ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ಬೆಂಗಳೂರು:ಶಾಲೆಗಳಿಗೆ ಬಾಂಬ್ ಬೆದರಿಕೆಯ ಇಮೇಲ್ ರವಾನೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಆಯಾ ಸರ್ವಿಸ್ ಪ್ರೊವೈಡರ್ ಕಂಪನಿಗಳಿಂದ ಮಾಹಿತಿ ಕೇಳಲಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಈ ಕುರಿತು ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 1ರಂದು ಬಂದಿರುವ ಬೆದರಿಕೆ ಇಮೇಲ್ಗಳಿಗೆ ಸಂಬಂಧಿಸಿದಂತೆ ಒಟ್ಟು 27 ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷ ದಾಖಲಾದ ಪ್ರಕರಣಗಳೊಂದಿಗೆ ಸಾಮ್ಯತೆ ಇರುವುದರ ಕುರಿತು ಚರ್ಚಿಸಲಾಗಿದೆ. ಸಿಬಿಐ, ಇಂಟರ್ಪೋಲ್ಗಳಿಗೂ ಈ ಕುರಿತು ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಡಿಸೆಂಬರ್ 1 ರಂದು ಬಂದಿರುವ ಬೆದರಿಕೆ ಇಮೇಲ್ಗಳಿಗೆ ಸಂಬಂಧಿಸಿದಂತೆ ಒಟ್ಟು 27 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಇದೇ ರೀತಿ 6 ಪ್ರಕರಣಗಳು ದಾಖಲಾಗಿದ್ದವು. ಈ ಬಗ್ಗೆ ತನಿಖಾಧಿಕಾರಿಗಳ ಸಭೆ ನಡೆಸಿ ಪ್ರಕರಣಗಳ ನಡುವಿನ ಸಾಮ್ಯತೆ, ತನಿಖೆಯ ಪ್ರಗತಿಯ ಕುರಿತು ಚರ್ಚಿಸಿದ್ದೇವೆ ಎಂದರು.
ಬೆದರಿಕೆ ಸಂದೇಶ ಭಾರತದ ಒಳಗೆ ಅಥವಾ ಬಾಹ್ಯವಾಗಿ ರವಾನೆಯಾಗಿರುವುದರ ಕುರಿತು ಈಗಲೇ ಖಚಿತಪಡಿಸಲು ಕಷ್ಟ. ಆದ್ದರಿಂದ ಇಮೇಲ್ ಸಾರಾಂಶವನ್ನು ತಜ್ಞರುಗಳ ಮೂಲಕ ವಿಶ್ಲೇಷಣೆ ಮಾಡಿಸುವ ಕೆಲಸ ಮಾಡುತ್ತಿದ್ದೇವೆ. ಆದರೆ ಇಂಥಹ ಬೆದರಿಕೆ ಪ್ರಕರಣಗಳು ಯುನೈಟೆಡ್ ಸ್ಟೇಟ್ಸ್, ಜರ್ಮನಿ, ಜಮೈಕಾ, ಮಲೇಷ್ಯಾ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ವರದಿಯಾಗಿವೆ. ಈ ರೀತಿಯ ಬೆದರಿಕೆ ಇಮೇಲ್ ರವಾನಿಸಲು ಕಾರಣಗಳ ಕುರಿತು ತಿಳಿದುಕೊಳ್ಳುವ ಕೆಲಸ ಮಾಡುತ್ತಿದ್ದೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.
ಪೋಷಕರಲ್ಲಿ ಆತಂಕ ಹೆಚ್ಚಿಸಿದ್ದ ಪ್ರಕರಣ:ಡಿಸೆಂಬರ್ 1 ರಂದು ಬೆಳಗ್ಗೆ ಎಂದಿನಂತೆ ಶಾಲೆಗಳು ಆರಂಭವಾಗಿದ್ದವು, ಪೋಷಕರು ಸಹ ತಮ್ಮ ಮಕ್ಕಳು ಶಾಲೆಗಳಿಗೆ ಬಿಟ್ಟು ಬಳಿಕ ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ತೆರಳಿದ್ದರು. ಕೆಲವೇ ಹೊತ್ತಿನಲ್ಲಿ ನಗರದ 60 ಪ್ರತಿಷ್ಠಿತ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಇದರಿಂದ ತಕ್ಷಣ ಎಚ್ಚೆತ್ತುಕೊಂಡಿದ್ದ ಆಯಾ ಶಾಲಾ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯವರು ಮಕ್ಕಳನ್ನು ಶಾಲೆಯಿಂದ ಹೊರಗೆ ಕರೆತಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿ, ಶಾಲೆಗಳಿಗೆ ಬಾಂಬ್ ಸ್ಕ್ವಾಡ್ ಸಹಿತ ಆಗಮಿಸಿ ಪರಿಶೀಲನೆ ಕೈಗೊಂಡಿದ್ದರು. ಆಗ ಮೇಲ್ನೋಟಕ್ಕೆ ಇದು ಹುಸಿ ಬಾಂಬ್ ಕರೆ ಎಂದು ಪೊಲೀಸರು ತಿಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪೋಷಕರು, ತಮ್ಮ ಮಕ್ಕಳ ಭದ್ರತೆ ವಿಷಯವಾಗಿರುವುದರಿಂದ ಈ ಕುರಿತಂತೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ್ದರು.
ಇದನ್ನೂ ಓದಿ:ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ: ಮೇಲ್ ಐಡಿ ಬಳಕೆದಾರನ ಮಾಹಿತಿ ಕೋರಿದ ತನಿಖಾಧಿಕಾರಿಗಳು