ಬೆಂಗಳೂರು:ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಪಾಲಿಕೆಯಲ್ಲಿ ಪಕ್ಷ-ಪಕ್ಷಗಳ ನಡುವೆ ಯೋಜನೆ, ಕಾಮಗಾರಿಗಳ ಕುರಿತ ಆರೋಪ ಪ್ರತ್ಯಾರೋಪ ಶುರುವಾಗಿದೆ. ಪಾಲಿಕೆ ಆಡಳಿತ ಪಕ್ಷ, ಚುನಾವಣಾ ಸಮಯದಲ್ಲಿ ಪಡೆದ ಹಣದ ಋಣ ಸಂದಾಯಕ್ಕೆ ಹೊರಟಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ತುರ್ತು ವಿಚಾರಗಳ ಚರ್ಚೆ ನಡೆಸುವ ನಿಟ್ಟಿನಲ್ಲಿ ಪಾಲಿಕೆಯಲ್ಲಿ ಇಂದು ಮಾಸಿಕ ಕೌನ್ಸಿಲ್ ಸಭೆ ನಡೆಸಲಾಯಿತು. ಆದರೆ ತುರ್ತು ಕಾಮಗಾರಿ ಹೆಸರಲ್ಲಿ ಪಾಲಿಕೆ ಮೈತ್ರಿ ಆಡಳಿತ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಭ್ರಷ್ಟಾಚಾರಕ್ಕೆ ಮುಂದಾಗಿವೆ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿದೆ.
ಬೆಂಗಳೂರಿಗೆ ಇನ್ನು ಕೆಲವೇ ದಿನಗಳಲ್ಲಿ ಮಳೆಯಾಗಲಿದೆ. ತುರ್ತು ಕೆಲಸಗಳನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಬೇಕು. ಹೀಗಾಗಿ ಟೆಂಡರ್ ಕರೆದರೆ ವಿಳಂಬವಾಗಲಿದೆ. ನವ ಬೆಂಗಳೂರು ಯೋಜನೆಯ ಕಾಮಗಾರಿಗಳನ್ನು ತುರ್ತಾಗಿ ಮಾಡಬೇಕಿರುವುದರಿಂದ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್ಐಡಿಎಲ್) ಗೆ 4,261 ಕೋಟಿ ರೂ. ಮೊತ್ತದ ವಾರ್ಡ್ ಮಟ್ಟದ ಕಾಮಗಾರಿಗಳನ್ನು ನೀಡಲು ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ ನಿರ್ಧಾರವನ್ನು ಸರ್ಕಾರ ಕೈಗೊಳ್ಳುತ್ತದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.
ಪಾಲಿಕೆ ಮಾಸಿಕ ಕೌನ್ಸಿಲ್ ಸಭೆ ಆದ್ರೆ ಟೆಂಡರ್ ಕರೆಯದೆ, ಕೆಆರ್ಐಡಿಎಲ್ಗೆ ಸಾವಿರಾರು ಕೋಟಿ ರೂ. ಕಾಮಗಾರಿ ನೀಡುವ ಮೂಲಕ ಕಾಂಗ್ರೆಸ್-ಜೆಡಿಎಸ್ ಭ್ರಷ್ಟಾಚಾರಕ್ಕೆ ಮುಂದಾಗಿವೆ. ಇದರಲ್ಲಿ ತುರ್ತು ಕೆಲಸಗಳು ಯಾವುದೂ ಇಲ್ಲ. ತುರ್ತಾಗಿ ಕೊಡಬೇಕಾಗಿದ್ದ ನೀರಿನ ಟ್ಯಾಂಕರ್ಗಳಿಗೆ ಕ್ರಮ ಕೈಗೊಂಡಿಲ್ಲ. ಆದರೆ ವಾರ್ಡ್ ಕೆಲಸಗಳಾದ ರಸ್ತೆ ಅಭಿವೃದ್ಧಿ, ಫುಟ್ಪಾತ್ ಅಭಿವೃದ್ಧಿ, ಚರಂಡಿ ಕಾಮಗಾರಿಗಳನ್ನು ಟೆಂಡರ್ ಕರೆಯದೆ ಕಾನೂನು ಬಾಹಿರವಾಗಿ ಕೆಆರ್ಐಡಿಎಲ್ಗೆ ನೀಡುವ ಮೂಲಕ, ಚುನಾವಣೆ ಸಂದರ್ಭದಲ್ಲಿ ಪಕ್ಷಗಳು ಹಣ ಸಹಾಯ ಪಡೆದಿದ್ದ ಗುತ್ತಿಗೆದಾರರಿಗೆ ಋಣ ಸಂದಾಯ ಮಾಡಲು ಹೊರಟಿವೆ ಎಂದು ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಗಂಭೀರ ಆರೋಪ ಮಾಡಿದರು.
ಅಲ್ಲದೆ ವಿಶೇಷ ಆಯುಕ್ತರಾದ ಮನೋಜ್ ಕುಮಾರ್ ಮೀನಾ ಅವರು, ಕೋಡ್ ಆಫ್ ಕಂಡೆಕ್ಟ್ ಸಮಯದಲ್ಲಿ ನಿರ್ಣಯ ತೆಗೆದುಕೊಳ್ಳುವ ಹಾಗಿಲ್ಲ ಎಂದು ಹೇಳಿದರೂ, ಕಾಂಗ್ರೆಸ್ ನಿಯಮ ಮೀರಿದೆ ಎಂದು ಆರೋಪಿಸಿದರು. ಇಷ್ಟೇ ಅಲ್ಲದೆ ಗೋವಿಂದರಾಜನಗರ ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರಗಳಲ್ಲಿ 400 ಕೋಟಿ ರೂಪಾಯಿಯ ಕಾಮಗಾರಿ ಟೆಂಡರ್ನಲ್ಲಿ ಬೃಹತ್ ಅವ್ಯವಹಾರ ನಡೆದಿದೆ ಎಂದು ಮಾಜಿ ಮೇಯರ್ ಶಾಂತಕುಮಾರಿ ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಜಂಟಿ ಆಯುಕ್ತ ಚಿದಾನಂದ್, ಕೆಲಸ ಮಾಡದೇ 35 ಕೋಟಿ ರೂ. ಪೇಮೆಂಟ್ ಕೂಡಾ ಆಗಿದೆ. ಆದರೆ ಗುತ್ತಿಗೆದಾರ ಯಾರೆಂದು ಗೊತ್ತಿಲ್ಲ ಎಂದಾಗ ಪಕ್ಷಾತೀತವಾಗಿ ಕಾರ್ಪೋರೇಟರ್ಸ್ ಅಧಿಕಾರಿ ವಿರುದ್ಧ ವಾಗ್ಧಾಳಿ ನಡೆಸಿದ್ರು. ಆದ್ರೆ ನಗರಾಭಿವೃದ್ಧಿ ಇಲಾಖೆಯ ಯೋಜನೆ ಆಗಿರೋದ್ರಿಂದ ಜೆಸಿಯವರಿಗೆ ಮಾಹಿತಿ ಇಲ್ಲ. ಯೋಜನಾ ವಿಭಾಗದ ಮುಖ್ಯ ಅಭಿಯಂತರರ ಬಳಿ ಮಾಹಿತಿ ಪಡೆದು ತನಿಖೆ ನಡೆಸಿ, ಗುತ್ತಿಗೆದಾರರು ಹಾಗೂ ತಪ್ಪಿತಸ್ಥ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗುವುದು ಎಂದು ಮೇಯರ್ ತಿಳಿಸಿದರು.