ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿಯೇ ಮೇಲ್ಮನೆ ಸದಸ್ಯ ಬಸವರಾಜ್ ಹೊರಟ್ಟಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರ್ಕಾರ ಇದ್ದಾಗ ಇದ್ದ ಕಾಳಜಿ ಕುಮಾರಸ್ವಾಮಿಯವರಿಗೆ ಈಗಿಲ್ಲ. ನಮ್ಮ ಸಮಸ್ಯೆ ಕೇಳುವವರು ಕೂಡ ಯಾರಾ ಇಲ್ಲ. ವರಿಷ್ಠರು ಕೂಡ ನಮ್ಮ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ ಎಂದು ಬೇಸರ ತೋಡಿಕೊಂಡರು.
ಈ ಬಗ್ಗೆ ನಿನ್ನೆ ನಮ್ಮೆಲ್ಲಾ ಪಕ್ಷದ ಸದಸ್ಯರು ಸಭೆ ಮಾಡಿದ್ದೇವೆ. ಮುಂದೇನು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದೇವೆ. ಮತ್ತೆ ಸೋಮವಾರ ಸಭೆ ಕರೆದಿದ್ದೇವೆ. ಅಂದು ಮುಂದಿನ ನಡೆ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದ ಅವರು, ಸದ್ಯಕ್ಕೆ ಪಕ್ಷ ಬಿಡುವ ಬಗ್ಗೆ ಆಲೋಚನೆ ಮಾಡಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಇದೇ ರೀತಿ ವರ್ತಿಸಿದ್ರೆ ಕಷ್ಟ ಎಂದು ಜೆಡಿಎಸ್ನ ವರಿಷ್ಠರಿಗೆ ಬಸವರಾಜ ಹೊರಟ್ಟಿ ಎಚ್ಚರಿಕೆ ಕೊಟ್ಟಿದ್ದಾರೆ.
ಹೆಚ್ಡಿಕೆ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ ಹೊರಟ್ಟಿ 'ಸರ್ಕಾರದ ಉತ್ತರ ತೃಪ್ತಿ ತಂದಿದೆ'
ಬರ ಸಂಬಂಧ ನಾವು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಬಿಜೆಪಿಯವರು ಉತ್ತರ ಕೊಟ್ಟಿದ್ದಾರೆ. ನೆರೆ ಕುರಿತು ಸರ್ಕಾರ ನೀಡಿದ ಉತ್ತರ ತೃಪ್ತಿ ತಂದಿದೆ. ಸರ್ಕಾರ ಕೂಡ ಪರಿಹಾರ ಕಾರ್ಯಗಳನ್ನು ಸಮರ್ಥವಾಗಿ ಮಾಡಿದೆ. ಆದರೆ, ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವ ಬಗ್ಗೆ ಅವರು ಹೇಳಿಲ್ಲ ಎಂದರು.
ರಾಜಕಾರಣಿಗಳ ಪಿಎಗಳು ಎಚ್ಚರದಿಂದ ಇರಬೇಕು. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬಲಿಪಶು ಆಗುವಂತಾಯಿತು. ಇದಕ್ಕೆ ಉದಾಹರಣೆ ರಮೇಶ್ ಆತ್ಮಹತ್ಯೆ. ಹೀಗಾಗಿ ಮುಂದೆಯಾದರೂ ಪಿಎ, ಪಿಎಸ್ಗಳು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಿದರು.