ಬೆಂಗಳೂರು: 15 ದಿನಗಳಲ್ಲಿ ನಗರದ ಎಲ್ಲ ವಲಯದಲ್ಲಿರುವ ಕಟ್ಟಡಗಳ ಮಾಹಿತಿ ಕೇಳಲಾಗಿದೆ. ತೀವ್ರ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿರುವ ಕಟ್ಟಡಗಳನ್ನು ನೆಲಸಮಗೊಳಿಸಬೇಕು. ಹಾಗೂ ಸದೃಢ ಕಟ್ಟಡಗಳಿಗೆ ಪ್ರಮಾಣ ಪತ್ರ ನೀಡಿ ಸರ್ವೇ ವರದಿಯಿಂದ ಕೈಬಿಡುವ ಕೆಲಸ ನಡೆಯುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.
ಬಿಬಿಎಂಪಿ ಆವರಣದಲ್ಲಿರುವ ಐತಿಹಾಸಿಕ ದೇವಾಲಯ ಅಭಿವೃದ್ಧಿ ಕಾಮಗಾರಿ ಚಾಲನಾ ಕಾರ್ಯಕ್ರಮದ ಬಳಿಕ, ಶಿಥಿಲ ಕಟ್ಟಡಗಳ ಸರ್ವೇ ಕಾರ್ಯಪ್ರಗತಿ ಕುರಿತು ಉತ್ತರಿಸಿದ ಮುಖ್ಯ ಆಯುಕ್ತರು, ಸೆಪ್ಟೆಂಬರ್ 30 ರಂದು ಕಂದಾಯ ಸಚಿವ ಆರ್. ಅಶೋಕ್ ಅವರ ನೇತೃತ್ವದಲ್ಲಿ ಸಭೆ ನಡೆಸಿ, ಹದಿನೈದು ದಿನಗಳೊಳಗೆ ಸರ್ವೇ ನಡೆಸಲು ತಿಳಿಸಲಾಗಿತ್ತು.
ಈ ಹಿಂದೆ ನಡೆದಿರುವ ಸರ್ವೇ ವರದಿ ನಮ್ಮ ಬಳಿ ಇದೆ. ತೀವ್ರವಾಗಿ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿರುವ ಕಟ್ಟಡಗಳನ್ನು ನೆಲಸಮಗೊಳಿಸಬೇಕು. ಎಲ್ಲೆಲ್ಲಿ ಈಗಾಗಲೇ ಮಾಲೀಕರು ಸರಿಪಡಿಸಿ, ಕಟ್ಟಡವನ್ನು ಮತ್ತೆ ಸದೃಢಗೊಳಿಸಿದ್ದಾರೋ ಅದನ್ನು ಪ್ರಮಾಣೀಕರಿಸಿ ಅವರಿಗೆ ಪ್ರಮಾಣಪತ್ರ ನೀಡಲಾಗುವುದು ಎಂದರು.
ರಾಜಧಾನಿಯ ಎಲ್ಲ ಕಟ್ಟಡಗಳ ಸರ್ವೆಗೆ BBMP ಕಮಿಷನರ್ ಸೂಚನೆ..! ನಿನ್ನೆ ಹೊಸ ಕಟ್ಟಡವೇ ಬಿದ್ದಿದೆ. ತಳಪಾಯ ಸರಿಯಾಗಿ ಮಾಡಿಲ್ಲದ ಕಾರಣ ಬಿದ್ದಿದೆ ಎಂಬುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಎರಡನೆಯದಾಗಿ ಹೆಚ್ಚಿನ ಭಾರ ತಡೆದುಕೊಳ್ಳುವಷ್ಟು ಕಟ್ಟಡಕ್ಕೆ ಸಾಮರ್ಥ್ಯ ಇರಲಿಲ್ಲ. ಮೇಲ್ನೋಟಕ್ಕೆ ಕಟ್ಟಡ ನಿರ್ಮಾಣ ಸಂಸ್ಥೆಯ ತಪ್ಪು ಇರುವುದು ಕಂಡು ಬಂದಿದೆ. ಅವರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು.
ಕಟ್ಟಡ ಬಿದ್ದ ಜಾಗದಲ್ಲಿ ರೆವೆನ್ಯೂ ಲೇಔಟ್ ಹಾಗೂ ಬಿಡಿಎ ಲೇಔಟ್ ಇದೆ. ಬಿಡಿಎ ಲೇಔಟ್ ಒಂದು ಕೆರೆ ಪ್ರಾಂಗಣದೊಳಗೆ ನಿರ್ಮಾಣವಾಗಿರುವುದು ಕಂಡುಬಂದಿದೆ. ಆದರೆ, ಕುಸಿದಿರುವ ಕಟ್ಟಡ ರೆವೆನ್ಯೂ ಲೇಔಟ್ನಲ್ಲಿದೆ. ಅದು ಕೆರೆ ಜಾಗದಲ್ಲಿಲ್ಲ. ಏನೇ ಆದರೂ ಕಟ್ಟಡದ ಸಾಮರ್ಥ್ಯಕ್ಕೆ ತಕ್ಕ ತಳಪಾಯ ಗಟ್ಟಿ ಇರಬೇಕಿತ್ತು. ಅದು ಕುಸಿದಿರುವ ಕಾರಣ ಈ ಪ್ರಮಾದ ಆಗಿದೆ. ಹೀಗಾಗಿ ಈ ಸ್ಟ್ರಕ್ಚರಲ್ ಸಸ್ಟೆನಬಿಲಿಟಿ ಬಗ್ಗೆ ಅಧ್ಯಯನ ಮಾಡಲಾಗ್ತಿದೆ. ಸುತ್ತಮುತ್ತಲಿನ ಮನೆಗಳ ಬಗ್ಗೆಯೂ ಪರಿಶೀಲಿಸಲಾಗುತ್ತದೆ ಎಂದು ಆಯುಕ್ತರು ಮಾಹಿತಿ ನೀಡಿದರು.
ಪಾಲಿಕೆ ನಿಯಮ ಮೀರಿದ್ರೆ ಕಟ್ಟಡ ತೆರವು: ಬಿಬಿಎಂಪಿಯ ಕಟ್ಟಡ ನಿರ್ಮಾಣದ ನಿಯಮಗಳನ್ನು ಗಾಳಿಗೆ ತೂರಿ, ಪಾಲಿಕೆ ನೀಡಿದ ಅನುಮತಿಗಿಂತ ಹೆಚ್ಚಿನ ಮಹಡಿಗಳು ಕಟ್ಟಿದ್ರೆ ಇನ್ಮುಂದೆ ಪಾಲಿಕೆ ತೆರವು ಮಾಡಲು ಚಿಂತನೆ ನಡೆಸಿದೆ. ಬಿಬಿಎಂಪಿ ಬಿಲ್ಡಿಂಗ್ ಕನ್ಸ್ಟ್ರಕ್ಷನ್ ಬೈಲಾ ನಿಯಮ ಉಲ್ಲಂಘನೆ ಮಾಡಿದರೆ ಮುಲಾಜಿಲ್ಲದೇ ಕ್ರಮಕೈಗೊಳ್ಳಬೇಕೆಂದು, ಎಲ್ಲ ವಲಯಗಳ ಇಂಜಿನಿಯರ್ಗಳಿಗೆ ಸೂಚನೆ ನೀಡಲಾಗಿದೆ.
ಅಧಿಕಾರಿಗಳಿಗೆ ಎಚ್ಚರಿಕೆ: ಕಟ್ಟಡ ನಿರ್ಮಾಣದ ಪ್ಲಾನ್ಗೆ ಅನುಮತಿ ಕೊಟ್ಟ ಬಳಿಕ ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು. ಇಲ್ಲವಾದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿದರೆ ಅದಕ್ಕೆ ನೀವೇ ಹೊಣೆ ಎಂದು ನಿನ್ನೆಯ ಘಟನೆಯಲ್ಲಿ ಸಹಾಯಕ ಇಂಜಿನಿಯರ್ ಒಬ್ಬರನ್ನು ಅಮಾನತು ಮಾಡುವ ಮೂಲಕ ಎಚ್ಚರಿಕೆ ರವಾನಿಸಲಾಗಿದೆ.
ದೇವಾಲಯ ಅಭಿವೃದ್ಧಿಗೆ ಚಾಲನೆ: ಬಿಬಿಎಂಪಿ ಆವರಣದಲ್ಲಿರುವ ಐತಿಹಾಸಿಕ ದೇವಾಲಯವನ್ನು ಅಭಿವೃದ್ಧಿಪಡಿಸಲು ಇಂದು ಶಾಸಕರಾದ ರಿಜ್ವಾನ್ ಅರ್ಷದ್ ಚಾಲನೆ ನೀಡಿದರು. ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಮೂರ್ನಾಲ್ಕು ತಿಂಗಳಲ್ಲಿ ಈ ಕೆಲಸ ನಡೆಯಲಿದೆ. ಗರ್ಭಗುಡಿ ನಿರ್ಮಾಣ ಸೇರಿದಂತೆ 50 ಲಕ್ಷ ವೆಚ್ಚದಲ್ಲಿ ಕಾಮಗಾರಿಗಳು ನಡೆಯಲಿವೆ. ನವರಾತ್ರಿ ಹಬ್ಬದ ದಿನಗಳಲ್ಲಿ ದೇವಿ ದೇವಸ್ಥಾನದ ಕೆಲಸದಲ್ಲಿ ಪಾಲ್ಗೊಂಡಿದ್ದು ಖುಷಿ ತಂದಿದೆ ಎಂದರು.