ಬೆಂಗಳೂರು:ಬಡಕುಟುಂಬದಲ್ಲಿ ಹುಟ್ಟಿದರೂ, ಓದಿ ಸಾಧಿಸಬೇಕು ಎನ್ನುವ ಛಲದಿಂದ ಇಲ್ಲೋರ್ವ ಬಾಲಕಿ ಓದಿನ ಜೊತೆ ಜೊತೆಗೇ ಹೂವು ಮಾರಿ ಜೀವನ ಸಾಗಿಸುತ್ತಿದ್ದಾಳೆ. ಬನಶಂಕರಿ ಎಂಬ ಬಾಲಕಿ, ಜುಲೈ 16ಕ್ಕೆ ಆರಂಭವಾಗುವ SSLC ಪರೀಕ್ಷೆಗೆ ಆನ್ ಲೈನ್ ಪಾಠ ಕೇಳಿ, ಓದಿಕೊಂಡು ತಯಾರಾಗುತ್ತಿದ್ದಾಳೆ. ಇದಲ್ಲದೆ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಹಾಗೂ ಸಂಜೆ ಸಮಯದಲ್ಲಿಯೂ ಬಿಬಿಎಂಪಿ ಆವರಣದ ದೇವಸ್ಥಾನದಲ್ಲಿ ಕಳೆದ ಐದು ವರ್ಷದಿಂದ ಹೂವು ಕಟ್ಟಿ ಮಾರುತ್ತಿದ್ದಾಳೆ.
ಹೂವು ಮಾರಿ ವಿದ್ಯಾಭ್ಯಾಸ.. SSLC ವಿದ್ಯಾರ್ಥಿನಿಗೆ ಬಿಬಿಎಂಪಿ ಆಯುಕ್ತರಿಂದ ವಿಶೇಷ ಕೊಡುಗೆಯ ಭರವಸೆ
ಹೂವು ಮಾರಿ, ಓದಿನ ಖರ್ಚಿಗೆ ತಾನೇ ದುಡಿದು ಸಂಪಾದಿಸುವ ಛಲ ಹೊಂದಿರುವ ಬಾಲಕಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಲ್ಯಾಪ್ ಟಾಪ್ಅನ್ನು ಕೊಡುಗೆಯಾಗಿ ನೀಡಲು ಮುಂದಾಗಿದ್ದಾರೆ. ಇದು ತನ್ನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದು ವಿದ್ಯಾರ್ಥಿನಿ ಬನಶಂಕರಿ ಸಂತಸ ವ್ಯಕ್ತಪಡಿಸಿ, ಆಯುಕ್ತರಿಗೆ ಕೃತಜ್ಞತೆ ಸಲ್ಲಿಸಿದ್ದಾಳೆ.
ಬನಶಂಕರಿಯ ತಂದೆ ಮಗ್ಗ ನೇಯುವ ಕೆಲಸ ಮಾಡುತ್ತಿದ್ದು, ತಾಯಿಯೂ ಮಗಳ ಜೊತೆ ದೇವಸ್ಥಾನದಲ್ಲಿ ಕೆಲಸಕ್ಕೆ ಸಹಾಯ ಮಾಡುತ್ತಿದ್ದಾರೆ. ಬನಶಂಕರಿ ಮಿತ್ರಾಲಯ ಎಂಬ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದಾಳೆ. ತನ್ನ ಶಾಲೆಯ ಶುಲ್ಕ, ಓದಿನ ಖರ್ಚಿಗೆ ತಾನೇ ದುಡಿದು ಸಂಪಾದಿಸುವ ಛಲ ಹೊಂದಿದ್ದಾಳೆ.
ಪಾಲಿಕೆಯ ಮುಖ್ಯ ಆಯುಕ್ತ ಗೌರವ್ ಗುಪ್ತಾ ಬಾಲಕಿಯ ಹಠ ಹಾಗೂ ಸಾಧನೆಯನ್ನು ಗುರುತಿಸಿ, ಲ್ಯಾಪ್ ಟಾಪ್ ಕೊಡುವುದಾಗಿ ತಿಳಿಸಿದ್ದಾರೆ. ಬಾಲಕಿ ಕಷ್ಟಪಟ್ಟು ಕೆಲಸ ಮಾಡಿಕೊಂಡು ಓದುತ್ತಿರುವುದನ್ನು ನೋಡಿದರೆ, ನನ್ನ ಜೀವನದ ಕೆಲವು ಘಟನೆಗಳು ನೆನಪಾಗುತ್ತಿವೆ. ಶ್ರಮದಿಂದ ಅಷ್ಟೇ ಯಾವುದೇ ಸಾಧನೆ ಮಾಡಲು ಸಾಧ್ಯ. ಹೀಗಾಗಿ ಈ ಹುಡುಗಿಗೂ ಬಹಳ ಉತ್ತಮ ಭವಿಷ್ಯವಿದೆ ಎಂದು ಅವರು ಹೇಳಿದ್ದಾರೆ.