ಬೆಂಗಳೂರು: ಹೈಕೋರ್ಟ್ ಮಧ್ಯಂತರ ಆದೇಶದಂತೆ ವಿದ್ಯಾರ್ಥಿಗಳ ಹಿಜಾಬ್ ತೆಗೆಸಿದಂತೆ ಟರ್ಬನ್ ತೆಗೆಸಿ ಎಂದು ಇಲ್ಲಿಯ ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿಗಳು ಪ್ರಿನ್ಸಿಪಾಲ್‍ಗೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಟರ್ಬನ್ ಧರಿಸುತ್ತಿದ್ದ ಕಾಲೇಜು ಯೂನಿಯನ್ ಅಧ್ಯಕ್ಷೆಯನ್ನು ಕರೆದ ಕಾಲೇಜು ಆಡಳಿತ ಮಂಡಳಿಯು ಅದನ್ನು (ಟರ್ಬನ್) ತೆಗೆದು ಬರಲು ಸಾಧ್ಯವೇ ಎಂದು ಕೇಳಿಕೊಂಡಿದೆ.
ಹಿಜಾಬ್ಗೆ ಅವಕಾಶ ಇಲ್ಲ ಎಂದರೆ ಟರ್ಬನ್ ಯಾಕೆ ಎಂದು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಆಡಳಿತ ಮಂಡಳಿಗೆ ವಿದ್ಯಾರ್ಥಿನಿಯರು ಇಂದು ಪ್ರಶ್ನೆ ಮಾಡಿದ್ದಾರೆ. ಕೋರ್ಟ್ ಸೂಚನೆಯಂತೆ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ಮೊದಲಿನಿಂದಲೂ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಹಿಜಾಬ್ ಧರಿಸಲು ತರಗತಿಯಲ್ಲಿ ಅವಕಾಶ ಇಲ್ಲ.
ಆದರೆ, ಕೋರ್ಟ್ ಆದೇಶದ ಬೆನ್ನಲ್ಲೇ ಪ್ರಶ್ನೆ ಮಾಡಿದ ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು, ಕೋರ್ಟ್ ಆದೇಶದಲ್ಲಿ ಧರ್ಮಸೂಚಕ ವಸ್ತ್ರಕ್ಕೆ ಅವಕಾಶ ಇಲ್ಲ ಎಂದಿದೆ. ನಮ್ಮ ಕಾಲೇಜು ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಟರ್ಬನ್ ಧರಿಸುತ್ತಾರೆ. ಟರ್ಬನ್ ಹಾಕಲು ಅವರಿಗೆ ಯಾಕೆ ಅವಕಾಶ ನೀಡಿದ್ದೀರಿ ಎಂದು ವಿದ್ಯಾರ್ಥಿಗಳು ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ.
ಟರ್ಬನ್ ತೆಗೆಯಲು ಸಾಧ್ಯವಿದೆಯಾ ಎಂದು ಆಡಳಿತ ಮಂಡಳಿ ಗುರುವಾರ ಕಾಲೇಜು ಪ್ರಾರಂಭದ ಬಳಿಕ ಟರ್ಬನ್ ಧರಿಸಿದ್ದ ವಿದ್ಯಾರ್ಥಿನಿಗೆ ಪ್ರಶ್ನಿಸಿದ್ದಾರೆ. ಆಗ ವಿದ್ಯಾರ್ಥಿನಿ ಟರ್ಬನ್ ನಮ್ಮಲ್ಲಿ ಕಡ್ಡಾಯ ಎಂದು ಹೇಳಿದ್ದಾಳೆ. ವಿದ್ಯಾರ್ಥಿನಿಯ ಪೋಷಕರು ಸಹ ಆಡಳಿತ ಮಂಡಳಿಗೆ ಇದೇ ಮಾತನ್ನು ತಿಳಿಸಿದ್ದಾರೆ.
ಕಾಲೇಜಿನ ಪ್ರಿನ್ಸಿಪಾಲ್ ಭಬಿತಾ ಡಿಡಿಪಿಐ ಶ್ರೀರಾಮ್ ಭೇಟಿ:ಹಿಜಾಬ್ ಧರಿಸುತ್ತಿದ್ದ ವಿದ್ಯಾರ್ಥಿನಿಯರ ಪೋಷಕರು ಸಹ ಕಾಲೇಜು ಆಡಳಿತ ಮಂಡಳಿಗೆ ಪ್ರಶ್ನೆ ಮಾಡಿದ್ದಾರೆ. ಡಿಡಿಪಿಐ ಶ್ರೀರಾಮ್ ಅವರು ಕಾಲೇಜಿಗೆ ಭೇಟಿ ನೀಡಿ ಮಕ್ಕಳ ಜೊತೆ ಚರ್ಚೆ ಮಾಡಿದ್ದಾರೆ. ಸದ್ಯ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ಬರುತ್ತಿದ್ದಾರೆ. ಯಾವುದೇ ಗೊಂದಲ ಇಲ್ಲ ಎಂದು ಕಾಲೇಜಿನ ಪ್ರಾಂಶುಪಾಲರು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
ಪ್ರಾಂಶುಪಾಲರ ಪ್ರತಿಕ್ರಿಯೆ:ಈ ಕುರಿತಂತೆ ಪ್ರತಿಕ್ರಿಯಿಸಿರುವ ಕಾಲೇಜಿನ ಪ್ರಿನ್ಸಿಪಾಲ್ ಭಬಿತಾ ಅವರು, ಹೈಕೋರ್ಟ್ ಆದೇಶವನ್ನು ನಾವು ಪಾಲನೆ ಮಾಡುತ್ತಿದ್ದೇವೆ. ಹೈಕೋರ್ಟ್ ಆದೇಶದಂತೆ ಹಿಜಾಬ್ ತೆಗೆದು ವಿದ್ಯಾರ್ಥಿಗಳು ಒಳಗಡೆ ಬರುತ್ತಿದ್ದರು. ಈ ವೇಳೆ ವಿದ್ಯಾರ್ಥಿನಿಯೊಬ್ಬಳು ಟರ್ಬನ್ ಧರಿಸಿದ್ದಳು. ಹಿಜಾಬ್ ತೆಗೆಸಿದಂತೆ ಟರ್ಬನ್ ತೆಗೆಸಿ ಎಂದು ಇತರ ವಿದ್ಯಾರ್ಥಿಗಳು ಮನವಿ ಮಾಡಿದ್ದರು.
ಟರ್ಬನ್ ಹಾಕಿದ್ದ ವಿದ್ಯಾರ್ಥಿನಿ ನಮ್ಮ ಕಾಲೇಜಿನ ಸ್ಟೂಡೆಂಟ್ ಯೂನಿಯನ್ ಪ್ರೆಸಿಡೆಂಟ್. ಕೆಲ ವಿದ್ಯಾರ್ಥಿಗಳು ಮನವಿ ಮಾಡಿದ ತಕ್ಷಣ ಟರ್ಬನ್ ತೆಗೆದು ಬರಲು ಸಾಧ್ಯವೇ ಎಂದು ಆ ವಿದ್ಯಾರ್ಥಿನಿಗೆ ಕೇಳಿದೆವು. ಟರ್ಬನ್ ತೆಗೆಯೋಕೆ ಆಗಲ್ಲ ಎಂದು ಆ ವಿದ್ಯಾರ್ಥಿನಿ ಹೇಳಿದ್ದರಿಂದ ಆಕೆಯ ಪೋಷಕರನ್ನು ಸಹ ಕೇಳಿಕೊಂಡಿದ್ದೆವು. ಪೋಷಕರು ಕೂಡ ಸಾಧ್ಯವಿಲ್ಲ ಎಂದಿರುವುದಾಗಿ ಭಬಿತಾ ಮಾಹಿತಿ ನೀಡಿದ್ದಾರೆ.