ಬೆಂಗಳೂರು: ಮುಂದಿನ ತಿಂಗಳು 5ನೇ ತಾರೀಖಿನ ನಂತರ ಬಿಡಿಎಗೆ ಸೇರಿದ ಜಾಗಗಳನ್ನು ಮರು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ. ಭೂ ಆಡಿಟಿಂಗ್ ಪ್ರಗತಿಯಲ್ಲಿದ್ದು, ಬಿಡಿಎಗೆ ಸೇರಿದ ಆಸ್ತಿಯನ್ನು ಗುರುತಿಸಲಾಗುತ್ತಿದೆ. ಇದುವರೆಗೆ 11 ಸಾವಿರ ಎಕರೆಯಷ್ಟು ಪ್ರದೇಶ ಬಿಡಿಎಗೆ ಸೇರಿದ್ದೆಂದು ವರದಿಯಲ್ಲಿ ತಿಳಿಸಲಾಗಿದೆ. ಈ ಪೈಕಿ ಹಲವಾರು ಪ್ರಕರಣಗಳು ಭೂಸ್ವಾಧೀನ ಪ್ರಕ್ರಿಯೆಯ ವಿವಿಧ ಹಂತದಲ್ಲಿದ್ದರೆ, ಇನ್ನೂ ಕೆಲವು ಪ್ರಕರಣಗಳ ವ್ಯಾಜ್ಯವು ವಿವಿಧ ನ್ಯಾಯಾಲಯಗಳಲ್ಲಿದೆ ಎಂದು ಹೇಳಿದ್ದಾರೆ.
ಕಳೆದ ಹಲವಾರು ತಿಂಗಳಿಂದ ಪ್ರಾಧಿಕಾರಕ್ಕೆ ಸೇರಿದ ಆಸ್ತಿಯ ಪೈಕಿ 400 ರಿಂದ 500 ಎಕರೆಯಷ್ಟು ಪ್ರದೇಶಗಳನ್ನು ವಿವಿಧ ಬಡಾವಣೆಗಳಲ್ಲಿ ಗುರುತಿಸಿದ್ದೇವೆ. ಈ ಭೂಮಿಯ ಬಗ್ಗೆ ನ್ಯಾಯಾಲಯಗಳು ಬಿಡಿಎ ಪರ ತೀರ್ಪು ನೀಡಿದ್ದು, ತೆರವುಗೊಳಿಸಲು ಹಸಿರು ನಿಶಾನೆ ನೀಡಿವೆ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ಅಕ್ರಮವಾಗಿ ನಿರ್ಮಾಣವಾಗಿರುವ ಕಟ್ಟಡಗಳನ್ನು ಜುಲೈ 5 ರವರೆಗೆ ನೆಲಸಮ ಮಾಡಬಾರದು ಎಂದು ನ್ಯಾಯಾಲಯ ಆದೇಶ ನೀಡಿತ್ತು. ಇದೀಗ ಮತ್ತೆ ಈ ಅವಧಿಯನ್ನು ಆಗಸ್ಟ್ 5 ರವರೆಗೆ ವಿಸ್ತರಣೆ ಮಾಡಿದ್ದು, ಈ ಗಡುವಿನ ಬಗ್ಗೆ ನ್ಯಾಯಾಲಯ ಮುಂದಿನ ಆದೇಶ ನೀಡಿದ ನಂತರ ನೆಲಸಮ ಪ್ರಕ್ರಿಯೆಯನ್ನು ಆರಂಭ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.