ಬೆಂಗಳೂರು: ಆಡಳಿತ ಪಕ್ಷದ ಪರ ಅಲೆ ಹಾಗೂ ಸಿಎಂ ಪುತ್ರ ವಿಜಯೇಂದ್ರ ಅಬ್ಬರದ ಹಿನ್ನೆಲೆಯಲ್ಲಿ ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ಪಾಳಯದಲ್ಲಿ ಸೋಲಿನ ಆತಂಕ ಶುರುವಾಗಿದೆ.
ಶಾಸಕ ನಾರಾಯಣರಾವ್ ಕೊರೊನಾದಿಂದಾಗಿ ನಿಧನರಾಗಿರುವ ಹಿನ್ನೆಲೆಯಲ್ಲಿ ತೆರವಾಗಿರುವ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಿದ್ಧತೆಯನ್ನು ಕಾಂಗ್ರೆಸ್ ಮಾಡಿಕೊಂಡಿದೆ. ಸ್ಪರ್ಧೆಯ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಪುತ್ರ ಎಮ್ಎಲ್ಸಿ ವಿಜಯ್ ಸಿಂಗ್ ಹಾಗೂ ಬೀದರ್ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕ, ಮಾಜಿ ಸಚಿವ ರಾಜಶೇಖರ್ ಪಾಟೀಲ್ ಸಹೋದರ ವಿಧಾನಪರಿಷತ್ ಸದಸ್ಯ ಚಂದ್ರಶೇಖರ್ ಪಾಟೀಲ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಮರಾಠ ಸಮುದಾಯ ಹಾಗೂ ಲಿಂಗಾಯತ ಮತದಾರರ ಪ್ರಾಬಲ್ಯ ಇರುವ ಬಸವಕಲ್ಯಾಣ ಕ್ಷೇತ್ರದಲ್ಲಿ ಟಿಕೆಟ್ ಗಳಿಸುವ ಪ್ರಯತ್ನದಲ್ಲಿ ನಾರಾಯಣರಾವ್ ಕುಟುಂಬ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಆರ್ಥಿಕ ಹಾಗೂ ಜನಪ್ರಿಯತೆಯ ಕೊರತೆ ನಾರಾಯಣರಾವ್ ಪುತ್ರ ಗೌತಮ್ಗೆ ಎದುರಾಗಿದೆ. ಹಿಂದುಳಿದ ವರ್ಗಗಳ ಪ್ರಮುಖ ನಾಯಕರಾಗಿದ್ದ ಧರಂಸಿಂಗ್ ಪುತ್ರ ವಿಜಯ್ ಸಿಂಗ್ಗೆ ಟಿಕೆಟ್ ಪಡೆಯುವ ಆಸೆ ಇದ್ದರೂ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಓದಿ: ಆಫ್ಲೈನ್ ಬೇಡ, ಆನ್ಲೈನ್ ಪರೀಕ್ಷೆ ನಡೆಸಿ: ಹೈಕೋರ್ಟ್ ಮೆಟ್ಟಿಲೇರಿದ ವಿಟಿಯು ವಿದ್ಯಾರ್ಥಿಗಳು
ಅತ್ಯಂತ ಪ್ರಮುಖವಾಗಿ ಹೆಚ್ಚಿನ ಮತದಾರರಲ್ಲಿ ಒಬ್ಬರಾದ ಲಿಂಗಾಯತ ಸಮುದಾಯದವರಿಗೆ ಮಣೆ ಹಾಕುವ ಅನಿವಾರ್ಯತೆ ಪಕ್ಷಕ್ಕಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಸೋದರ ಚಂದ್ರಶೇಖರ್ ಪಾಟೀಲ್ ಟಿಕೆಟ್ ಗಿಟ್ಟಿಸುವ ಅವಕಾಶ ಹೊಂದಿದ್ದಾರೆ. ಕಾಂಗ್ರೆಸ್ಗೆ ಸುಲಭವಲ್ಲ, ಯಾರೇ ಅಭ್ಯರ್ಥಿಯಾದರೂ ಕಾಂಗ್ರೆಸ್ಗೆ ಗೆಲುವು ಅಷ್ಟು ಸುಲಭದ್ದಲ್ಲ. ಯಾಕೆಂದರೆ ಬಿಜೆಪಿ ಕಡೆಯಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಯತ್ನ ನಡೆಯುತ್ತಿದೆ.
ಮೂಲಗಳ ಪ್ರಕಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಕ್ಷೇತ್ರವನ್ನು ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಈಗಾಗಲೇ ಪ್ರಚಾರ ತಂತ್ರ ಆರಂಭಿಸಿದ್ದಾರೆ. ಈ ಮಧ್ಯೆ ರಾಜ್ಯ ಸರ್ಕಾರ ಸಹ ಮರಾಠ ಹಾಗೂ ಲಿಂಗಾಯತ ಮತ್ತು ವೀರಶೈವ ಅಭಿವೃದ್ಧಿ ನಿಗಮ ಸ್ಥಾಪಿಸಿ ಮತದಾರರ ಒಲವು ಗಿಟ್ಟಿಸಿದೆ. ವಿಜಯೇಂದ್ರ ಅವರೇ ಅಭ್ಯರ್ಥಿಯಾಗುತ್ತಾರೆ ಎಂಬ ಮಾತು ಕೂಡ ಒಂದೆಡೆ ಕೇಳಿಬರುತ್ತಿದ್ದು, ಇನ್ನೊಂದೆಡೆ ಕಳೆದ ಸಾರಿಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಪ್ರಯತ್ನ ಯಾವುದೇ ಇದ್ದರೂ ಸದ್ಯದ ಸ್ಥಿತಿಯಲ್ಲಿ ಬಿಜೆಪಿಗೆ ಗೆಲುವಿನ ಸಾಧ್ಯತೆ ಹೆಚ್ಚಿದೆ ಎಂಬುದು ಕಾಂಗ್ರೆಸ್ ನಾಯಕರ ಬಾಯಿಂದಲೇ ಕೇಳಿ ಬರುತ್ತಿದೆ. ಸೋಲಿನ ಅಂತರವು ನಿರ್ಧಾರ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರು ಈಗಾಗಲೇ ಕ್ಷೇತ್ರದ ಪರಿಸ್ಥಿತಿಯ ಅಧ್ಯಯನ ಮಾಡಿದ್ದು, ಬಹುತೇಕ ಬಿಜೆಪಿ ಪರವಾದ ಅಲೆ ಕ್ಷೇತ್ರದಲ್ಲಿ ಕಾಣುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕಾಂಗ್ರೆಸ್ ನಾಯಕರು ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಕನಿಷ್ಠ 15 ಸಾವಿರ ಮತಗಳ ಅಂತರದಿಂದ ಸೋಲಿಸಲಿದೆ ಎಂಬ ಮಾತನ್ನು ಆಡುತ್ತಿದ್ದಾರೆ.
ಒಟ್ಟಾರೆ ಕಾಂಗ್ರೆಸ್ ಪಕ್ಷ ಈ ಒಂದು ಹತಾಶೆಯಲ್ಲಿ ಇಂದು ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸುವ ಬೆಂಗಳೂರಿನ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಒಂದು ಹಂತದಲ್ಲಿ ಅಭ್ಯರ್ಥಿ ಆಯ್ಕೆ ಅಂತಿಮ ಆಗುವ ನಿರೀಕ್ಷೆ ಇದೆ.