ಕರ್ನಾಟಕ

karnataka

ETV Bharat / state

ಬಿಬಿಎಂಪಿಯಿಂದ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಜೆಸಿಬಿ ಆಪರೇಷನ್ - ಕೇಂಬ್ರಿಡ್ಜ್ ಕಾಲೇಜು ಆವರಣ

ಇಂದು ಮಹದೇವಪುರ ವಲಯ ವ್ಯಾಪ್ತಿಯಲ್ಲಿ 15 ಒತ್ತುವರಿಗಳನ್ನು ಜೆಸಿಬಿ ಆಪರೇಷನ್ ನಡೆಸಿ ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಪಾಲಿಕೆ ತಿಳಿಸಿದೆ.

ಜೆಸಿಬಿ ಆಪರೇಷನ್
ಜೆಸಿಬಿ ಆಪರೇಷನ್

By

Published : Sep 12, 2022, 8:34 PM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರದೇಶಗಳನ್ನು ಗುರುತಿಸಿ ಒತ್ತುವರಿ ತೆರವು ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಇಂದು ಮಹದೇವಪುರ ವಲಯ ವ್ಯಾಪ್ತಿಯಲ್ಲಿ 15 ಒತ್ತುವರಿಗಳನ್ನು ಜೆಸಿಬಿ ಆಪರೇಷನ್ ನಡೆಸಿ ತೆರವುಗೊಳಿಸಲಾಗಿದೆ ಎಂದು ಪಾಲಿಕೆ ತಿಳಿಸಿದೆ.

ಜೆಸಿಬಿ ಆಪರೇಷನ್

ಮಹದೇವಪುರ ವಲಯ ವ್ಯಾಪ್ತಿಯ ಚೆಲ್ಲಘಟ್ಟ, ಚಿನ್ನಪ್ಪನ ಹಳ್ಳಿ, ಬಸವಣ್ಣನಗರ, ಸ್ಪೈಸಿ ಗಾರ್ಡನ್ ಹಾಗೂ ಬಸವನಪುರ ವಾರ್ಡ್​ನ ಎಸ್. ಆರ್ ಲೇಔಟ್ ಕೇಂಬ್ರಿಡ್ಜ್ ಕಾಲೇಜು ಆವರಣದಲ್ಲಿ ಭೂಮಾಪಕರು ಗುರುತಿಸಿದಂತಹ ಒತ್ತುವರಿ ಪ್ರದೇಶವನ್ನು ಪಾಲಿಕೆಯ ಅಧಿಕಾರಿಗಳು, ಮಾರ್ಷಲ್‌ಗಳ ತಂಡವು ಪೊಲೀಸ್ ಸಿಬ್ಬಂದಿ ಸಹಯೋಗದೊಂದಿಗೆ ಜೆಸಿಬಿ ಯಂತ್ರಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಮಹದೇವಪುರ ವಲಯದಲ್ಲಿ ಚಿನ್ನಪ್ಪನಹಳ್ಳಿಯಿಂದ ಮುನ್ನೇಕೊಳಾಳ ಕೆರೆಯ ನಡುವೆ ಎಇಸಿಎಸ್ ಲೇಔಟ್ ವ್ಯಾಪ್ತಿಯಲ್ಲಿ ಸಾಯಿ ಕಣ್ಣಿನ ಆಸ್ಪತ್ರೆಯ ಕಾಂಪೌಂಡ್ ಗೋಡೆ, ರಾಘವ ಸೂಪರ್ ಮಾರ್ಕೆಟ್ ಮುಂಭಾಗದ ಒಳ ಹರಿವಿನ ಕಾಲುವೆ ಸೇರಿದಂತೆ 3 ಕಟ್ಟಡಗಳು, 4 ಕಾಂಪೌಂಡ್ ಗೋಡೆ ಹಾಗೂ ರಸ್ತೆಯನ್ನು ಅತಿಕ್ರಮಣವನ್ನು ಕ್ಲಿಯರ್ ಮಾಡಲಾಗಿದೆ ಎಂದಿದೆ.

ಜೆಸಿಬಿ ಆಪರೇಷನ್

ಚೆಲ್ಲಘಟ್ಟ ವ್ಯಾಪ್ತಿಯಲ್ಲಿ ಪ್ರೆಸ್ಟೀಜ್​ನ ಖಾಲಿ ಜಾಗ, ಕಾಂಪೌಂಡ್ ಗೋಡೆ ಹಾಗೂ ಹೂಡಿ ಬಳಿ ಗೋಪಾಲನ್ ಶಾಲೆ ಹಾಗೂ ಮಹಾವೀರ್ ಅಪಾರ್ಟ್​ಮೆಂಟ್​ನ ಕಾಂಪೌಂಡ್ ಗೋಡೆ ಸೇರಿದಂತೆ 3 ಕಾಂಪೌಂಡ್ ಗೋಡೆಗಳನ್ನು ಮತ್ತು ಸ್ಪೈಸಿ ಗಾರ್ಡನ್ ಬಳಿ 4 ಕಾಂಪೌಂಡ್ ಗೋಡೆಗಳು, ರಸ್ತೆಗಳನ್ನು ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಒತ್ತುವರಿದಾರರಿಗೆ ಎಚ್ಚರಿಕೆ: ಕೆ. ಆರ್ ಪುರದ ಬಸವನಪುರ ವಾರ್ಡ್ ಎಸ್. ಆರ್ ಲೇಔಟ್ ವ್ಯಾಪ್ತಿಯ ಕೇಂಬ್ರಿಡ್ಜ್ ಕಾಲೇಜು ಆವರಣದಲ್ಲಿ 77 ಮೀಟರ್ ಉದ್ದ ಹಾಗೂ 2.6 ಮೀಟರ್ ಅಗಲದ ಮಳೆ ನೀರುಗಾಲುವೆಯ ಮೇಲೆ ಸ್ಲ್ಯಾಬ್ ಅಳವಡಿಸಲಾಗಿತ್ತು. ಇಂದು ಪಾಲಿಕೆ ಅಧಿಕಾರಿಗಳು ಎರಡು ಜೆಸಿಬಿಗಳ ಮೂಲಕ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ಮಳೆ ನೀರುಗಾಲುವೆ ಮೇಲೆ ಅಳವಡಿಸಿದ್ದ ಸ್ಲ್ಯಾಬ್​​ಗಳನ್ನು ತೆರವು ಮಾಡಲಾಗಿದೆ.

ಇಂದು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿರುವ ಎಲ್ಲ ಕಡೆಗಳಲ್ಲಿಯೂ ಮತ್ತೊಮ್ಮೆ ಒತ್ತುವರಿ ಮಾಡದಂತೆ ಹಾಗೂ ಮಳೆ ನೀರುಗಾಲುವೆಯ ಮೇಲೆ ಕಾಂಪೌಂಡ್ ಗೋಡೆ ನಿರ್ಮಿಸದಂತೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಒತ್ತುವರಿ ಆಗಿರುವ ಪ್ರದೇಶಗಳ ತೆರವು ಕಾರ್ಯಾಚರಣೆ ಮುಂದುವರೆಸಲಾಗುತ್ತದೆ ಎಂದು ಪಾಲಿಕೆ ಹೇಳಿದೆ.

ಓದಿ:ರಾಜಕಾಲುವೆ ಒತ್ತುವರಿ ಮಾಡಿರುವ 600 ಕಟ್ಟಡ ತೆರವಿಗೆ ಸೂಚನೆ.. ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ABOUT THE AUTHOR

...view details