ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಿದ ಬಳಿಕ ಡಿ ಜೆ ಹಳ್ಳಿ ಗಲಭೆ ಪ್ರಕರಣ ತನಿಖೆಗೆ ವಹಿಸುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆರ್ .ಟಿ. ನಗರದ ತಮ್ಮ ನಿವಾಸದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ, ಗಲಭೆ ಸಂಬಂಧ ಸಮಗ್ರ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಜೊತೆ ಚರ್ಚೆ ನಡೆಸಿದ ಬಳಿಕ ಯಾವ ರೀತಿ ತನಿಖೆ ನಡೆಸಬೇಕೆಂದು ನಿರ್ಧರಿಸಲಾಗುತ್ತದೆ. ನಮ್ಮ ಪೊಲೀಸರು ಶಕ್ತರಿದ್ದಾರೆ. ತನಿಖೆಯನ್ನು ನಾವೇ ನಡೆಸುತ್ತೇವೆ ಎಂದರು.
ಡಿ ಜೆ ಹಳ್ಳಿ, ಕೆ ಜಿ ಹಳ್ಳಿಯಲ್ಲಿ ಕೆಲವರು ಪುಂಡಾಟಿಕೆ ಮೆರೆದಿದ್ದಾರೆ. ಈ ಕುರಿತು ಫೇಸ್ಬುಕ್ ಪೋಸ್ಟ್ ಆಗಿದ್ದು, 6 ಗಂಟೆಗೆ ಸ್ಕ್ರೀನ್ ಶಾಟ್ ಎಲ್ಲರಿಗೂ ಹೋಗಿದೆ. ಏಳು ಗಂಟೆಗೆ ಕೂಡಲೇ ಡಿಸಿಪಿ ಅಲ್ಲಿ ಹೋಗಿ ತಿಳಿಹೇಳಿದ್ದಾರೆ. ಆದರೂ ಗಲಭೆ ನಡೆಸಲಾಗಿದೆ. ಗಾಳಿಯಲ್ಲಿ ಗುಂಡು ಹೊಡೆದರೂ ಹಿಂದೆ ಸರಿಯದ ಕಾರಣ ಅನಿವಾರ್ಯವಾಗಿ ಫೈರಿಂಗ್ ಮಾಡಬೇಕಾಯಿತು ಎಂದು ಪೊಲೀಸರ ಕ್ರಮವನ್ನು ಗೃಹ ಸಚಿವರು ಸಮರ್ಥಿಸಿಕೊಂಡರು.
ಘಟನೆ ಸಂಬಂಧ 145 ಜನರನ್ನು ಬಂಧಿಸಲಾಗಿದ್ದು, ಫೇಸ್ಬುಕ್ ಪೋಸ್ಟ್ ಮಾಡಿದ್ದ ಆರೋಪಿ ನವೀನ್ ಹಾಗೂ ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಪಾಷಾ ಮತ್ತು ಫಿರೋಜ್ ಅವರನ್ನು ಬಂಧಿಸಲಾಗಿದೆ ಎಂದರು.
ಕಾಂಗ್ರೆಸ್ ನಾಯಕರು ಘಟನಾ ಸ್ಥಳಕ್ಕೆ ಭೇಟಿ ನೀಡುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಕರ್ಫ್ಯೂ ಇರುವ ಕಾರಣ ಯಾರಿಗೂ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.