ಬೆಂಗಳೂರು: "ಹೈಕಮಾಂಡ್ನಿಂದ ನನಗೆ ಯಾವುದೇ ರೀತಿಯ ಶೋಕಾಸ್ ನೋಟಿಸ್ ಬಂದಿಲ್ಲ. ನೋಟಿಸ್ ಬಂದಿದೆ ಎನ್ನುವುದು ಕೇವಲ ವದಂತಿ. ನೋಟಿಸ್ ಕೊಟ್ಟಿರುವುದನ್ನು ತೋರಿಸಿದರೆ 10 ಲಕ್ಷ ರೂ ಕೊಡುತ್ತೇನೆ" ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದ ಫ್ರೀಡಂ ಪಾರ್ಕ್ನಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್‌ಗೆ ನೋಟಿಸ್, "ಯತ್ನಾಳ್ ವಿರುದ್ಧ ಕಠಿಣ ಕ್ರಮ ಹಾಗೆ ಹೀಗೆ ಎಂದು ಮಾಧ್ಯಮದಲ್ಲಿ ಬಂತು, ಆದರೆ ನನಗೆ ಯಾವುದೇ ರೀತಿಯ ನೋಟಿಸ್ ಬಂದಿಲ್ಲ. ಅದೆಲ್ಲಾ ಕೇವಲ ವದಂತಿ. ನನಗೆ ನೋಟಿಸ್ ಕೊಟ್ಟಿರೋದನ್ನು ತೋರಿಸಿ ನೋಡೋಣ ಎಂದು ಮಾಧ್ಯಮಗಳನ್ನೇ ಪ್ರಶ್ನಿಸುತ್ತಾ, ನೋಟಿಸ್ ಕೊಟ್ಟಿರೋದನ್ನು ತೋರಿಸಿದರೆ 10 ಲಕ್ಷ ರೂ ಕೊಡುತ್ತೇನೆ" ಎಂದರು.
"ಇಡೀ ಕರ್ನಾಟಕದಲ್ಲಿ ಪಂಚಮಸಾಲಿ ಸಮುದಾಯ ಹರಿದು ಹಂಚಿಹೋಗಿದೆ. ಉಳಿದ ಸಮುದಾಯಗಳು ಹೇಗೆ ಮೀಸಲಾತಿ ಲಾಭ ಪಡೆದಿದೆಯೋ ಅದೇ ರೀತಿ ಪಂಚಮಸಾಲಿ ಸಮುದಾಯಕ್ಕೂ ನೀಡಬೇಕು ಎಂದು ಬಸವಮೃತ್ಯುಂಜಯ ಸ್ವಾಮೀಜಿ ಪ್ರತಿಭಟನೆ ಮಾಡುತ್ತಿದ್ದಾರೆ. ದೆಹಲಿ ಹೈಕಮಾಂಡ್ಗೆ ಹೆದರಿಸಿಯೋ, ಬೆದರಿಸಿಯೋ ಬೇರೆ ಸಮುದಾಯ ಮೀಸಲಾತಿ ಪಡೆದುಕೊಂಡಿದೆ. ಆದರೆ ನಮ್ಮ ಸಮುದಾಯವನ್ನು ಒಡೆಯುವ ಕುತಂತ್ರದ ಕೆಲಸವಾಯಿತು. ಅನೇಕ ವರ್ಷಗಳಿಂದ ನಾವು ಹೋರಾಟ ಮಾಡಿಕೊಂಡು ಸಂಘಟನೆಯಾಗಿದ್ದೇವೆ. ರಾಜ್ಯದಲ್ಲಿ ಯಾರೇ ಮುಖ್ಯಮಂತ್ರಿ ಆಗಬೇಕು ಅಂದರೂ ನಮ್ಮ ಸಮುದಾಯದ ಅವಶ್ಯಕತೆ ಇದೆ" ಎಂದು ಹೇಳಿದರು.
"ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಸ್ವತಃ ಸಿಎಂ ಭರವಸೆ ನೀಡಿದ್ದರು. ಕಾಲಮಿತಿಯನ್ನೂ ತಿಳಿಸಿದ್ದರು. ಆದರೆ ಧಮ್ಕಿ ಹಾಕಿ ಮೀಸಲಾತಿ ಕೇಳಿದರು ಎಂದು ಮಂತ್ರಿಯೊಬ್ಬರು ಹೇಳಿದ್ದಾರೆ. ನಾವೇನು ಧಮ್ಕಿ ಹಾಕಿಲ್ಲ, ತಾಯಿಯಾಣೆ ಮಾಡಿದ್ದೇನೆ ಮೀಸಲಾತಿ ಕೊಡುತ್ತೇನೆ ಎಂದು ಹೇಳಿದ್ದೀರಿ. ಆದರೆ ಆ ಮಾತಿನಲ್ಲಿ ನೀವು ನಿಂತಿಲ್ಲ. ಅಂದು ನಾವು ಸೇರಿದ ಜನ ಚದುರಿಸಬೇಕಿದ್ದರೆ ಗೋಲಿಬಾರ್ ಆಗಬೇಕಿತ್ತು. ಆದರೂ, ನಾವು ಕಾನೂನು ಕೈಗೆ ತೆಗೆದುಕೊಳ್ಳಿಲ್ಲ" ಎಂದರು.
"ಇದೀಗ ಶ್ರೀಗಳ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ. ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳು ನಡೆದುಕೊಳ್ಳಬೇಕು ಎನ್ನುವ ಬೇಡಿಕೆ ಇರಿಸಿಕೊಂಡು ಹೋರಾಟ ಮುಂದುವರೆಸಲಾಗುತ್ತಿದೆ. ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟ ನಿಲ್ಲಲ್ಲ, ಕಣ್ಣೊರೆಸಲು ಮೀಸಲಾತಿಗೆ ಹೊಸ ಪ್ರವರ್ಗ ರಚಿಸಿದ್ದಾರೆ. ಆದರೆ ಅದರಲ್ಲಿ ಯಾವುದೇ ಸ್ಪಷ್ಟತೆ ಇಲ್ಲ, ಹಾಗಾಗಿ ನಮಗೆ ಹೋರಾಟ ಅನಿವಾರ್ಯ" ಎಂದು ತಿಳಿಸಿದರು.
ನಿರಾಣಿ ವಿರುದ್ಧ ಪರೋಕ್ಷ ವಾಗ್ದಾಳಿ: "ನಮ್ಮ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ದೆಹಲಿಗೆ ಹೋದಾಗ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರವರು ನೀವು ಪಂಚಮಸಾಲಿನಾ ಅಂತ ಕೇಳಿದ್ದರಂತೆ, ಪಂಚಮಸಾಲಿಯನ್ನು ಪ್ರಧಾನಿ ಮೋದಿ ಕಿವಿಗೆ ಮುಟ್ಟಿಸುವ ಕೆಲಸವಾಗಿದೆ. ನಮ್ಮ ಸ್ವಾಮೀಜಿ ಆ ನಿಟ್ಟಿನಲ್ಲಿ ಸಂಕಲ್ಪ ಮಾಡಿದ್ದಾರೆ. ಕೆಲವರು ನಾವೇ ಲೀಡರ್ ಅಂತ ಹೇಳುತ್ತಾರೆ. ಲೀಡರ್ ಯಾರು ಅಂತ ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ. ಎಲೆಕ್ಷನ್ ಬಂದರೆ ಎಲ್ಲಾ ಗೊತ್ತಾಗಲಿದೆ" ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೆಸರು ಹೇಳದೇ ಪರೋಕ್ಷ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಬಿಎಸ್ವೈ ಬಗ್ಗೆ ಅಪಾರವಾದ ಗೌರವ ಇದೆ.. ಅವರ ಬಗ್ಗೆ ಮಾತಾಡಬೇಡ ಎಂದಿದ್ದಾರೆ, ನೀವೂ ಪ್ರಶ್ನೆ ಕೇಳಬೇಡಿ: ಯತ್ನಾಳ್