ಕರ್ನಾಟಕ

karnataka

ETV Bharat / state

ಐತಿಹಾಸಿಕ ಪ್ರಸಿದ್ಧ ಬಸವನಗುಡಿ ಕ್ಷೇತ್ರದಲ್ಲಿ ಈ ಬಾರಿ ಕೈ- ತೆನೆ-ಕಮಲ ಪೈಪೋಟಿ ಪಕ್ಕಾ!.. ಹೀಗಿದೆ ನೋಡಿ ಕ್ಷೇತ್ರ ವಿವರ - ಕಾಂಗ್ರೆಸ್​ ಅಭ್ಯರ್ಥಿ ಯು ಬಿ ವೆಂಕಟೇಶ್

ಪ್ರಮುಖ ಕ್ಷೇತ್ರ ಬಸವನಗುಡಿಯಲ್ಲಿ 3 ಬಾರಿಯೂ ಶಾಸಕನಾಗಿರುವ ಬಿಜೆಪಿ ಅಭ್ಯರ್ಥಿ ರವಿ ಸುಬ್ಯಹ್ಮಣ್ಯ ಈ ಬಾರಿ ಚುನಾವಣೆಯಲ್ಲಿ ಕಣಕ್ಕೆ ಇಳಿದಿದ್ದರೆ, ಬದಲಾವಣೆ ಬಯಸಿರುವ ಜೆಡಿಎಸ್​ ಪಕ್ಷದ ಅಭ್ಯರ್ಥಿ ಅರಮನೆ ಶಂಕರ್ ಹಾಗೂ ಕೈ ಅಭ್ಯರ್ಥಿ ಯು.ಬಿ. ವೆಂಕಟೇಶ್ ಅವರಿಗೆ​ ಪೈಪೋಟಿ ನೀಡಲಿದ್ದಾರೆ.

basavanagu Constituency
ಬಸವನಗುಡಿ ಕ್ಷೇತ್ರ

By

Published : May 5, 2023, 4:54 PM IST

Updated : May 5, 2023, 5:30 PM IST

ಬೆಂಗಳೂರು:ಮಹಾನಗರದ ಅತ್ಯಂತ ಹಳೆಯ ಬಡಾವಣೆ ಬಸವನಗುಡಿ. ಮರ - ಗಿಡ ಹಸಿರಿನ ಹಾಸು ಹಾಸಿರುವ ಕ್ಷೇತ್ರದಲ್ಲಿ ಜನ, ಪ್ರದೇಶ ಮಾತ್ರವಲ್ಲ ವಾತಾವರಣವೂ ಸದಾ ತಣ್ಣಗಿರುತ್ತದೆ. ಆದರೆ, ಇಲ್ಲಿ ಚುನಾವಣೆ ಕಾವು ಜೋರಾದಂತೆ ಕಾಣುತ್ತಿಲ್ಲ. ಬಸವನಗುಡಿಯಂತೂ ಅತಿಹೆಚ್ಚು ದೇಗುಲಗಳು, ಉದ್ಯಾನ, ಹಿರಿಯ ಜೀವಗಳ ಆವಾಸ ತಾಣ, ಉತ್ತಮ ಕೆರೆಗಳು, ಬಹುಮುಖ್ಯವಾಗಿ ಆಕರ್ಷಕ ಶಾಪಿಂಗ್ ತಾಣಗಳು, ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡು ಒಂದು ಪರಿಪೂರ್ಣ ಪ್ರದೇಶವಾಗಿ ಗುರುತಾಗಿದೆ. ಧಾರ್ಮಿಕ, ಸಾಹಿತ್ಯ, ಸಾಂಸ್ಕೃತಿಕ ಸೊಗಡಿನ ತವರಾಗಿರುವ ಬಸವನಗುಡಿ ಕನ್ನಡಿಗರೇ ಅತಿ ಹೆಚ್ಚು ನೆಲೆಸಿರುವ ತಾಣವಾಗಿದೆ.

ಬಸವನಗುಡಿ ಕ್ಷೇತ್ರ

ಬಿಜೆಪಿ ಭದ್ರಕೋಟೆ ಬಸವನಗುಡಿ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಕ್ಷೇತ್ರ ಬಸವನಗುಡಿ. ದೊಡ್ಡ ಬಸವಣ್ಣ ದೇವಸ್ಥಾನ ಇರುವುದರಿಂದಾಗಿ ಈ ಪ್ರದೇಶಕ್ಕೆ ಬಸವನಗುಡಿ ಎನ್ನುವ ಹೆಸರು ಬಂದಿದೆ. ಬಿಜೆಪಿ ಭದ್ರಕೋಟೆಯಾಗಿರುವ ಕ್ಷೇತ್ರದಲ್ಲಿ ಶಾಸಕ ರವಿ ಸುಬ್ರಹ್ಮಣ್ಯ ಅವರ ಹ್ಯಾಟ್ರಿಕ್​ ಗೆಲುವಿನ ನಂತರದ ಓಟಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ಪಕ್ಷದಿಂದ ಪ್ರಭಲ ಅಭ್ಯರ್ಥಿಯಾಗಿ ವಿಧಾನ ಪರಿಷತ್​ ಸದಸ್ಯ ಯು.ಬಿ. ವೆಂಕಟೇಶ್ ಕಣಕ್ಕಿಳಿದಿದ್ದಾರೆ.

ಬ್ರಾಹ್ಮಣ ಮತ್ತು ಒಕ್ಕಲಿಗರ ಸಮಾನ ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ಈ ಎರಡು ಸಮುದಾಯಗಳೇ ಅಭ್ಯರ್ಥಿಯ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಜೆಡಿಎಸ್​ ಈ ಸಾರಿ ಹೊರಗಿನವರಿಗೆ ಮಣೆ ಹಾಕಿದ್ದು, ಅರಮನೆ ಶಂಕರ್​ಗೆ ಟಿಕೆಟ್​ ನೀಡಿದೆ. ಕಳೆದ ಎರಡು ಅವಧಿಯಿಂದ ಕೆ.ಬಾಗೇಗೌಡರಿಗೆ ಟಿಕೆಟ್ ನೀಡಿದ್ದ ಜೆಡಿಎಸ್​ ಈ ಸಾರಿ ಬದಲಾವಣೆ ಬಯಸಿದೆ. ಬಸವನಗುಡಿಯಲ್ಲಿ ಈ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್​,ಆಪ್, ಉತ್ತಮ ಪ್ರಜಾಕೀಯ ಹಾಗೂ ಪಕ್ಷೇತರರೂ ಸೇರಿದಂತೆ ಒಟ್ಟು 12 ಮಂದಿ ಕಣದಲ್ಲಿದ್ದಾರೆ.

ಬಸವನಗುಡಿ ಕ್ಷೇತ್ರ ನೋಟ

ಮತದಾರರ ವಿವರ:ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ 2,38,617 ಮತದಾರರಿದ್ದು, ಇವರಲ್ಲಿ 1,22,455 ಪುರುಷ ಮತದಾರರಿದ್ದು, 1,16,135 ಮಹಿಳಾ ಮತದಾರರು, 24 ತೃತೀಯ ಲಿಂಗ ಮತದಾರರಿದ್ದಾರೆ. ಒಕ್ಕಲಿಗರು 67 ಸಾವಿರ, ಬ್ರಾಹ್ಮಣರು 65 ಸಾವಿರ, ಎಸ್ಸಿಎಸ್ಟಿ 35 ಸಾವಿರ, ಒಬಿಸಿ 21 ಸಾವಿರ, ಮುಸ್ಲಿಂ 7 ಸಾವಿರ, ಲಿಂಗಾಯತ 4 ಸಾವಿರ ಇತರ 40 ಸಾವಿರ ಮತದಾರರಿದ್ದಾರೆ.

ಈ ಕ್ಷೇತ್ರದ ಸಮಸ್ಯೆಗಳೇನು?:ಹಳೆಯ ಬಡಾವಣೆ ಆಗಿರುವ ಹಿನ್ನೆಲೆ ಕುಡಿಯುವ ನೀರಿನ ಪೂರೈಕೆ ಮಾಡುವ ಪೈಪ್ ಲೈನ್​ಗಳು ಮತ್ತು ಒಳಚರಂಡಿ ಮಾರ್ಗ ಅರ್ಧ ಶತಮಾನದಷ್ಟು ಹಳೆಯದಾಗಿವೆ. ಮರಗಳು ಹೆಚ್ಚಿರುವ ಹಿನ್ನೆಲೆ ರಸ್ತೆಗಳ ಗುಣಮಟ್ಟ ಕಾಪಾಡಿಕೊಳ್ಳುವುದು ಕಷ್ಟಸಾಧ್ಯ. ವಿದ್ಯುತ್, ಒಳಚರಂಡಿ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿರುತ್ತವೆ. ಕೆಲವೆಡೆ ಕಿರಿದಾದ ರಸ್ತೆಗಳಿದ್ದು, ಇತ್ತೀಚಿನ ವರ್ಷಗಳಲ್ಲಿ ಮನೆಗಳು ಹೆಚ್ಚಾಗಿ, ವಾಹನಗಳ ಸಂಖ್ಯೆ ವಿಪರೀತ ಹೆಚ್ಚಾಗಿದೆ.

ಬಸವನಗುಡಿ ಕ್ಷೇತ್ರ

ಇದರಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ದಟ್ಟಣೆ ಸಮಸ್ಯೆ ಅಪಾರವಾಗಿದೆ. ಮೂರು ಸಾರಿ ಸತತವಾಗಿ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿರುವ ರವಿ ಸುಬ್ರಹ್ಮಣ್ಯ ಅಷ್ಟಾಗಿ ಆಸಕ್ತಿ ತೋರಿಲ್ಲ ಎಂಬ ಆರೋಪ ಇದೆ. ಇನ್ನು ಇಲ್ಲಿನ ರಾಘವೇಂದ್ರ ಕೋ ಆಪರೇಟಿವ್​ ಬ್ಯಾಂಕ್​ನಿಂದ ಗ್ರಾಹಕರಿಗೆ ನ್ಯಾಯ ಒದಗಿಸುವ ಹೋರಾಟವೂ ಸೇರಿದಂತೆ ಹಲವು ಸಾಮಾಜಿಕ ಕೆಲಸ ಮಾಡುತ್ತಿರುವ ಎಮ್ಮೆಲ್ಸಿ ಯು.ಬಿ. ವೆಂಕಟೇಶ್​ಗೆ ಕಾಂಗ್ರೆಸ್ ಅವಕಾಶ ನೀಡಿದ್ದು, ಧನಾತ್ಮಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಕುಡಿಯುವ ನೀರಿನ ಪೂರೈಕೆ ವ್ಯತ್ಯಯ, ಕಸ ವಿಲೇವಾರಿ ಸಮಸ್ಯೆ ಅಲ್ಲಲ್ಲಿ ಕಾಣುತ್ತಿದೆ, ಕ್ಷೇತ್ರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸಹ ಕ್ಲಿಷ್ಟಕರವಾಗಿದೆ.

ಹೆಗಡೆ ಗೆಲುವು:ರಾಜ್ಯದಲ್ಲಿ ಮೊದಲ ಕಾಂಗ್ರೆಸೇತರ ಸರ್ಕಾರ ರಚನೆ ಮಾಡಿದ್ದ ರಾಮಕೃಷ್ಣ ಹೆಗಡೆಗೆ ಗೆಲುವಿನ ಉಡುಗೊರೆ ನೀಡಿದ್ದ ಕ್ಷೇತ್ರ ಬಸವನಗುಡಿ. ಉತ್ತರ ಕರ್ನಾಟಕ ಮೂಲಕ ಹೆಗಡೆ 1985 ರಲ್ಲಿ ಬಸವನಗುಡಿಯಿಂದ ಆಯ್ಕೆಯಾಗಿದ್ದರು. 1989ರಲ್ಲಿಯೂ ಇದೇ ಕ್ಷೇತ್ರದ ಜನತೆ ಮತ್ತೊಮ್ಮೆ ಹೆಗಡೆ ಕೈಹಿಡಿದು ಗೆಲುವಿನ ಉಡುಗೊರೆ ನೀಡಿದ್ದರು. ಈವರೆಗೂ 15 ಬಾರಿ ಬಸನಗುಡಿ ಕ್ಷೇತ್ರದ ಚುನಾವಣೆ ನಡೆದಿದೆ. ಇದರಲ್ಲಿ ಬಿಜೆಪಿ 5 ಬಾರಿ, ಕಾಂಗ್ರೆಸ್ 4 ಬಾರಿ ಗೆದ್ದಿದ್ದರೆ, ಜನತಾ ಪಕ್ಷ 3 ಬಾರಿ, ಜನತಾ ದಳ 2 ಬಾರಿ, ಪಕ್ಷೇತರ ಅಭ್ಯರ್ಥಿ 1 ಬಾರಿ ಗೆದ್ದಿದ್ದಾರೆ.

1994 ರಿಂದ ಈವರೆಗೆ ನಡೆದಿರುವ 6 ಚುನಾವಣೆಯಲ್ಲಿ 2004 ರಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿರುವುದು ಬಿಟ್ಟರೆ ಉಳಿದ ಐದು ಬಾರಿ ಅದರಲ್ಲಿಯೂ ಕಳೆದ ಮೂರು ಬಾರಿ ಸತತವಾಗಿ ಬಿಜೆಪಿ ಗೆದ್ದಿದೆ. 2008 ರಲ್ಲಿ ಬಿಜೆಪಿಯ ರವಿಸುಬ್ರಮಣ್ಯ ಕಾಂಗ್ರೆಸ್​ನ ಕೆ ಚಂದ್ರಶೇಖರ್ ವಿರುದ್ಧ, 2013ರಲ್ಲಿ ರವಿಸುಬ್ರಮಣ್ಯ ಜೆಡಿಎಸ್ ಅಭ್ಯರ್ಥಿ ಬಾಗೇಗೌಡ ವಿರುದ್ಧ, 2018 ರಲ್ಲಿ ರವಿಸುಬ್ರಮಣ್ಯ ಜೆಡಿಎಸ್ ನ ಬಾಗೇಗೌಡ ವಿರುದ್ಧ ಗೆಲುವು ಸಾಧಿಸಿದ್ದರು. 2004 ರಲ್ಲಿ ಕೆ. ಚಂದ್ರಶೇಖರ್ ಗೆದ್ದಿದ್ದು ಬಿಟ್ಟರೆ ನಂತರದ ವರ್ಷದಲ್ಲಿ ಕಾಂಗ್ರೆಸ್ ಮೂರನೇ ಸ್ಥಾನ ತಲುಪಿದೆ. ಈ ಸಾರಿ ಬಾಗೇಗೌಡರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್​ನ ಯು.ಬಿ. ವೆಂಕಟೇಶ್​ ಮತ್ತೆ ಕಮಾಲ್ ಮಾಡುತ್ತಾರಾ ಅನ್ನುವುದನ್ನು ಕಾದುನೋಡಬೇಕಿದೆ.

ಈ ಬಾರಿ ಅಭ್ಯರ್ಥಿ ನಿರೀಕ್ಷೆ ಹೀಗಿದೆ :-

ಬಿಜೆಪಿ ಅಭ್ಯರ್ಥಿ ರವಿ ಸುಬ್ಯಹ್ಮಣ್ಯ

ಬಿಜೆಪಿ ಅಭ್ಯರ್ಥಿ ರವಿ ಸುಬ್ಯಹ್ಮಣ್ಯ:ಬಸವನಗುಡಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ರವಿ ಸುಬ್ರಹ್ಮಣ್ಯ ಈಟಿವಿ ಭಾರತ್​ ಜೊತೆ ಮಾತನಾಡಿದ್ದು, ಕ್ಷೇತ್ರದಲ್ಲಿ ಎಲ್ಲರ ಉತ್ತಮ ಸಹಕಾರ ಸಿಗುತ್ತಿದೆ. ವಾತಾವರಣ ಉತ್ತಮವಾಗಿದೆ. ಎಲ್ಲ ಜಾತಿ ಮತ್ತು ವರ್ಗದ ಜನ ನಿಂತರವಾಗಿ ನನ್ನನ್ನು ಆಶೀರ್ವದಿಸಿ ಬೆಂಬಲಿಸುತ್ತಾ ಬಂದಿದ್ದಾರೆ. ಈ ಸಾಲು ನನಗೆ ಯಾವುದೇ ಸ್ಪರ್ಧೆ ಎದುರಾಗುತ್ತಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 11,000 ಮತಗಳನ್ನು ಪಡೆದಿತ್ತು.

ಈ ಸಾರಿ ಅಷ್ಟನ್ನು ಪಡೆದರೂ ಸಾಕು. ಕಳೆದ ಸಾರಿ ಜೆಡಿಎಸ್ ಪಡೆದ ಮತಗಳ ಅರ್ಧದಷ್ಟು ಮತವನ್ನು ಪಡೆಯುವ ಸಾಧ್ಯತೆ ಕಡಿಮೆ ಇದೆ. ಈ ಸಾರಿ ಜನ ಬಿಜೆಪಿಗೆ ಹೆಚ್ಚಿನ ಬಹುಮತ ನೀಡಲಿದ್ದಾರೆ ಎಂಬ ವಿಶ್ವಾಸವಿದೆ. ಮೋದಿ ಅವರ ನಾಯಕತ್ವ ನಮಗೆಲ್ಲರಿಗೂ ಇದೆ. ರಾಜ್ಯದಲ್ಲಿ ಯಡಿಯೂರಪ್ಪ ನಾಯಕತ್ವ ಹಾಗೂ ರಾಜ್ಯ ಸರ್ಕಾರ ರಾಜ್ಯದಲ್ಲಿ ಮಾಡಿರುವ ಕಾರ್ಯಗಳು ನಮಗೆ ಶ್ರೀರಕ್ಷೆಯಾಗಿದೆ. ಕಳೆದ ಮೂರು ಅವಧಿಯಲ್ಲಿ ಕ್ಷೇತ್ರದಲ್ಲಿ ನಾನು ಮಾಡಿರುವ ಕೆಲಸವನ್ನು ಸಹ ಗಮನಿಸಿ ಜನ ನನಗೆ ಬೆಂಬಲಿಸುತ್ತಾರೆ. ರಾಜ್ಯದಲ್ಲಿ 130 ರಿಂದ 135 ಸೀಟುಗಳನ್ನು ಗೆದ್ದು ಭಾರತೀಯ ಜನತಾ ಪಕ್ಷ ಸರ್ಕಾರ ರಚನೆ ಮಾಡಲಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​ ಅಭ್ಯರ್ಥಿ ಯು.ಬಿ. ವೆಂಕಟೇಶ್

ಕಾಂಗ್ರೆಸ್ ಅಭ್ಯರ್ಥಿ ಯು.ಬಿ. ವೆಂಕಟೇಶ್ : ಬಸವನಗುಡಿ ಕಾಂಗ್ರೆಸ್ ಅಭ್ಯರ್ಥಿ ಯು.ಬಿ. ವೆಂಕಟೇಶ್ ಈಟಿವಿ ಭಾರತ್ ಜೊತೆ ಮಾತನಾಡಿ, ಜನಪ್ರತಿನಿಧಿಯಾಗಿ ಜನರಿಂದ ನೇರವಾಗಿ ಆಯ್ಕೆಯಾಗಿ ಜನರ ಪಾಲ ಕಾರ್ಯನಿರ್ವಹಿಸುವ ಉದ್ದೇಶದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಜನ ಬದಲಾವಣೆ ಬಯಸಿತ್ತು ಕ್ಷೇತ್ರದಲ್ಲಿ ಗೆಲುವಿಗೆ ಉತ್ತಮ ಅವಕಾಶ ಇದೆ. ಬಿಜೆಪಿಯಿಂದ ಮೂರು ಸಾರಿ ಗೆಲುವು ಸಾಧಿಸಿದ್ದರು ರವಿ ಸುಬ್ರಹ್ಮಣ್ಯ ಅವರು ನೀಡಿದ್ದು ಕೇವಲ ಭರವಸೆಗಳನ್ನು ಮಾತ್ರ.

ನಾವು ಏನು ಇಲ್ಲದೇ ಅಭಿವೃದ್ಧಿಯ ಪಥದಲ್ಲಿ ಇದ್ದೇವೆ ಇದು ಸತ್ಯಕ್ಕೂ ಸುಳ್ಳಿಗೂ ಇರುವಷ್ಟು ವ್ಯತ್ಯಾಸ ನಾವು ಮತ್ತು ಅವರು ಮಾಡುವ ಕೆಲಸದಲ್ಲಿ ಇದೆ. ಎರಡೂ ರಾಷ್ಟ್ರೀಯ ಪಕ್ಷದಿಂದ ಒಂದೇ ಸಮುದಾಯದ ಅಭ್ಯರ್ಥಿಗಳು ಎನ್ನುವುದು ಪ್ರಶ್ನೆ ಬರುವುದಿಲ್ಲ. ಮಾನವೀಯತೆ ಮೆರೆಯುವುದು ಮುಖ್ಯ. ಜನಪರವಾದ ಕೆಲಸವನ್ನು ಮಾಡಿದರೆ ಜನರೇ ನಮ್ಮನ್ನು ಆಯ್ಕೆ ಮಾಡುತ್ತಾರೆ.

ಜಾತಿ ಮಾತುಗಳ ಹೆಸರಿನಲ್ಲಿ ಮತದಾರರನ್ನು ಬೇರ್ಪಡಿಸುವ ಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಕಾಂಗ್ರೆಸ್​ನ ಗ್ಯಾರಂಟಿ ಸಹ ನನ್ನ ಗೆಲುವಿಗೆ ಸಹಕಾರಿ ಆಗಲಿದೆ. ಜನಪದ ಕೆಲಸಗಳು ಕ್ಷೇತ್ರದಲ್ಲಿ ಆಗಬೇಕು. 2004 ರಲ್ಲಿ ಚಂದ್ರಶೇಖರ್ ಗೆದ್ದು ಮಾಡಿದ ಎಲ್ಲ ಕೆಲಸವನ್ನು ಮುಚ್ಚಿ ಹಾಕಲಾಗಿದೆ. ಆರೋಗ್ಯ ಶಿಕ್ಷಣ ಉದ್ಯಾನ ಕಸದ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ನಿವಾರಿಸುವ ಜವಾಬ್ದಾರಿ ನನ್ನ ಮೇಲೆ ಇದೆ. ಜನರಿಗೆ ಒಂದು ಒಳ್ಳೆಯ ವಾತಾವರಣವನ್ನು ಕ್ಷೇತ್ರದಲ್ಲಿ ಕಲ್ಪಿಸಿ ಕೊಡುವುದು ನನ್ನ ಉದ್ದೇಶ ಎಂದಿದ್ದಾರೆ.

ಇದನ್ನೂ ಓದಿ:ಬಿಟಿಎಂ ಲೇಔಟ್​​ನಲ್ಲಿ ಮತ್ತೆ ಸೋಲಿಲ್ಲದ ಸರದಾರರಾಗುವರೇ ರಾಮಲಿಂಗಾರೆಡ್ಡಿ!

Last Updated : May 5, 2023, 5:30 PM IST

ABOUT THE AUTHOR

...view details