ಬೆಂಗಳೂರು: ಕೇವಲ ರಾಜ್ಯಪಾಲರು ಸಭೆ ಕರೆದ ಮಾತ್ರಕ್ಕೆ ಚುನಾಯಿತ ಸರ್ಕಾರ ಅಸ್ತಿತ್ವದಲ್ಲಿರುವಾಗ ರಾಜ್ಯಪಾಲರ ಆಳ್ವಿಕೆ ಜಾರಿಯಾದಂತಿದೆ ಎನ್ನುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ಅಸಮಂಜಸವಾಗಿದ್ದು, ರಾಷ್ಟ್ರೀಯ ಪಕ್ಷವೊಂದರ ರಾಜ್ಯಾಧ್ಯಕ್ಷರಿಗೆ ಇದು ಶೋಭೆಯಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿಗಳು ಎಲ್ಲಾ ರಾಜ್ಯಗಳ ರಾಜ್ಯಪಾಲರ ಜೊತೆ ಮಾತುಕತೆ ನಡೆಸಿದ್ದಾರೆ. ನೀವು ಕೂಡ ಕೊರೊನಾದಂತಹ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಜೊತೆಗೆ ಪ್ರತಿಪಕ್ಷಗಳ ಜೊತೆ ಮಾತನಾಡಿ ಎಲ್ಲರೂ ಒಟ್ಟಾಗಿ ಕೊರೊನಾವನ್ನು ಎದುರಿಸಬೇಕು ಎಂದು ಸೂಚನೆ ಕೊಟ್ಟಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಸಲಹೆಯಂತೆ ಎಲ್ಲಾ ರಾಜ್ಯಗಳ ರಾಜ್ಯಪಾಲರು ಆಯಾ ರಾಜ್ಯಗಳಲ್ಲಿ ಸಭೆ ಕರೆಯುತ್ತಿದ್ದು ಅದರಂತೆ ನಮ್ಮಲ್ಲಿಯೂ ರಾಜ್ಯಪಾಲ ವಜುಭಾಯ್ ವಾಲಾ ಸಭೆ ಕರೆದಿದ್ದಾರೆ. ಅಷ್ಟಕ್ಕೇ ಒಂದು ರೀತಿಯಲ್ಲಿ ರಾಜ್ಯಪಾಲರ ಆಡಳಿತ ಬರುವ ರೀತಿಯಲ್ಲಿ ಇದೆ ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಹಾಗಾದರೆ ರಾಜಸ್ಥಾನದಲ್ಲಿಯೂ ರಾಜ್ಯಪಾಲರು ಸಭೆ ಕರೆದಿದ್ದಾರೆ. ಅಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಹಾಗಂತ ಅಲ್ಲಿ ರಾಜ್ಯಪಾಲರ ಆಳ್ವಿಕೆ ಬರುತ್ತದೆ ಎಂದು ಹೇಳಲು ಸಾಧ್ಯವೇ?. ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರ ಇದೆ ಅಲ್ಲಿಯೂ ರಾಜ್ಯಪಾಲರು ಸಭೆ ಕರೆದಿದ್ದಾರೆ. ಹಾಗಂತ ರಾಷ್ಟ್ರಪತಿ ಆಳ್ವಿಕೆ ರಾಜ್ಯಪಾಲರ ಆಳ್ವಿಕೆ ಬರಲಿದೆ ಎಂದು ಹೇಳಲು ಸಾಧ್ಯವೇ?. ಪ್ರತಿಯೊಂದು ವಿಚಾರದಲ್ಲಿಯೂ ಹುಳುಕು ಹುಡುಕುವುದು, ಕೊರೊನಾ ಸಂದರ್ಭದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಎಲ್ಲರ ಲಕ್ಷ್ಯ ಕೊರೊನಾ ಎದುರಿಸುವ ಸಂಬಂಧ ಇರಬೇಕೆ ಹೊರತು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸವನ್ನು ಯಾರೂ ಮಾಡಬಾರದು. ಇದನ್ನು ಡಿ ಕೆ ಶಿವಕುಮಾರ್ ಅರ್ಥಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಇಂದಿನ ಸಭೆ ನಂತರ ಟಫ್ ರೂಲ್ಸ್:ಇಂದು ರಾಜ್ಯಪಾಲರು ಕರೆದ ಸಭೆಯಲ್ಲಿ ಪ್ರತಿಪಕ್ಷದ ನಾಯಕರು, ಸದಸ್ಯರು ಇರಲಿದ್ದಾರೆ. ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ ನಾವೆಲ್ಲರೂ ಭಾಗವಹಿಸುತ್ತೇವೆ. ಆ ಸಭೆಯಲ್ಲಿ ಏನೆಲ್ಲಾ ಚರ್ಚೆಯಾಗುತ್ತದೆಯೋ ಅದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಸೆಕ್ಷನ್ 144 ಜಾರಿ ಸೇರಿದಂತೆ ಏನೆಲ್ಲಾ ಕಠಿಣ ನಿಯಮ ಜಾರಿಗೊಳಿಸಬೇಕೋ ಎಲ್ಲವನ್ನೂ ನಿರ್ಧರಿಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಒಟ್ಟಾಗಿ ಹೋರಾಡಬೇಕು:ಕಳೆದ ಬಾರಿಗಿಂತ ಈ ಬಾರಿ ವೇಗವಾಗಿ ಕೊರೊನಾ ಹಬ್ಬುತ್ತಿದೆ. ಕೇವಲ ಮೂರು ವಾರದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಬ್ಬಿದೆ. ಆದರೂ ಕೂಡ ನಾವು ಸಾವಿರಾರು ಜನರಿಗೆ ವ್ಯವಸ್ಥೆ ಕಲ್ಪಿಸಿದ್ದೇವೆ. ಜಿಲ್ಲಾ ಕೇಂದ್ರಗಳಲ್ಲಿ ಸದ್ಯಕ್ಕೆ ಯಾವ ಸಮಸ್ಯೆ ಎದುರಾಗಿಲ್ಲ ಎಲ್ಕವನ್ನೂ ನಿಭಾಯಿಸಿದ್ದೇವೆ. ಆದರೆ, ಬೆಂಗಳೂರಿನಲ್ಲಿ ಸ್ವಲ್ಪ ಸಮಸ್ಯೆಯಾಗಿದೆ. ಆಮ್ಲಜನಕದ ಕೊರತೆಯಾಗಿದೆ. ಹಾಗಾಗಿ ಆಮ್ಲಜನಕ ಉತ್ಪಾದಕರ ಜೊತೆ ಮಾತುಕತೆ ನಡೆಸಲಾಗಿದೆ. ಹೆಚ್ಚುವರಿ ಆಮ್ಲಜನಕ ಉತ್ಪಾದಿಸಿ ಪೂರೈಸಲು ಮನವಿ ಮಾಡಲಾಗಿದೆ. ಅಗತ್ಯ ಪ್ರಮಾಣದ ಆಮ್ಲಜನಕ ಪೂರೈಕೆಗೆ ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ. ಎಲ್ಲರೂ ಸೇರಿ ಕೆಲಸ ಮಾಡಬೇಕು ಹಾಗಾದಲ್ಲಿ ಮಾತ್ರ ಇದನ್ನು ಎದುರಿಸಲು ಸಾಧ್ಯ.ಇಡೀ ವ್ಯವಸ್ಥೆ ಒಟ್ಟಾಗಿ ಕೆಲಸ ಮಾಡಬೇಕು ಹಾಗಾದಲ್ಲಿ ಮಾತ್ರ ಕೊರೊನಾ ವಿರುದ್ಧದ ಹೋರಾಟದಲ್ಲಿ ಸಫಲತೆ ಕಾಣಲು ಸಾಧ್ಯ ಎಂದರು.