತ್ತವೆ ಎಂದರು.
ಸೃಜನಶೀಲತೆ ಮತ್ತು ತಂತ್ರಜ್ಞಾನದ ಸಂಗಮವಾದ ಎವಿಜಿಸಿ ಭವಿಷ್ಯದ ಮನರಂಜನಾ ಉದ್ಯಮವಾಗಿದ್ದು, ವರ್ಷದಿಂದ ವರ್ಷಕ್ಕೆ ಅಗಾಧವಾಗಿ ಬೆಳವಣಿಗೆ ಹೊಂದುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಉದ್ಯಮ ಪ್ರಸಕ್ತ ವರ್ಷ ಶೇಕಡ 20ರಷ್ಟು ಅಭಿವೃದ್ಧಿ ಹೊಂದಿದೆ. ಗೇಮಿಂಗ್ ಉದ್ಯಮವೂ ಹೆಚ್ಚಿನ ಅಭಿವೃದ್ಧಿ ಕಾಣುತ್ತಿದ್ದು ಪ್ರಸ್ತುತ ಸಿನಿಮಾ ಉದ್ಯಮಕ್ಕಿಂತ ಎರಡೂವರೆ ಪಟ್ಟು ದೊಡ್ಡದಿದೆ ಎಂದು ಅವರು ತಿಳಿಸಿದರು.
ಎವಿಜಿಸಿ ಮತ್ತು ಎಕ್ಸ್ ಆರ್ ವೇದಿಕೆ ಅಧ್ಯಕ್ಷ ಆಶಿಶ್ ಕುಲಕರ್ಣಿ ಮಾತನಾಡಿ, ಈ ವಲಯವು ಕಲೆ ಮತ್ತು ತಂತ್ರಜ್ಞಾನದ ಸಂಗಮವಾಗಿದ್ದು ಭಾರತದಲ್ಲಿ ಅಗಾಧ ಪ್ರತಿಭೆಗಳಿದ್ದಾರೆ. ಆದರೆ ಇಂತಹ ಪ್ರತಿಭೆಗಳನ್ನು ಶೈಕ್ಷಣಿಕವಾಗಿ ವೃತ್ತಿಪರರಾಗಿ ತಯಾರು ಮಾಡುವುದು ಸವಾಲಿನ ಕೆಲಸವಾಗಿದೆ. 1990ರ ದಶಕದಲ್ಲಿ ದೇಶದಲ್ಲಿ ಯಾವುದೇ ಆನಿಮೇಷನ್ ಸ್ಟುಡಿಯೋ ಇರಲಿಲ್ಲ. ಕೋರ್ಸ್ಗಳಂತೂ ಇರಲೇ ಇಲ್ಲ. ಆಗ ಕೆಲವು ಸಿನಿಮಾ ವೃತ್ತಿಪರರು ಚನ್ನಪಟ್ಟಣ, ಕುಂಭಕೋಣಂ, ಮಹಾಬಲಿಪುರಂ ಮುಂತಾದ ಪಾರಂಪರಿಕ ತಾಣಗಳಿಗೆ ಭೇಟಿ ನೀಡಿ ಅಲ್ಲಿನ ಸಾಂಪ್ರದಾಯಿಕ ಕಲಾವಿದರನ್ನು ಕರೆ ತಂದು ಅವರಿಗೆ ತರಬೇತಿ ನೀಡಿ ಆನಿಮೇಷನ್ ಮಾಡಿಸುತ್ತಿದ್ದರು ಎಂದು ವಿವರಿಸಿದರು.
ಈ ವಲಯಕ್ಕೆ ಅಗಾಧ ಭವಿಷ್ಯವಿದ್ದರೂ ಈ ಮಾದರಿಯ ಕೋರ್ಸ್ ಆರಂಭಿಸುವಂತೆ ಶಿಕ್ಷಣ ಸಂಸ್ಥೆಗಳು ಹಾಗೂ ಬೋಧಕ ವರ್ಗವನ್ನು ಒಪ್ಪಿಸುವುದು ಕಷ್ಟದ ಕೆಲಸವಾಗಿತ್ತು. ಇದಕ್ಕಾಗಿ ತಾವು 700ಕ್ಕೂ ಹೆಚ್ಚು ಕಾಲೇಜು, ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದಾಗಿ ಅವರು ವಿವರಿಸಿದರು. ಪ್ರಸ್ತುತ ಆನಿಮೇಷನ್ ಮತ್ತ ವಿಷುವಲ್ ಎಫೆಕ್ಟ್ ಕಲಿಸುವ ಹಲವು ಕಾಲೇಜುಗಳು ದೇಶದಲ್ಲಿವೆ. ತಮ್ಮ ವೇದಿಕೆಯಿಂದ ಮುಂದಿನ ವರ್ಷ ಸುಮಾರು 10 ಸಾವಿರ ಶಾಲೆಗಳ 35 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡುವ ಯೋಜನೆ ಇದೆ ಎಂದು ಹೇಳಿದರು.