ಬೆಂಗಳೂರು: ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆಗೈದಿದ್ದ ಅಪರಾಧಿಗೆ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿ (ಜೀವ ಇರುವವರೆಗೆ ಶಿಕ್ಷೆ) ಬೆಂಗಳೂರು ನಗರದ 3ನೇ ತ್ವರಿತ ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶಿಸಿದೆ.
2017ರ ಏಪ್ರಿಲ್ 20ರಂದು ಬೆಂಗಳೂರಿನ ನಿವಾಸಿಯೊಬ್ಬ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಬಳಿಕ ಆಕೆಯ ಉಸಿರುಗಟ್ಟಿಸಿ ಕೊಲೆಗೈದು ಮೃತ ದೇಹವನ್ನು ರಟ್ಟಿನ ಬಾಕ್ಸ್‌ನಲ್ಲಿ ಬಚ್ಚಿಟ್ಟು ಪರಾರಿಯಾಗಿದ್ದ. ಮಗಳು ಕಾಣೆಯಾಗಿರುವುದಾಗಿ ಬಾಲಕಿಯ ಪೋಷಕರು ಗಿರಿನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಗಿರಿನಗರ ಠಾಣೆ ಪೊಲೀಸರು ನಾಲ್ಕು ದಿನಗಳ ಬಳಿಕ ಆರೋಪಿಯ ಮನೆಯಲ್ಲಿ ಬಾಲಕಿಯ ಮೃತ ದೇಹ ಪತ್ತೆಹಚ್ಚಿದ್ದರು. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ, ತನಿಖೆ ಪೂರ್ಣಗೊಳಿಸಿ, ಕೊಲೆ, ಲೈಂಗಿಕ ದೌರ್ಜನ್ಯ, ಅಪಹರಣದ ಆರೋಪದಡಿ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಇಶ್ರತ್ ಜಹಾನ್ ಅರ, ಅಪರಾಧಿಗೆ ಯಾವುದೇ ಕ್ಷಮಾಧಾನವಿಲ್ಲದೆ ಜೀವ ಇರುವವರೆಗೆ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಜೊತೆಗೆ, ಸಂತ್ರಸ್ತೆಯ ಪೋಷಕರಿಗೆ ಎಂಟು ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶಿಸಲಾಗಿದೆ. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕಿ ಗೀತಾ ರಾಮಕೃಷ್ಣ ಗೊರವರ ವಾದಿಸಿದ್ದರು.