ಬೆಂಗಳೂರು:ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಇಂದು ರಾಜೀನಾಮೆ ನೀಡಿದ್ದಾರೆ. ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡುತ್ತಿದ್ದೇನೆ. ಇದರ ಜೊತೆಗೆ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೂ ಮುನ್ನ ವಿಧಾನಸೌಧದ ಸಭಾಪತಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದರು. ನಾಳೆ ಸಂಜೆ 5 ಗಂಟೆಗೆ ಬಿಜೆಪಿ ಪಕ್ಷವನ್ನು ಬೆಂಗಳೂರಿನಲ್ಲಿಯೇ ಸೇರ್ಪಡೆಯಾಗಲಿದ್ದು, ಪರಿಷತ್ಗೆ 8ನೇ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲುವ ಭರವಸೆ ವ್ಯಕ್ತಪಡಿಸಿದರು.
ಪಕ್ಷೇತರವಾಗಿ ಸ್ಪರ್ಧಿಸಿದರೂ ಗೆಲ್ಲುವ ವಿಶ್ವಾಸ ನನಗಿತ್ತು. ಕ್ಷೇತ್ರದ ಶಿಕ್ಷಕ ಮತದಾರರ ಆಸೆಯಂತೆ ಈ ನಿರ್ಧಾರ ಕೈಗೊಂಡಿದ್ದೇನೆ. ಸಭಾಪತಿಯಾಗಿ ಉತ್ತಮ ಕಾರ್ಯನಿರ್ವಹಿಸಿದ್ದೇನೆ. ಬೇರೆ ಬೇರೆ ಇಲಾಖೆಗಳ 30 ಸಭೆಗಳನ್ನು ನಡೆಸಿದ್ದೇನೆ. ಹೊಸ ಶಾಸಕರಿಗೆ ತರಬೇತಿ ಕೊಟ್ಟಿದ್ದೇನೆ. ಸದನವನ್ನ ಅಜೆಂಡಾದಂತೆ ಮಾಡಿದ್ದೇವೆ. ಶೇ. 90ರಷ್ಟು ಸದನವನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಧರಣಿಗಳ ನಡುವೆ ಉತ್ತಮವಾಗಿ ನಡೆಸಿದ್ದೇವೆ ಎಂದರು.
ಬೆಳಗಾವಿ ಅಧಿವೇಶನವನ್ನು ದೂರುಗಳಿಲ್ಲದೆ ನಡೆಸಿದ್ದೇನೆ. 1 ವರ್ಷ 3 ತಿಂಗಳಿನಿಂದ ಉತ್ತಮ ಕಾರ್ಯ ನಿರ್ವಹಣೆ ಮಾಡಿದ್ದೇನೆ. ಸಿಬ್ಬಂದಿಗೆ ಯೂನಿಫಾರ್ಮ್ ಕಡ್ಡಾಯ ಮಾಡಿದ್ದೇವೆ. ಪರಿಷತ್ ಸಚಿವಾಲಯ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ ಮಾಡಲಾಗಿದೆ. ಸದಸ್ಯನಾಗಿ ಕೆಲಸದ ಬಗ್ಗೆ ಪುಸ್ತಕ ಮಾಡಿದ್ದೇವೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಶಿಕ್ಷಕರು ಬಹುಮತದಿಂದ ಆರಿಸಿ ಕಳಿಸಿದ್ದಾರೆ ಎಂದು ಹೊರಟ್ಟಿ ಹೇಳಿದರು.