ಬೆಂಗಳೂರು:ಕೇರಳದಲ್ಲಿ ನಿಫಾ ವೈರಸ್ ಹಾವಳಿ ಹೆಚ್ಚಳವಾಗಿದ್ದು ರಾಜ್ಯಕ್ಕೆ ಕೇರಳದಿಂದ ಬರುವುದನ್ನು ಹಾಗೂ ರಾಜ್ಯದಿಂದ ಕೇರಳಕ್ಕೆ ಹೋಗಿ ಬರುವುದನ್ನು ನಿರ್ಬಂಧಿಸಿ ಅಕ್ಟೋಬರ್ ಅಂತ್ಯದವರೆಗೆ ರಾಜ್ಯಸರ್ಕಾರ ಸೂಚನೆ ಹೊರಡಿಸಿದೆ. ಆದರೆ ಇದರ ಅನುಷ್ಠಾನಕ್ಕೆ ಇನ್ನಷ್ಟೇ ಸ್ಥಳೀಯ ಆಡಳಿತಗಳು ಮುಂದಾಗಬೇಕಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ನಿನ್ನೆ ಸಂಜೆಯಷ್ಟೆ ಸರ್ಕಾರ ಆದೇಶ ಹೊರಡಿಸಿದೆ. ಇದನ್ನು ಜಾರಿಗೊಳಿಸಬೇಕಿದೆ. ಪೊಲೀಸ್ ಸಿಬ್ಬಂದಿ, ಹೋಂ ಗಾರ್ಡ್ಸ್, ಮಾರ್ಷಲ್ಸ್ ಹಾಗು ಆರೋಗ್ಯ ಅಧಿಕಾರಿಗಳು ಆದೇಶವನ್ನು ಅನುಷ್ಠಾನಗೊಳಿಸಲಿದ್ದಾರೆ ಎಂದಿದ್ದಾರೆ.
ನಗರದಲ್ಲಿ ಲಸಿಕೆ ಪೂರೈಕೆ ಪ್ರಮಾಣ ಹೆಚ್ಚಾಗಿರುವುದರಿಂದ ಒಂದರಿಂದ ಒಂದೂವರೆ ಲಕ್ಷ ಜನರಿಗೆ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆರಂಭದಲ್ಲಿ ಯಲಹಂಕದಲ್ಲಿ ಚಾಲನೆ ನೀಡಲಾಗುತ್ತಿದೆ.
ಕೋವಿಡ್ನಿಂದ ಮೃತಪಟ್ಟ ಬಿಬಿಎಂಪಿ ಸಿಬ್ಬಂದಿಗಳ ಕುಟುಂಬಕ್ಕೆ 30 ಲಕ್ಷ ರೂ ಪರಿಹಾರ, ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ವಿರುದ್ಧವಾಗಿ ಪಾಲಿಕೆಯಲ್ಲಿ ಕೆಲಸ ಮಾಡ್ತಿರುವ ಬೇರೆ ಇಲಾಖೆ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಹಿಂದಿರುಗಿಸಬೇಕೆಂದು ನಿನ್ನೆ ನೌಕರರು ಪ್ರತಿಭಟನೆ ನಡೆಸಿ, ಒತ್ತಾಯಿಸಿದ್ದರು. ನೌಕರರ ಪ್ರತಿಭಟನೆ ವೇಳೆ ಹಲವು ಆಶ್ವಾಸನೆ ಕೊಡಲಾಗಿದೆ ಎಂದರು.
ಗಣೇಶೋತ್ಸವದಲ್ಲಿ ಹೆಚ್ಚು ಜನ ಸೇರದಂತೆ ಸ್ಥಳೀಯವಾಗಿ ಪೊಲೀಸರು ಎಚ್ಚರ ವಹಿಸಬೇಕಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕೆಲವು ನಿಗಾ ಇಡಬೇಕಾಗುತ್ತದೆ. ನಿಫಾ ವೈರಸ್ ಹಿನ್ನೆಲೆ, ಆರೋಗ್ಯಾಧಿಕಾರಿಗಳು ಎಚ್ಚರ ವಹಿಸಿದ್ದಾರೆ ಎಂದರು.