ಕರ್ನಾಟಕ

karnataka

By

Published : Aug 11, 2023, 8:37 AM IST

ETV Bharat / state

ಆಪರೇಷನ್ ಫ್ಲೆಕ್ಸ್: ನಗರದೆಲ್ಲೆಡೆ 59,000 ಫ್ಲೆಕ್ಸ್ ಬ್ಯಾನರ್ ತೆರವುಗೊಳಿಸಿದ ಬಿಬಿಎಂಪಿ

ರಾಜ್ಯ ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲೇ ಬೆಂಗಳೂರು ನಗರದಲ್ಲಿ ಬರೋಬ್ಬರಿ 59,000 ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್‌ಗಳನ್ನು ತೆರವುಗೊಳಿಸಲಾಗಿದೆ.

bbmp
ಬಿಬಿಎಂಪಿ

ಬೆಂಗಳೂರು: ನಗರದಲ್ಲಿ ರಾರಾಜಿಸುತ್ತಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ಹಾವಳಿಗೆ ನಿರ್ದಾಕ್ಷಿಣ್ಯವಾಗಿ ಕಡಿವಾಣ ಹಾಕಲು ಮುಂದಾಗಿರುವ ಸರ್ಕಾರ 'ಆಪರೇಷನ್ ಫ್ಲೆಕ್ಸ್' ನಡೆಸುತ್ತಿದೆ. ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲೇ ನಗರದಲ್ಲಿ ಬರೋಬ್ಬರಿ 59,000 ಫ್ಲೆಕ್ಸ್ ಬ್ಯಾನರ್​ಗಳನ್ನು ಬಿಬಿಎಂಪಿ ತೆರವುಗೊಳಿಸಿದೆ.

ನಗರಾದ್ಯಂತ ರಾರಾಜಿಸುತ್ತಿದ್ದ ಫ್ಲೆಕ್ಸ್ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಗರದಲ್ಲಿ ಫ್ಲೆಕ್ಸ್, ಬ್ಯಾನರ್‌ಗಳು ರಾರಾಜಿಸಿದ್ದವು. ಹಲವು ಕಡೆಗಳಲ್ಲಿ ಸಿಎಂ, ಸಚಿವರ, ಶಾಸಕರ ಸಾಧನೆಗಳನ್ನು ಬಿಂಬಿಸುವ ಹಾಗೂ ಹುಟ್ಟುಹಬ್ಬಗಳಿಗೆ ಶುಭಕೋರುವ ಬ್ಯಾನರ್​ಗಳನ್ನು ಹಾಕಲಾಗಿತ್ತು. ಮುಖ್ಯವಾಗಿ ನಗರದ ಪ್ರಮುಖ ವೃತ್ತಗಳಾದ ಕಾರ್ಪೊರೇಷನ್‌ ಸರ್ಕಲ್, ಕೆಆರ್ ವೃತ್ತ, ಟೌನ್ ಹಾಲ್ ಸರ್ಕಲ್‌, ವಿಧಾನಸೌಧ ಜಂಕ್ಷನ್‌, ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು.

ಬಿಬಿಎಂಪಿ ಕಾಯ್ದೆ :ಬಿಬಿಎಂಪಿಯ ತೆರೆದ ಸ್ಥಳಗಳ ಕಾಯ್ದೆ ಸೆಕ್ಷನ್ 3 ರ ಅಡಿಯಲ್ಲಿ ಬ್ಯಾನರ್‌, ಬಂಟಿಂಗ್ಸ್, ಫ್ಲೆಕ್ಸ್​ ಮತ್ತು ಪೋಸ್ಟರ್‌ ಹಾಕುವುದನ್ನು ನಿಷೇಧಿಸಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಹೇಳುತ್ತಾ ಬಂದಿತ್ತು. ಆದರೆ, ರಾಜಕಾರಣಿಗಳ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳು ಎಲ್ಲೆಡೆ ರಾರಾಜಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಆಗಸ್ಟ್ 2 ರಂದು ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್:ಅಕ್ರಮ ಫ್ಲೆಕ್ಸ್ ಮತ್ತು ಹೋರ್ಡಿಂಗ್‌ಗಳನ್ನು ತೆರವು ಮಾಡುವಂತೆ ಆಗಸ್ಟ್ 2 ರಂದು ಹೈಕೋರ್ಟ್ ಬಿಬಿಎಂಪಿಗೆ ಆದೇಶ ನೀಡಿತ್ತು. ಬೆಂಗಳೂರಿನಲ್ಲಿ ಅನಧಿಕೃತ ಜಾಹೀರಾತು ಹಾವಳಿ ತಡೆಯಲು ಪಂಚವಾರ್ಷಿಕ ಯೋಜನೆ ಬೇಕೇ?, ಫ್ಲೆಕ್ಸ್ ತೆರವಿಗೆ ಶುಭ ಮುಹೂರ್ತಕ್ಕಾಗಿ ಕಾಯುತ್ತಿದ್ದೀರಾ? ಎಂದು ಹೈಕೋರ್ಟ್ ಕೆಲ ದಿನಗಳ ಹಿಂದೆ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

ಇದನ್ನೂ ಓದಿ :ನಗರದಲ್ಲಿ ರಾರಾಜಿಸುತ್ತಿವೆ ರಾಜಕಾರಣಿಗಳ ಹುಟ್ಟುಹಬ್ಬಕ್ಕೆ ಶುಭ ಕೋರುವ ಫ್ಲೆಕ್ಸ್ ಬ್ಯಾನರ್..

59,000 ಫ್ಲೆಕ್ಸ್ ತೆರವು : ಹೈಕೋರ್ಟ್‌ ಛೀಮಾರಿ ಹಾಕಿರುವ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು, ನಗರದ ವಿವಿಧೆಡೆ ತಲೆ ಎತ್ತಿದ್ದ 59,000 ಫ್ಲೆಕ್ಸ್, ಬ್ಯಾನರ್​ಗಳನ್ನು ತೆರವು ಮಾಡಿದೆ. ಅಕ್ರಮ ಹೋರ್ಡಿಂಗ್‌ಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿಗೆ 134 ದೂರುಗಳು ಬಂದಿದ್ದು, 44 ಎಫ್‌ಐಆರ್‌ಗಳು ದಾಖಲಾಗಿದೆ.

50 ಸಾವಿರ ದಂಡ : ಅನಧಿಕೃತ ಫ್ಲೆಕ್ಸ್​ಗೆ ತಲಾ 50 ಸಾವಿರ ರೂ. ದಂಡ ವಿಧಿಸಲಾಗುವುದು. ಜತೆಗೆ ಫ್ಲೆಕ್ಸ್ ಹಾಕಿದವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು. ನಗರದಲ್ಲಿ 59 ಸಾವಿರ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ. 134 ದೂರುಗಳನ್ನು ದಾಖಲಿಸಿಕೊಂಡು, 44 ಎಫ್‌ಐಆರ್ ದಾಖಲಿಸಲಾಗಿದೆ. ಖಾಸಗಿ ಸ್ಥಳಗಳಲ್ಲಿ ಫ್ಲಕ್ಸ್ ಹಾಕಲು ನಿರ್ಬಂಧ ಇರುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ :ಇನ್ಮುಂದೆ ಬೆಂಗಳೂರಲ್ಲಿ ಫ್ಲೆಕ್ಸ್, ಹೋರ್ಡಿಂಗ್ಸ್ ಹಾಕಿದ್ರೆ 50 ಸಾವಿರ ರೂಪಾಯಿ ದಂಡ: ಡಿಸಿಎಂ ಡಿ ಕೆ ಶಿವಕುಮಾರ್​ ಎಚ್ಚರಿಕೆ

ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ : ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್‌ಗಳನ್ನು ನಿಷೇಧಿಸಲಾಗಿದೆ. ಈಗಾಗಲೇ ಆದೇಶ ಇದ್ದರೂ ಪಾಲನೆ ಆಗದಿರುವುದು ಕಂಡುಬಂದಿದೆ. ಅವನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವುದು. ನನ್ನ ಮತ್ತು ಮುಖ್ಯಮಂತ್ರಿಗಳ ಭಾವಚಿತ್ರ ಇದ್ದರೂ ತೆಗೆದುಹಾಕಲು ಸೂಚಿಸಲಾಗಿದೆ. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆ ಇಲ್ಲ, ನ್ಯಾಯಾಲಯದ ಆದೇಶದಂತೆ ಸರ್ಕಾರ ಈ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ ಹೇಳಿದ್ದಾರೆ.

ABOUT THE AUTHOR

...view details